ಶೌಚಗುಂಡಿ ಸ್ವಚ್ಛಗೊಳಿಸುತ್ತಿದ್ದ ಕಾರ್ಮಿಕ ಉಸಿರುಗಟ್ಟಿ ಸಾವು

Update: 2019-11-15 11:54 GMT
ಸಾಂದರ್ಭಿಕ ಚಿತ್ರ

ಚೆನ್ನೈ: ನಗರದಲ್ಲಿ ಶೌಚ ಗುಂಡಿ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ 25 ವರ್ಷದ ಯುವಕನೊಬ್ಬ ಮೃತಪಟ್ಟ ಕೆಲವೇ ದಿನಗಳಲ್ಲಿ ತಮಿಳುನಾಡಿನ ಕುಂಬಕೋಣನ್ ಜಿಲ್ಲೆಯಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಮ್ಯಾನ್‍ಹೋಲ್ ಸ್ವಚ್ಛಗೊಳಿಸುವ ವೇಳೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಮೇಲಕ್ಕಾವೇರಿ ನಿವಾಸಿ 55 ವರ್ಷದ ಸಾದಿಕ್ ಬತ್ಶಾ ಮೃತಪಟ್ಟ ಗುತ್ತಿಗೆ ಕಾರ್ಮಿಕ. ಕುಂಬಕೋಣಂ ರೈಲ್ವೆ ನಿಲ್ದಾಣದ ಸಮೀಪ ಕೆಲಸ ನಿರ್ವಹಿಸುತ್ತಿದ್ದಾಗ ಶೌಚಗುಂಡಿಯೊಳಗಿನ ವಿಷಗಾಳಿಯಿಂದಾಗಿ ಅವರು ತಲೆಸುತ್ತಿ ಬಿದ್ದು ನಂತರ ಮೃತಪಟ್ಟಿದ್ದಾರೆ. ರೈಲ್ವೆ ನಿಲ್ದಾಣದ ಸಮೀಪದ ಒಳಚರಂಡಿಯಲ್ಲಿ ಬ್ಲಾಕ್ ಸರಿಪಡಿಸಲು  ಖಾಸಗಿ ಸಂಸ್ಥೆಯೊಂದು ಗುತ್ತಿಗೆದಾರರನ್ನು ನಿಯೋಜಿಸಿತ್ತೆಂದು ತಿಳಿದು ಬಂದಿದೆ.

ಶೌಚಗುಂಡಿಯೊಳಗೆ ಮೊದಲು ಸಾದಿಖ್ ಇಳಿದಿದ್ದು ನಂತರ ಇತರ ಮೂವರು ಒಳಕ್ಕೆ ಹೋಗಲಿದ್ದರು. ಆದರೆ ಸಾದಿಖ್ ಒಳಕ್ಕೆ ಸಿಕ್ಕಿ ಹಾಕಿಕೊಂಡಿದ್ದಾನೆಂದು ತಿಳಿಯುತ್ತಲೇ ಇತರ ಕಾರ್ಮಿಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸುಮಾರು ಎರಡು ಗಂಟೆಗಳ ಶೋಧದ ಬಳಿಕ ಸಾದಿಖ್ ಮೃತದೇಹ ಪತ್ತೆಯಾಗಿದೆ.

ಕಾರ್ಮಿಕರಿಗೆ ಸುರಕ್ಷತಾ ಸಾಧನಗಳನ್ನು ನೀಡದ ಗುತ್ತಿಗೆದಾರನ ವಿರುದ್ಧ ಪೊಲೀಸರು ಸಾದಿಖ್ ತಾಯಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News