ಮಾದಕ ದ್ರವ್ಯದ ವಿರುದ್ಧ ಜಮಾಅತ್ ಗಳಿಂದ ಜನ ಜಾಗೃತಿ, ಮಸೀದಿಗಳಲ್ಲಿ ಯೂತ್ ಸೆಂಟರ್ ಅಗತ್ಯ: ಸೈಯದ್ ಮುಹಮ್ಮದ್ ಬ್ಯಾರಿ

Update: 2019-11-16 12:05 GMT

ಮಂಗಳೂರು, ನ. 16: ಮುಸ್ಲಿಮ್ ಯುವ ಸಮೂಹವು ಮಾದಕ ದ್ರವ್ಯ ವ್ಯಸನದಲ್ಲಿ ಸಿಲುಕಿ ನಲುಗುತ್ತಿದೆ. ಸಮುದಾಯದ ಭವಿಷ್ಯ ರೂಪಿಸಬೇಕಾಗಿದ್ದ ಯುವಕರು ಹಾದಿ ತಪ್ಪಲು, ಶಿಕ್ಷಣದಿಂದ ವಿಮುಖರಾಗಲು ಮಾದಕ ದ್ರವ್ಯ ವ್ಯಸನವೇ ಪ್ರಮುಖ ಕಾರಣವಾಗಿದೆ. ಹಾಗಾಗಿ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಪ್ರತಿಯೊಂದು‌ ಮುಸ್ಲಿಮ್ ಜಮಾಅತ್ ಮಟ್ಟದಲ್ಲಿ ಮಾದಕ ದ್ರವ್ಯದ ವಿರುದ್ಧ ಜನಜಾಗೃತಿ ಮೂಡಿಸಬೇಕಾಗಿದೆ. ಜಾಥಾದ ಮೂಲಕ ಆಂದೋಲನ ರೂಪಿಸಬೇಕಾಗಿದೆ ಎಂದು ಬ್ಯಾರೀಸ್ ಗ್ರೂಪ್ ನ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಹೇಳಿದರು.

ಬ್ಯಾರೀಸ್ ನಾಲೆಜ್ ಕ್ಯಾಂಪಸ್ ವತಿಯಿಂದ ‘ಸಮುದಾಯ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಜಮಾಅತ್‌ಗಳ ಪಾತ್ರ’ ಎಂಬ ವಿಷಯದ ಕುರಿತು ಶನಿವಾರ ಇನ್ನೋಳಿಯ ಲ್ಯಾಂಡ್‌ ಎಂಡ್‌ನಲ್ಲಿರುವ ಬಿಐಟಿ (ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)ಯಲ್ಲಿ ನಡೆದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಸ್ಲಿಮ್ ಸಮಾಜದ ಇತ್ತೀಚಿನ ಸ್ಥಿತಿಗತಿಗಳ ಬಗ್ಗೆ ಅವಲೋಕಿಸುವಾಗ ತುಂಬಾ ಖೇದವಾಗುತ್ತಿದೆ. ಯುವಕರು ಎಲ್ಲಿ ಎಡವುತ್ತಿದ್ದಾರೆ ಎಂದು ತಿಳಿದುಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.‌ ಇದನ್ನು ಹೀಗೆ ಬಿಟ್ಟರೆ ಸಮುದಾಯ ಒಂದಲ್ಲೊಂದು ದಿನ ಪಶ್ಚಾತಾಪ ಪಡಬೇಕಾದೀತು. ಹಾಗಾಗಿ ಮುಸ್ಲಿಮ್ ಉಲಮಾ-ಉಮರಾಗಳು, ಮಸೀದಿ ಕಮಿಟಿಗಳ ಮುಖ್ಯಸ್ಥರು, ಸ‌ಂಘ ಸಂಸ್ಥೆಗಳ ಪದಾಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಕಾರ್ಯ ನಿರ್ವಹಿಸಬೇಕಾಗಿದೆ. ಬಾಲ್ಯದಿಂದಲೇ ಮೊಬೈಲ್ ಚಟದಿಂದ ದೂರ ಸರಿಸಲು ಪ್ರತಿಯೊಂದು ಮಸೀದಿ- ಮದ್ರಸಗಳನ್ನು ಕೇಂದ್ರೀಕರಿಸಿಕೊಂಡು ಯೂತ್ ಸೆಂಟರ್ ಗಳನ್ನು ಸ್ಥಾಪಿಸಬೇಕಾಗಿದೆ. ಅಲ್ಲಿ ಆಟೋಟ, ಕೌಶಲ ವೃದ್ಧಿ, ಮಾಹಿತಿ ವಿನಿಮಯ, ಚರ್ಚೆಗೆ ಮುಕ್ತ ವಾತಾವರಣ ಕಲ್ಪಿಸಬೇಕು. ಆ ಮೂಲಕ ಸಮುದಾಯದ ಸಬಲೀಕರಣದ ಹೆಜ್ಜೆ ಇಡಬೇಕಾಗಿದೆ ಎಂದು ಸೈಯದ್ ಮುಹಮ್ಮದ್ ಬ್ಯಾರಿ ಅಭಿಪ್ರಾಯಪಟ್ಟರು.

ಪ್ರಪಂಚದಲ್ಲೇ ಮುಸ್ಲಿಮರಿಗೆ ಭಾರತ ಅತ್ಯಂತ ಸುರಕ್ಷಿತ ರಾಷ್ಟ್ರವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲೇ ಹಿಂದೂ‌ ಮುಸ್ಲಿಮರು ತುಂಬಾ ಅನ್ಯೋನ್ಯತೆಯಿಂದಿದ್ದರು. ಅದನ್ನು ಉಳಿಸಿ, ಬೆಳೆಸುವ ಅಗತ್ಯವಿದೆ. ಬ್ರಿಟಿಷರ ಒಡೆದಾಳುವ ನೀತಿಗಳನ್ನು ಅರಿತು ಅದಕ್ಕೆ ವ್ಯತಿರಿಕ್ತವಾಗಿ ‌ನಾವು ಕೆಲಸ ಮಾಡಬೇಕಿದೆ. ಅಂದರೆ ಇತರ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂದು ಸ್ಪಷ್ಟ ಗುರಿಯೊಂದಿಗೆ‌ ಮುನ್ನುಗ್ಗಿದರೆ ಯಶಸ್ಸು ಸಾಧ್ಯವಿದೆ. ನನಗೆ ನನ್ನ ತಂದೆ, ಅಜ್ಜ ಕಲಿಸಿಕೊಟ್ಟ ಸೌಹಾರ್ದದ ಪಾಠ, ಜೀವನಾನುಭವದಿಂದ ನಾಡಿನೆಲ್ಲೆಡೆ ಶಿಕ್ಷಣ ಸಂಸ್ಥೆಯನ್ನು ಕಟ್ಟಲು ಸಾಧ್ಯವಾಯಿತು ಎಂದ ಸೈಯದ್ ಮುಹಮ್ಮದ್ ಬ್ಯಾರಿ, ಯುವ ಸಮೂಹವನ್ನು ಎಲ್ಲಾ ಪಿಡುಗಿನಿಂದ ರಕ್ಷಿಸಲು ನಾವಿಟ್ಟ ಹೆಜ್ಜೆಗೆ‌ ಸಮುದಾಯದ ಸರ್ವರೂ ಕೈ ಜೋಡಿಸಬೇಕಿದೆ ಎಂದರು.

‘ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆ ಹಾಗೂ ಸವಾಲು’ಗಳ ಬಗ್ಗೆ ಮಾತನಾಡಿದ ಬಿಐಟಿ ಪಾಲಿಟೆಕ್ನಿಕ್ ನಿರ್ದೇಶಕ ಡಾ. ಅಝೀಝ್ ಮುಸ್ತಫಾ ಕ್ರಿ.ಶ. 1580ರವರೆಗೂ ಮುಸ್ಲಿಂ ಸಮಾಜ ರಾಷ್ಟ್ರಕ್ಕೆ ನಾನಾ ರೀತಿಯ ಕೊಡುಗೆ ನೀಡಿದೆ. ಆದರೆ ಇತ್ತೀಚೆಗೆ ನಮ್ಮ ಕೊಡುಗೆ ನಿರೀಕ್ಷೆಯಷ್ಟಿಲ್ಲ. ಎಲ್ಲಿಯವರೆಗೆ ನಾವು ಉತ್ಪಾದಕರಾಗದೆ ಕೇವಲ ಬಳಕೆದಾರರಾಗುತ್ತೇವೆಯೋ ಅಲ್ಲಿಯವರೆಗೆ ನಾವು ಹಿಂದುಳಿಯುತ್ತೇವೆ. ಹಾಗಾಗಿ ಸಮಾಜ ಕಟ್ಟುವ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆಯರಾಗದೆ ತಂತ್ರಜ್ಞಾನ ಯುಗಕ್ಕೆ ಹೊಂದಿಕೊಂಡು ಶಿಕ್ಷಣದಲ್ಲಿ‌ ಹೊಸತನ ಕಂಡುಕೊಳ್ಳಬೇಕಿದೆ ಎಂದರು.

‘ವ್ಯಕ್ತಿತ್ವ ಹಾಗೂ ಪರಸ್ಪರ ಸಂಬಂಧಗಳನ್ನು ರೂಪಿಸುವ’ ಬಗ್ಗೆ ಮಾತನಾಡಿದ ಡಾ. ಎಸ್. ಅಬ್ದುಲ್ ರಹ್ಮಾನ್ ಇಂಜಿನಿಯರ್, ಮತೀಯವಾದ, ದ್ವೇಷ ಹಬ್ಬುವುದು ಇಸ್ಲಾಮಿನ ಲಕ್ಷಣವಲ್ಲ. ಇಸ್ಲಾಮ್ ಯಾವತ್ತೂ ಯಾರನ್ನೂ ದ್ವೇಷಿಸಲು‌ ಕಲಿಸಿಲ್ಲ. ದ್ವೇಷ ಎಂಬುದು ವಿಷಕ್ಕೆ ಸಮಾನವಾಗಿದೆ. ಯುವ ಸಮೂಹವು ಇತರ ಸಮುದಾಯದೊಂದಿಗೆ ಸೌಹಾರ್ದದಿಂದಿರಲು ನಾವು ಪ್ತೋತ್ಸಾಹಿಸಬೇಕಿದೆ. ಅದು ನಮ್ಮ ದೌರ್ಬಲ್ಯವಲ್ಲ, ಔದಾರ್ಯವಾಗಿದೆ ಎಂದರು.

ವೃತ್ತಿಮಾರ್ಗದರ್ಶನ, ವಿದ್ಯಾರ್ಥಿವೇತನ, ಉದ್ಯೋಗವಕಾಶಗಳ ಬಗ್ಗೆ ಡಾ. ಮುಸ್ತಫಾ ಬಸ್ತಿಕೋಡಿ ಮಾಹಿತಿ ನೀಡಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಬ್ಯಾರೀಸ್ ಗ್ರೂಪ್‌ನ ಅಧ್ಯಕ್ಷ ಸೈಯ್ಯದ್ ಮುಹಮ್ಮದ್ ಬ್ಯಾರಿ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗೆ ಶಿಕ್ಷಣವೇ ಏಕಮಾತ್ರ ಸಾಧನವಾಗಿದೆ. ಈ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯ ಕಳೆದ ಹಲವು ವರ್ಷಗಳಿಂದ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಿದೆ. ಇದರ ಹೊರತಾಗಿಯೂ ಸಮುದಾಯದ ಮಾದಕ ವ್ಯಸನ ಹಾಗೂ ಶಿಕ್ಷಣದಿಂದ ವಂಚಿತರಾಗುವಂತಹ ಅಥವಾ ಸಣ್ಣ ಪುಟ್ಟ ಕಾರಣಗಳಿಗೆ ಅರ್ದದಲ್ಲೇ ಶಿಕ್ಷಣವನ್ನು ಮೊಟಕುಗೊಳಿಸುವಂತಹ ಸವಾಲುಗಳನ್ನು ಎದುರಿಸುತ್ತಿದೆ. ಸಮುದಾಯದ ಅಭಿವೃದ್ಧಿಗಾಗಿನ ಸರಕಾರದ ಹಲವಾರು ಸೌಲಭ್ಯಗಳ ಬಗೆಗಿನ ಜಾಗೃತಿಯ ಕೊರತೆಯನ್ನೂ ಸಮುದಾಯ ಎದುರಿಸುತ್ತಿರುವುದರಿಂದ ಬ್ಯಾರೀಸ್ ಗ್ರೂಪ್ ಈ ಕಾರ್ಯಕ್ರಮಕ್ಕೆ ಮುಂದಾಗಿದೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಜಿಲ್ಲೆಯ ಅನೇಕ ಮಸೀದಿಗಳ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಖತೀಬರು, ಸಮುದಾಯದ ಮುಖಂಡರು ಪಾಲ್ಗೊಂಡು ಅನಿಸಿಕೆಗಳನ್ನು‌ ವ್ಯಕ್ತಪಡಿಸಿದರು.

ನಿಹಾಲ್ ಮತ್ತು‌ ತಂಡ ಧ್ಯೇಯಗೀತೆ ಹಾಡಿದರು. ಇಮ್ರಾನ್ ಮತ್ತು‌ ತಂಡ ರಾಷ್ಟ್ರಗೀತೆ ಹಾಡಿದರು.

ಕೋಡಿ ಕುಂದಾಪುರದ ಗ್ರೀನ್ ಮಸ್ಜಿದ್ ಎಂದೇ ಪರಿಗಣಿಸಲ್ಪಟ್ಟ ಬದ್ರಿಯಾ ಜುಮಾ ಮಸ್ಜಿದ್ ನ ಸಾಕ್ಷ್ಯಚಿತ್ರ ಮತ್ತು ಬಿಐಟಿ/ಬೀಡ್ಸ್ ಕುರಿತ ಸಾಕ್ಷ್ಯಚಿತ್ರವನ್ನು  ಪ್ರದರ್ಶಿಸಲಾಯಿತು.

ಬಿಐಟಿ ಪ್ರಾಂಶುಪಾಲ ಡಾ. ಎಸ್.ಐ. ಮಂಜೂರ್ ಬಾಷಾ ಸ್ವಾಗತಿಸಿದರು. ಮುಹಮ್ಮದ್‌ ಮುಸಾಬ್ ಅನ್ಸಾರಿ ಕಿರಾಅತ್‌ ಪಠಿಸಿದರು. ಬಿ.ಎ. ಮುಹಮ್ಮದ್ ಅಲಿ‌ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News