ದಿಲ್ಲಿ ಮಾಲಿನ್ಯ ಸಮಸ್ಯೆ ಚರ್ಚಿಸಲು ಕರೆದ ಸಭೆಗೆ ಗೈರಾದ ಗಂಭೀರ್, ಹೇಮಾಮಾಲಿನಿ ಸಹಿತ ಹಲವು ಸಂಸದರು

Update: 2019-11-15 17:10 GMT

ಹೊಸದಿಲ್ಲಿ, ನ. 15: ಬಿಜೆಪಿ ಸಂಸದ ಗೌತಮ್ ಗಂಭೀರ ಸಹಿತ ಹೆಚ್ಚಿನ ಸಂಸದರು ಹಾಗೂ ಅಧಿಕಾರಿಗಳು ಪಾಲ್ಗೊಳ್ಳದೇ ಇದ್ದುದರಿಂದ ಹೊಸದಿಲ್ಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ಕುರಿತು ಚರ್ಚಿಸಲು ಶುಕ್ರವಾರ ಇಲ್ಲಿ ಆಯೋಜಿಸಲಾಗಿದ್ದ ಸಂಸದೀಯ ಸ್ಥಾಯಿ ಸಮಿತಿಯ ಸಭೆಯನ್ನು ಮುಂದೂಡಲಾಯಿತು.

ಗೌತಮ್ ಗಂಭೀರ್ ಅಲ್ಲದೆ ದಿಲ್ಲಿಯ ಮೂರು ನಗರಾಡಳಿತದ ಆಯುಕ್ತರು, ಡಿಡಿಎಯ ಉಪಾಧ್ಯಕ್ಷ, ಪರಿಸರದ ಕಾರ್ಯದರ್ಶಿ/ಜಂಟಿ ಕಾರ್ಯದರ್ಶಿ ಹಾಗೂ ಹಲವು ಸಂಸದರು ಸಭೆಯಲ್ಲಿ ಹಾಜರಾಗಿರಲಿಲ್ಲ. ಒಟ್ಟು 30 ಮಂದಿ ಆಹ್ವಾನಿತರಲ್ಲಿ ಕೇವಲ 4 ಮಂದಿ ಮಾತ್ರ ಸಭೆಯಲ್ಲಿ ಹಾಜರಾಗಿದ್ದರು.

ಸಭೆಯಲ್ಲಿ ಹಾಜರಾಗದವರಲ್ಲಿ ಪರಿಸರ ಹಾಗೂ ಹವಾಮಾನ ಬದಲಾವಣೆಯ ಕಾರ್ಯದರ್ಶಿ, ನಟಿ-ರಾಜಕಾರಣಿ, ಮಥುರಾದ ಬಿಜೆಪಿ ಸಂಸದೆ ಹೇಮ ಮಾಲಿನಿ ಕೂಡ ಸೇರಿದ್ದಾರೆ. ಬಿಜೆಪಿಯ ಜಗದಾಂಬಿಕ ಪಾಲ್, ಸಿ.ಆರ್. ಪಾಟೀಲ್, ಎನ್‌ಸಿಯ ಹುಸೈನ್ ಮಸೂದಿ ಹಾಗೂ ಆಪ್‌ನ ಸಂಜಯ್ ಸಿಂಗ್ ಪಾಲ್ಗೊಂಡಿದ್ದರು.

ಸಭೆಯಲ್ಲಿ ಪಾಲ್ಗೊಳ್ಳದ ಪೂರ್ವ ದಿಲ್ಲಿಯ ಲೋಕಸಭಾ ಸಂಸದ ಗೌತಮ್ ಗಂಭೀರ್ ಅವರನ್ನು ಆಪ್ ತರಾಟೆಗೆ ತೆಗೆದುಕೊಂಡಿದೆ. ಸಭೆಯ ಕಾರ್ಯಸೂಚಿಯನ್ನು ಒಂದು ವಾರಗಳ ಹಿಂದೆಯೇ ನೀಡಲಾಗಿದೆ ಹಾಗೂ ಇದು ದಿಲ್ಲಿಯ ವಾಯು ಮಾಲಿನ್ಯ ಕುರಿತ ಸಭೆ ಎಂದು ತಿಳಿಸಲಾಗಿದೆ ಎಂದು ಆಪ್ ಹೇಳಿದೆ.

ವಾಯು ಮಾಲಿನ್ಯದ ಕುರಿತ ಗಂಭೀರ್ ಅವರ ‘ಗಂಭೀರತೆ’ ಕಮೆಂಟ್ರಿ ಬಾಕ್ಸ್‌ಗೆ ಮಾತ್ರ ಸೀಮಿತವಾಗಿದೆಯೇ ? ಎಂದು ಆಪ್ ಪ್ರಶ್ನಿಸಿದೆ. ಇಂದೋರ್‌ನ ಸ್ಥಳೀಯ ಉಪಹಾರ ಗೃಹದಲ್ಲಿ ಗೌತಮ್ ಗಂಭೀರ್ ಆನಂದಿಸುತ್ತಿದ್ದ ಫೋಟೊ ಒಂದನ್ನು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ ಬಳಿಕ ಆಪ್ ಈ ಟೀಕೆ ಮಾಡಿದೆ.

ಈ ನಡುವೆ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್, ಈ ವಿಷಯದ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದಾರೆ. ‘‘ಈ ಬಗ್ಗೆ ಪರಿಶೀಲನೆ ನಡೆಸುವ ಅಗತ್ಯ ಇದೆ. ಪ್ರಸ್ತುತ ಈ ವಿಷಯ ಬಗ್ಗೆ ನನಗೆ ತಿಳಿದಿಲ್ಲ’’ ಎಂದು ಅವರು ತಿಳಿಸಿದ್ದಾರೆ.

‘‘ವಾಯು ಮಾಲಿನ್ಯದ ಕುರಿತು ನಾವು ಯಾವಾಗಲು ಗಂಭೀರರಾಗಿದ್ದೇವೆ. ವಾಯು ಮಾಲಿನ್ಯದ ಸಮಸ್ಯೆ ಎದುರಿಸುತ್ತಿರುವುದು ಹೊಸದಿಲ್ಲಿ ಮಾತ್ರವಲ್ಲ. ಜಂಟಿ ಕ್ರಿಯಾ ಸಮಿತಿ ಹಾಗೂ ಈ ಬಗ್ಗೆ ಕಾರ್ಯ ನಿರ್ವಹಿಸುತ್ತಿರುವ ತಂಡಕ್ಕೆ ನಾನು ಆದೇಶ ನೀಡಲಿದ್ದೇನೆ’’ ಎಂದು ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.

ಕ್ರಿಕೆಟಿಗ-ರಾಜಕಾರಣಿ ಗೌತಮ್ ಗಂಭೀರ್ ಅವರು ಮಧ್ಯಪ್ರದೇಶದ ಇಂದೋರ್‌ನ ಉಪಹಾರ ಗೃಹವೊಂದರಲ್ಲಿ ಜಿಲೇಬಿ ಹಾಗೂ ಪೋಹಾ ತಿನ್ನುತ್ತಿರುವ 2 ಪೋಟೊವನ್ನು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷಣ್ ಟ್ವೀಟ್ ಮಾಡಿದ ಬಳಿಕ ಗೌತಮ್ ಗಂಭೀರ್ ವಿಪರೀತ ಟ್ರೋಲ್‌ಗೆ ಒಳಗಾಗಿದ್ದಾರೆ.

  ಈ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ದಿಲ್ಲಿ ಪೂರ್ವ ಕ್ಷೇತ್ರದಿಂದ ಗೌತಮ್ ಗಂಭೀರ್ ಆಯ್ಕೆಯಾಗಿದ್ದರು. ಹೊಸದಿಲ್ಲಿಯ ವಾಯು ಮಾಲಿನ್ಯ ಕುರಿತು ಇಂದು ನಡೆಯಬೇಕಿದ್ದ ಉನ್ನತ ಮಟ್ಟದ ಸಂಸದೀಯ ಸಮಿತಿಯ ಸಭೆಯಲ್ಲಿ ಅವರು ಪಾಲ್ಗೊಳ್ಳಬೇಕಿತ್ತು. ಆದರೆ, ಪಾಲ್ಗೊಂಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News