ಪುಂಜಾಲಕಟ್ಟೆಗೆ ಒಳಾಂಗಣ ಕ್ರೀಡಾಂಗಣ: ಸಂಸದ ನಳಿನ್ ಭರವಸೆ

Update: 2019-11-16 07:51 GMT

ಬಂಟ್ವಾಳ : ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಇದರ 36ನೇ ವರ್ಷದ ಪ್ರಯುಕ್ತ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಎರಡು ದಿನಗಳ ಕಾಲ ನಡೆಯುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪ್ರಶಸ್ತಿ-ಸ್ವಸ್ತಿಕ್ ಪ್ರೊ ಕಬಡ್ಡಿ ಉತ್ಸವ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಶನಿವಾರ ಜರಗಿತು.

ಕ್ಲಬ್ ಸ್ಥಾಪಕಾಧ್ಯಕ್ಷ, ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಪ್ರಸ್ತಾವಿಸಿ‌ ಮಾತನಾಡಿ, ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಹೆಸರಿನಲ್ಲಿ ಕಬಡ್ಡಿ ಪಂದ್ಯಾಟ ನಡೆಯಲಿದ್ದು, ವಿವಿಧ ಏಳು ವಿಭಾಗದಲ್ಲಿ ಪ್ರೊ ಮಾದರಿಯ ಮ್ಯಾಟ್ ಕಬಡ್ಡಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ದ.ಕ. ಸಂಸದ, ಬಿಜಿಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡಾ  ಆರಂಭ ಸೂರರು ಬಹಳಷ್ಟು ಜನರಿದ್ದಾರೆ. ಆದರೆ, ಕ್ರೀಡಾಸ್ಪೂರ್ತಿಯೊಂದಿಗೆ ನಿರಂತರವಾಗಿ ಸಂಘಟಿಸುವ ಮೂಲಕ ತುಂಗಪ್ಪ ಅವರ ಕಾರ್ಯ ಶ್ಲಾಘನೀಯ ಎಂದರು.

ಜಿಲ್ಲಾಮಟ್ಟದಿಂದ ಒಲಿಂಪಿಕ್ ಕ್ರೀಡಾಪಟುಗಳನ್ನು ಗುರುತಿಸುವ ಕೆಲಸವಾಗುತ್ತಿದ್ದು, ಇದರ ಪ್ರಾಯೋಜಕತ್ವವನ್ನು ಖಾಸಗೀ ಕಂಪೆನಿಗಳು ಮೂಲಕ  ಕ್ರೀಡೆಗೆ ಪ್ರೋತ್ಸಾಹಿಸುತ್ತಿದೆ. ಸ್ವದೇಶಿ, ಮಣ್ಣಿನ ಕ್ರೀಡೆಯನ್ನು ಸ್ವಸ್ತಿಕ್ ಸಂಘಟನೆಯು ಉಳಿಸಿ ಬೆಳೆಸುತ್ತಿರುವುದು ಅಭಿನಂದನೀಯ ಎಂದರು.

ಒಳಾಂಗಣ ಕ್ರೀಡಾಂಗಣ ವ್ಯವಸ್ಥೆಯನ್ನು ನಿರ್ಮಿಸುವಂತೆ ಈ ಭಾಗದ ಜನರ ಬಹುಬೇಡಿಕೆಯಾಗಿದ್ದು, ಸರಕಾರ, ಟ್ರಸ್ಟ್ ಮೂಲಕ ಎಆರ್ ಪಿಎಲ್ ವಿಶೇಷ ಅನುದಾನ ನೀಡುವುದಾಗಿ, ಇದಕ್ಕೆ ಸೂಕ್ತ ಸ್ಥಳ ಗುರುತಿಸುವಂತೆ ಸಂಘಟಕರಿಗೆ ತಿಳಿಸಿದ ಅವರು, ಮದುವೆಯಂತಹ ಸಾಮಾಜಿಕ ಜನಪರ ಕಾಳಜಿ, ಕ್ರೀಡಾಪ್ರತಿಭೆಗಳನ್ನು ಪ್ರಯತ್ನ ನಿರಂತರವಾಗಲಿ ಎಂದು ಹೇಳಿದರು.

ಶಾಸಕ ರಾಜೇಶ್ ನಾಯ್ಕ್ ಅವರು ಕ್ರೀಡಾಂಗಣವನ್ನು ಉದ್ಘಾಟಿಸಿ ಮಾತನಾಡಿ, ಪುಂಜಾಲಕಟ್ಟೆಯಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸುವಂತೆ ಸ್ವಸ್ತಿಕ್ ನಿಂದ ಮನವಿ ಮಾಡಲಾಗಿದ್ದು, ಈ ಸಂಸ್ಥೆಯು ಸತತ 36 ವರ್ಷಗಳಿಂದ ಕ್ರೀಡೆಗೆ ಪ್ರೋತ್ಸಾಹಿಸಿದ ಆದ್ಯತೆಯ ಮೇರೆಗೆ ಬೇಡಿಕೆಯನ್ನು ಮುಂದಿನ ದಿನಗಳಲ್ಲಿ ಈಡೇರಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಬೆಂಗಳೂರು ನ್ಯಾಯಾಧೀಶ ದಿನೇಶ್ ಹೆಗ್ಡೆ ಅವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ವೇದಿಕೆಯಲ್ಲಿ ತಾಪಂ ಸದಸ್ಯ ರಮೇಶ್ ಕುಡ್ಮೇರು, ಕಬಡ್ಡಿ ರೂವಾರಿ ಸುಂದರ್ ರಾಜ್ ಹೆಗ್ಡೆ, ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ, ಕ್ಷೇತ್ರಾಧ್ಯಕ್ಷ ದೇವದಾಸ್ ಶೆಟ್ಟಿ, ಎಲ್ ಸಿ‌ಆರ್ ಕಾಲೇಜಿನ ಪ್ರಾಂಶುಪಾಲ ಪ್ರವೀಣ್, ಕಕ್ಯಪದವು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ದಾಮೋದರ ನಾಯ್ಕ್, ಪ್ರಮುಖರಾದ ಮುಹಮ್ಮದ್, ಚಂದ್ರಶೇಖರ್, ಶಂಕರ್ ಶೆಟ್ಟಿ ಬೆದ್ರಮಾರ್, ಅಕ್ಷತಾ, ಶ್ವಾತಿ ಉಪಸ್ಥಿತರಿದ್ದರು.

ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ ಪಿ, ಪದಾಧಿಕಾರಿಗಳಾದ ಜಯರಾಜ್ ಅತ್ತಾಜೆ , ಪ್ರಾನ್ಸಿಸ್ ವಿ.ವಿ., ರಾಜೇಶ್ ಪಿ., ಸಂತೋಷ್ ಕುಮಾರ್ ಮೂರ್ಜೆ, ಕಾವಳಮೂಡೂರು ಗ್ರಾ.ಪಂ.ಸದಸ್ಯ ಮೋಹನ ಆಚಾರ್ಯ ಉಪಸ್ಥಿತರಿದ್ದರು. ವಿಜಯ ಗೌಡ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಮೊದಲು ಪುಂಜಾಲಕಟ್ಟೆ ಬಸವನ ಗುಡಿ ದೇವಸ್ಥಾನದಿಂದ ಕ್ರೀಡಾಜ್ಯೋತಿಯೊಂದಿಗೆ ಆರಂಭವಾದ ಆಕರ್ಷಕ ಮೆರವಣಿಗೆಯು ಬಂಗಲೆ ಮೈದಾನದಲ್ಲಿ ಸಮಾಪ್ತಿಗೊಂಡಿತು.

ಪ್ರೌಢ, ಪದವಿ ಪೂರ್ವ ಕಾಲೇಜು ಬಾಲಕ-ಬಾಲಕಿಯರ ವಿಭಾಗ, ಮುಕ್ತ ವಿಭಾಗದಲ್ಲಿ ಪುರುಷರ ಮತ್ತು ಮಹಿಳೆಯರ ಕಬಡ್ಡಿ ಪಂದ್ಯಾಟ, ಅಂತರ್ ರಾಜ್ಯ ಮಟ್ಟದ 60 ಕೆ.ಜಿ. ವಿಭಾಗದ ಪುರುಷರ ಕಬಡ್ಡಿ ಪಂದ್ಯಾಟ ನಡೆಯಲಿದೆ. ಅಂತರ್ ರಾಜ್ಯ ಮಟ್ಟದ 60 ಕೆ.ಜಿ. ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ, ಹರಿಯಾಣ , ಗುಜರಾತ್, ಕೇರಳ ಮೊದಲಾದ ರಾಜ್ಯಗಳ ತಂಡಗಳು ಭಾಗವಹಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News