ಪವಿತ್ರ ಆರ್ಥಿಕತೆಯ ಬೇಡಿಕೆ ಈಡೇರದಿದ್ದರೆ ಅಸಹಕಾರ ಚಳವಳಿ: ಪ್ರಸನ್ನ ಹೆಗ್ಗೋಡು

Update: 2019-11-15 10:16 GMT

ಮಂಗಳೂರು, ನ.15: ಸ್ಥಳೀಯರನ್ನೊಳಗೊಂಡ ಕೈಗಾರಿಕೆಗಳಿಗೆ ಚೈತನ್ಯ ತುಂಬುವ ಉದ್ದೇಶದಿಂದ ‘ಪವಿತ್ರ ಆರ್ಥಿಕತೆ’ ಹೆಸರಿನಲ್ಲಿ ಸತ್ಯಾಗ್ರಹ ನಡೆಸುತ್ತಿರುವ ರಂಗ ಕರ್ಮಿ ಪ್ರಸನ್ನ ಹೆಗ್ಗೋಡು,ಬೇಡಿಕೆ ಈಡೇರದಿದ್ದರೆ ಡಿಸೆಂಬರ್ 1ರಿಂದ ಕೇಂದ್ರ ಸರಕಾರದ ವಿರುದ್ಧ ಅಸಹಕಾರ ಚಳವಳಿ ಆರಂಭಿಸುವುದಾಗಿ ಹೇಳಿದ್ದಾರೆ.

ನಗರದ ರೋಶನಿ ನಿಲಯ ಕಾಲೇಜಿನ ಆವರಣದಲ್ಲಿ ಇಂದು ಗಾಂಧಿ 150ನೆ ಚಿಂತನ ಯಾತ್ರೆ, ರೋಶನಿ ನಿಲಯ ಸೋಶಿಯಲ್ ವರ್ಕ್ ಸೂಕಲ್ ಮತ್ತು ಬೆಂಗಳೂರಿನ ಗ್ರಾಮ ಸೇವಾ ಸಂಘದ ಆಶ್ರಯದಲ್ಲಿ ನಡೆಸಲಾದ ಸಂವಾದ ಮತ್ತು ಸತ್ಯಾಗ್ರಹದ ಮುನ್ನೋಟ ಕಾರ್ಯಕ್ರಮದಲ್ಲಿ ಅವರು ಈ ವಿಷಯ ತಿಳಿಸಿದರು.

ಶೇ. 60ರಷ್ಟು ದೈಹಿಕ ದುಡಿಮೆ ಇರುವ, ಶೇ. 60ರಷ್ಟು ಸ್ಥಳೀಯ ಸಂಪನ್ಮೂಲ ಬಳಕೆಯಾಗುವ ಹಾಗೂ ಶೇ. 40ಕ್ಕಿಂತ ಕಡಿಮೆ ಯಂತ್ರೋಪಕರಣಗಳ ಬಳಕೆಯಾಗುವ ಸಣ್ಣ ಕೈಗಾರಿಕೆಗಳ ಉಳಿವಿಗೆ ಒತ್ತಾಯಿಸಿ ಪ್ರಸನ್ನ ಕಾಗೋಡು ತಂಡ ಸತ್ಯಾಗ್ರಹವನ್ನು ಆರಂಭಿಸಿದೆ.

ಸೆಪ್ಟಂಬರ್ ತಿಂಗಳಲ್ಲಿ ಆರಂಭವಾದ ಹೋರಾಟ ಅಕ್ಟೋಬರ್ 2ರಿಂದ ಸತ್ಯಾಗ್ರಹದ ರೂಪವನ್ನು ಪಡೆದಿದೆ. ಹೋರಾಟದ ಭಾಗವಾಗಿ, ಪವಿತ್ರ ಆರ್ಥಿಕ ಕ್ಷೇತ್ರಕ್ಕೆ ಶೂನ್ಯ ತೆರಿಗೆ ವಿಧಿಸಬೇಕು. ಮರು ಹಣಕಾಸು ವ್ಯವಸ್ಥೆಯನ್ನು ಮಾಡಬೇಕು. ಕ್ಷೇತ್ರದ ಸಮಗ್ರ ಸುಧಾರಣೆಗಾಗಿ ಸರಕಾರ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿ ಕೇಂದ್ರ ಸಚಿವ ಸದಾನಂದ ಗೌಡರ ಮೂಲಕ ಕೇಂದ್ರಕ್ಕೆ ಮನವಿ ಪತ್ರವೊಂದನ್ನು ಬರೆಯಲಾಗಿದ್ದು, ಪ್ರತಿಕ್ರಿಯೆಗಾಗಿ ನೀಡಲಾಗಿದ್ದ 15 ದಿನಗಳ ಕಾಲಾವಕಾಶ ಕೊನೆಗೊಂಡಿದೆ. ಡಿಸೆಂಬರ್ 1ರಂದು ಬೆಂಗಳೂರಿನಲ್ಲಿ ಸಮಾವೇಶವನ್ನು ಆಯೋಜಿಸಲಾಗಿದ್ದು, ಅಷ್ಟು ಸಮಯದಲ್ಲಿ ಯಾವುದೇ ಸ್ಪಂದನೆ ದೊರೆಯದಿದ್ದರೆ ಕೇಂದ್ರದ ವಿರುದ್ಧ ಅಸಹಕಾರ ಚಳವಳಿಯನ್ನು ಆರಂಭಿಸುವುದಾಗಿ ಅವರು ಹೇಳಿದರು.

ಇದು ಯಾವುದೇ ರೂಪದಲ್ಲಿ ರಾಜಕೀಯ ಚಳವಳಿ ಅಲ್ಲ ಎಂದು ಹೇಳಿದ ಪ್ರಸನ್ನ ಹೆಗ್ಗೋಡು, ಆರ್ಥಿಕ ಹಿಂಜರಿತವು ಈ ರೀತಿಯ ಚಳವಳಿಗೆ ಯುವಕರನ್ನು ಪ್ರೇರೇಪಿಸುತ್ತದೆ. ಎದುರಾಗಿರುವ ಸಮಸ್ಯೆಯನ್ನು ಎದುರಿಸಲು ಯಾವುದೇ ತಾತ್ವಿಕತೆಯ ಅವಶ್ಯಕತೆ ಇಲ್ಲ. ಬದಲಾಗಿ ಮಿತೃತ್ವದ ಮೂಲಕ ನಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಈ ಪವಿತ್ರ ಆರ್ಥಿಕತೆಯ ಹೋರಾಟದ ಉದ್ದೇಶ ಎಂದವರು ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕಳೆದ 30 ವರ್ಷಗಳಲ್ಲಿ ನೆಲ ಜಲ ಉಳಿಸುವ ನಿಟ್ಟಿನಲ್ಲಿ ಜನರಿಗೆ ಮನವರಿಕೆ ಮಾಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಅದನ್ನು ಜನರಿಗೆ ಮನವರಿಕೆ ಮಾಡುವ ಕೆಲಸ ಆಗಬೇಕಾಗಿದೆ. ಆರ್ಥಿಕ ಬಿಕ್ಕಟ್ಟಿನ ಸಮಸ್ಯೆಯನ್ನು ಪರಿಹರಿಸಬೇಕಾದದ್ದು ನಮ್ಮನ್ನಾಳುವ ಸರಕಾರಗಳು. ಆದರೆ ಅಧಿಕಾರದಲ್ಲಿರುವ ಬಿಜೆಪಿ ತನ್ನ ಸುತ್ತ ಶತ್ರುಗಳನ್ನು ಹುಟ್ಟಿಹಾಕುತ್ತಿದೆ. ಕಾಂಗ್ರೆಸ್‌ಗೆ ತಮ್ಮ ಶತ್ರುಗಳಾಗಲಿ, ಮಿತ್ರರನ್ನಾಗಲಿ ಹುಟ್ಟುಹಾಗಲಾಗದೆ ಗೊಂದಲದಲ್ಲಿದ್ದಾರೆ. ಹಾಗಾಗಿ ಇದರ ಬಗ್ಗೆ ಚಿಂತೆ ಮಾಡದೆ, ಎಲ್ಲಾ ಧರ್ಮಗಳ ಸಂತರು ಹೇಳಿರುವಂತೆ ದುಡಿಮೆಯೇ ಧರ್ಮ ಎಂಬ ನೆಲೆಯಲ್ಲಿ ನಾವು ಪವಿತ್ರ ಆರ್ಥಿಕತೆಯನ್ನು ಗೆಲ್ಲಿಸಬೇಕಾಗಿದೆ ಎಂದು ಅವರು ಹೇಳಿದರು.

ಸಂವಾದದಲ್ಲಿ ಚಿಂತಕ ಲಕ್ಷ್ಮೀ ತೋಳ್ಪಾಡಿ, ಭೌತಶಾಸ್ತ್ರ ಪ್ರಾಧ್ಯಾಪಕ ಸತ್ಯಜಿತ್, ರಾಜೇಂದ್ರ ಉಡುಪಿ, ವಿದ್ಯಾ ದಿನಕರ್, ಮುಸ್ತಫಾ, ಅಬ್ದುಲ್ ಖಲೀಫ್ ಮೊದಲಾದವರು ತಮ್ಮ ಅನಿಸಿಕೆ, ಸವಾಲುಗಳನ್ನು ಪ್ರಸನ್ನ ಹೆಗ್ಗೋಡು ಅವರ ಮುಂದಿರಿಸಿರಿದರು.

ಚಳವಳಿಯು ಯಾವುದೇ ಪಕ್ಷ ರಾಜಕಾರಣದ ಸಂಪರ್ಕವನ್ನು ಹೊಂದಿಲ್ಲ. ಜತೆಗೆ ಯಾವುದೇ ಪಕ್ಷದ ಕಾರ್ಯಕರ್ತರನ್ನೂ ಇದರಿಂದ ದೂರವಿರಿಸಲಾಗಿಲ್ಲ. ನೀವು ನಮ್ಮ ಜತೆಗೂಡಿ, ಪವಿತ್ರ ಆರ್ಥಿಕತೆಯನ್ನು ಜಾರಿಗೆ ತರುವಂತೆ ಪಕ್ಷಗಳ ಮೇಲೆ ನೈತಿಕ ಒತ್ತಡ ಹೇರಿ ಎಂಬ ಕರೆಯನ್ನು ಗ್ರಾಮ ಸೇವಾ ಸಂಘ ಕಾರ್ಯ ನಿರ್ವಹಿಸುತ್ತಿದೆ ಎಂದು ಹೆಗ್ಗೋಡು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News