'ಭಾರತವನ್ನು ವಿಶ್ವದ ಬಲಿಷ್ಠ ಆರ್ಥಿಕ ದೇಶವಾಗಿಸುವುದು ಎಲ್ಲರ ಹೊಣೆ'

Update: 2019-11-15 15:39 GMT

ಉಡುಪಿ, ನ.15: ತಂತ್ರಜ್ಞಾನದ ಅಸಾಧಾರಣ ಪ್ರಗತಿಯಿಂದಾಗಿ ನಾವೀನ ನಾಲ್ಕನೇ ಕೈಗಾರಿಕಾ ಕ್ರಾಂತಿಯ ಯುಗದಲ್ಲಿದ್ದೇವೆ. ಮುಂಬರುವ ದಶಕಗಳಲ್ಲಿ ಭಾರತವನ್ನು ವಿಶ್ವದ ಬಲಿಷ್ಠ ಆರ್ಥಿಕತೆಯ ದೇಶವನ್ನಾಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಬೆಂಗಳೂರಿನ ಆ್ಯಕ್ಸಿಲರ್ ವೆಂಚುರ್ಸ್‌ ಪ್ರೈವೆಟ್ ಲಿ.ನ ಅಧ್ಯಕ್ಷ ಎಸ್. ಗೋಪಾಲಕೃಷ್ಣನ್ ಹೇಳಿದ್ದಾರೆ.

ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ಶುಕ್ರವಾರ ನಡೆದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ 27ನೇ ಘಟಿಕೋತ್ಸವದ ಮೊದಲ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡುತಿದ್ದರು.

ದೇಶದ ಯುವ ನಾಯಕರುಗಳಾದ ಇಂದಿನ ವಿದ್ಯಾರ್ಥಿಗಳ ಬಗ್ಗೆ ನಮಗೆ ಸಂಪೂರ್ಣ ಭರವಸೆ ಇದೆ. ಇವರಲ್ಲಿ ದೇಶವನ್ನು ಬಲಿಷ್ಠವಾಗಿ ಕಟ್ಟುವ ಸಾಮರ್ಥ್ಯ ಹಾಗೂ ಕೌಶಲ್ಯ ಎರಡೂ ಇವೆ. ನೀವು ಭಾರತವನ್ನು ವಿಶ್ವದ ಬಲಿಷ್ಠ ದೇಶವಾಗಿ ಮಾರ್ಪಾಡು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದೀರಿ ಎಂದು ಗೋಪಾಲಕೃಷ್ಣನ್ ನುಡಿದರು.

ಈಗ ತಮಗೆ ಸುಲಭದಲ್ಲಿ ಸಿಗುತ್ತಿರುವ ಅವಕಾಶಗಳ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದ ಅವರು, ತಂತ್ರಜ್ಞಾನದ ಆವಿಷ್ಕಾರಗಳು ಹಾಗೂ ಕೈಗಾರಿಕೆ, ಆರ್ಥಿಕತೆ ಹಾಗೂ ನಮ್ಮ ಬದುಕಿನಲ್ಲಿ ಅಡೆತಡೆಗಳ ಸರಮಾಲೆಯೇ ಎದುರಾಗುವ ಕುತೂಹಲಕಾರಿ ಕಾಲಘಟ್ಟದಲ್ಲಿ ನಾವಿದ್ದೇವೆ. ಇದು ನಾಲ್ಕನೇ ಕೈಗಾರಿಕಾ ಕ್ರಾಂತಿಯ ಯುಗವಾಗಿದೆ. ಇದರಲ್ಲಿ ತಂತ್ರಜ್ಞಾನದ ಸಂಗಮವೇ ನಡೆದಿದ್ದು, ಇದು ದೈಹಿಕ, ಡಿಜಿಟಲ್ ಹಾಗೂ ಜೈವಿಕ ಕ್ಷೇತ್ರಗಳ ನಡುವಿನ ಎಂದು ಅಂತರವನ್ನು ಅಸ್ಪಷ್ಟಗೊಳಿಸಿದೆ ಕಿೃಶ್ ಹೇಳಿದರು.

ಇಂದು ಜ್ಞಾನ ಎಂಬುದು ಅಸಾಧಾರಣ ವೇಗದಲ್ಲಿ ಬೆಳೆಯುತಿದ್ದು, ಅದನ್ನು ಪರಿಣಾಮಕಾರಿಯಾಗಿ ಬಳಕೆ ಮಾಡುತ್ತಿರುವುದು ಅದ್ಭುತವೆನಿಸಿದೆ. ಅದೇ ರೀತಿ ಕೃತಕ ಬುದ್ದಿಮತ್ತೆ (ಎಐ) ಎಂಬುದು ಸಾರ್ವಕಾಲಿಕ ಶ್ರೇಷ್ಠ ತಂತ್ರಜ್ಞಾನ ಎನಿಸಿ ಕೊಂಡಿದೆ. ಈ ನಿಟ್ಟಿನಲ್ಲಿ ಎಐ ಹಾಗೂ ಆರೋಗ್ಯಕ್ಷೇತ್ರ ನಡುವಿನ ಸಂಯೋಗ ಅತಿ ಮುಖ್ಯ ಎನಿಸಿಕೊಳ್ಳುತ್ತದೆ ಎಂದರು.

ಇಂದು ಪ್ರತಿ 1000 ಮಂದಿಗೆ ಇಬ್ಬರು ವೈದ್ಯರು ಇರಬೇಕೆಂಬುದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಓ)ದ ಶಿಫಾರಸ್ಸಾಗಿದೆ. ಆದರೆ ಭಾರತದಲ್ಲಿ ಈ ಸಂಖ್ಯೆ ಪ್ರತಿ ಸಾವಿರ ಜನಸಂಖ್ಯೆಗೆ ಕೇವಲ 0.6 ಆಗಿದೆ. ಇದೇ ಚೀನದಲ್ಲಿ 1.5 ಆಗಿದ್ದರೆ, ಅಮೆರಿಕದಲ್ಲಿ ಈ ಪ್ರಮಾಣ 2.5 ಆಗಿದೆ. ಡಬ್ಲುಎಚ್‌ಓ ನಿಗದಿ ಪಡಿಸಿದ ಪ್ರಮಾಣ ಮುಟ್ಟಲು ಭಾರತಕ್ಕೀಗ ತುರ್ತಾಗಿ ಎರಡು ಮಿಲಿಯ ವೈದ್ಯರ ಅಗತ್ಯವಿದೆ. ಭಾರತದಲ್ಲಿ ಪ್ರತಿವರ್ಷ ವೈದ್ಯಕೀಯ ಪದವಿ ಪಡೆದು ಹೊರಬರುವವರು 70,000 ಮಾತ್ರ. ಹೀಗಾಗಿ ಸಮಯ ಓಡುತ್ತಿದೆ. ಹೀಗಾಗಿ ನಮಗೆ ವೈದ್ಯರ ಸಂಖ್ಯೆಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಗತ್ಯವೂ ಬಹಳಷ್ಟಿದೆ ಎಂದರು.

ಮೂರು ದಿನಗಳ ಕಾಲ ನಡೆಯುವ ಘಟಿಕೋತ್ಸವದಲ್ಲಿ ಒಟ್ಟು 4177 ಮಂದಿ ವಿವಿಧ ಪದವಿಗಳನ್ನು, ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ. ಮೊದಲ ದಿನವಾದ ಇಂದು ಒಟ್ಟು 1389 ಮಂದಿ ಪದವಿ, ಸ್ನಾತಕೋತ್ತರ ಪದವಿ, ಸೂಪರ್ ಸ್ಪೆಷಾಲಿಟಿ ಹಾಗೂ ಸಂಶೋಧನೆಗಳಿಗಾಗಿ ಪದವಿಗಳನ್ನು ಸ್ವೀಕರಿಸಿದರು.

ವೇದಿಕೆಯಲ್ಲಿ ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್.ಪೈ, ಎಂಇಎಂಜಿಯ ಅಧ್ಯಕ್ಷ ಡಾ.ರಂಜನ್ ಆರ್.ಪೈ, ಪ್ರೊ ವೈಸ್ ಚಾನ್ಸಲರ್‌ ಗಳಾದ ಡಾ.ಪೂರ್ಣಿಮಾ ಬಾಳಿಗಾ, ಡಾ.ಪಿಎಲ್‌ಎನ್‌ಜಿ ರಾವ್, ಡಾ.ತಮ್ಮಯ್ಯ ಸಿ.ಎಸ್. ಉಪಸ್ಥಿತರಿದ್ದರು. ಮಾಹೆಯ ಪ್ರೊಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಘಟಿಕೋತ್ಸವ ಆರಂಭದ ಘೋಷಣೆ ಮಾಡಿದರು. ಕುಲಪತಿ ಡಾ.ಎಚ್.ವಿನೋದ್ ಭಟ್ ಮಾಹೆಯ ಪಕ್ಷಿನೋಟವನ್ನು ನೀಡಿದರು.

ಮಂಗಳೂರು ಕ್ಯಾಂಪಸ್‌ನ ಪ್ರೊ ವೈಸ್ ಚಾನ್ಸಲರ್ ಡಾ.ವಿ.ಸುರೇಂದ್ರ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರೆ, ಮಣಿಪಾಲ ಕೆಎಂಸಿ ಡೀನ್ ಡಾ.ಶರತ್ ರಾವ್ ಅತಿಥಿಗಳನ್ನು ಪರಿಚಯಿಸಿದರು. ರಿಜಿಸ್ಟ್ರಾರ್ ಡಾ.ವಿನೋದ್ ವಿ. ಥಾಮಸ್ ಪ್ರತಿಜ್ಞಾ ವಿಧಿ ಬೋಧಿಸಿ, ಪದವಿ ವಿದ್ಯಾರ್ಥಿಗಳ ವಿವರ ಪ್ರಕಟಿಸಿದರು. ಡಾ.ಗೀತಾ ಮಯ್ಯ ಹಾಗೂ ಡಾ.ಶ್ಯಾಮಲಾ ಹಂದೆ ಚಿನ್ನದ ಪದಕ ಮತ್ತು ಪಿಎಚ್‌ಡಿ ಪಡೆದ ವಿದ್ಯಾರ್ಥಿಗಳ ವಿವರ ನೀಡಿದರು. ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ವಂದಿಸಿದರೆ, ಡಾ.ಶೆರ್ಲಿ ಲೂವಿಸ್ ಸಲಿನ್ಸ್ ಕಾರ್ಯಕ್ರಮ ನಿರೂಪಿಸಿದರು.

ಮೂವರಿಗೆ ಚಿನ್ನದ ಪದಕ

ಘಟಿಕೋತ್ಸವದ ಮೊದಲ ದಿನದಂದು ಮೂವರು ವಿದ್ಯಾರ್ಥಿಗಳು ಡಾ.ಟಿಎಂಎ ಪೈ ಚಿನ್ನದ ಪದಕಗಳನ್ನು ಪಡೆದರು. ಮಂಗಳೂರಿನ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಾಯನ್ಸ್‌ನ ಗೌರವ್ ರಾವತ್ ಹಾಗೂ ರಾಧಿಕಾ ಗುಪ್ತಾ ಬಿಡಿಎಸ್‌ನಲ್ಲಿ, ಮಣಿಪಾಲ ಸ್ಕೂಲ್ ಆಫ್ ಲೈಫ್ ಸಾಯನ್ಸ್‌ನ ಸರಸ್ವತಿ ಸಂಜಯ್ ಚಾವ್ಡಾ ಎಂಎಸ್‌ಸಿ ಮೊಲಿಕ್ಯುಲರ್ ಬಯಾಲಜಿಯಲ್ಲಿ ಈ ಚಿನ್ನದ ಪದಕಗಳನ್ನು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News