ಮೊಬೈಲ್ ಕವರ್ ಒಳಗೆ ತುಳಸಿ ಎಲೆ ಇಟ್ಟರೆ ರೇಡಿಯೇಶನ್ ಇರುವುದಿಲ್ಲ: ಉಡುಪಿಯಲ್ಲಿ ಬಾಬಾ ರಾಮದೇವ್

Update: 2019-11-16 14:08 GMT

ಉಡುಪಿ, ನ.16: ತುಳಸಿ ದಳಕ್ಕೆ ವಿದ್ಯುನ್ಮಾನ ಉಪಕರಣಗಳಲ್ಲಿರುವ ವಿಕಿರಣಗಳ (ರೇಡಿಯೇಶನ್) ದುಷ್ಪರಿಣಾಮಗಳನ್ನು ತಡೆಗಟ್ಟುವ ಶಕ್ತಿ ಇದೆ ಎಂದು ಯೋಗಗುರು ಬಾಬಾ ರಾಮ್‌ದೇವ್ ಹೇಳಿದ್ದಾರೆ.

ಪರ್ಯಾಯ ಶ್ರೀಪಲಿಮಾರು ಮಠ ಹಾಗೂ ಹರಿದ್ವಾರದ ಪತಂಜಲಿ ಯೋಗ ಪೀಠ ಟ್ರಸ್ಟ್‌ಗಳ ಜಂಟಿ ಆಶ್ರಯದಲ್ಲಿ ಶನಿವಾರ ಆರಂಭಗೊಂಡ ಐದು ದಿನಗಳ ಯೋಗ ಚಿಕಿತ್ಸೆ ಮತ್ತು ಯೋಗ ಶಿಬಿರದಲ್ಲಿ ಮಾತನಾಡಿದ ಅವರು, ತಾನು ಇದೇ ಮೊದಲ ಬಾರಿಗೆ ತುಳಸಿಯ ವಿಕಿರಣ ನಿರೋಧಕ ಶಕ್ತಿಯನ್ನು ಬಹಿರಂಗಪಡಿಸುತ್ತಿದ್ದೇನೆ ಎಂದರು.

ಎಲ್ಲ ಮೊಬೈಲ್ ಸೆಟ್‌ಗಳಲ್ಲಿ ರೇಡಿಯೇಶನ್ ಇದ್ದೇ ಇರುತ್ತದೆ. ಒಂದು ವೇಳೆ ಮೊಬೈಲ್ ಕವರ್ ಒಳಗೆ ಒಂದು ತುಳಸಿ ಎಲೆ ಕೊಡಿಯನ್ನು ಸಿಕ್ಕಿಸಿದರೆ ರೇಡಿಯೇಶನ್ ಇಲ್ಲವಾಗುತ್ತದೆ ಎಂದವರು ಪ್ರಾತ್ಯಕ್ಷಿಕೆಯೊಂದಿಗೆ ಮಾಡಿ ತೋರಿಸಿದರು. ಮೊಬೈಲ್ ಮಾತ್ರವಲ್ಲದೆ ಲ್ಯಾಪ್‌ಟಾಪ್, ಟಿವಿ, ಯಾವುದೇ ತರಹದ ಎಲೆಕ್ಟ್ರಾನಿಕ್ಸ್ ಉಪಕರಣಗಳಲ್ಲಿ ಹರಿಯುವ ರೇಡಿಯೇಶನ್‌ನ್ನು ತಡೆಗಟ್ಟಲು ತುಳಸಿ ದಳ ಅತ್ಯುತ್ತಮ ಮಾಧ್ಯಮ ಎಂದರು.

ಪರ್ಯಾಯ ಶ್ರೀಪಲಿಮಾರು ಶ್ರೀ ಪ್ರತಿದಿನ ಶ್ರೀಕೃಷ್ಣನಿಗೆ ನಡೆಸುತ್ತಿರುವ ಲಕ್ಷ ತುಳಸಿ ಅರ್ಚನೆ ಮಾಡುವುದೂ ಒಂದು ವಿಜ್ಞಾನವೇ. ದೇವರಿಗೆ ನಿವೇದನೆಯಾದ ತುಳಸಿಯನ್ನು ಪ್ರಸಾದ ರೂಪವಾಗಿ ಬಳಸುವುದೂ ವೈಜ್ಞಾನಿಕವೇ ಆಗಿದೆ. ಆದುದರಿಂದ ಪ್ರತಿ ಮನೆಗಳಲ್ಲಿ ತುಳಸಿ ಗಿಡಗಳನ್ನು ಬೆಳೆಸುವುದು ಅತಿ ಅಗತ್ಯ ಎಂದು ರಾಮ್‌ದೇವ್ ವಿಶ್ಲೇಷಿಸಿದರು.

ಚೀನಿ (ಸಕ್ಕರೆ), ಮೈದಾ ಬಿಟ್ಟುಬಿಡಿ: ಹಿಂದಿಯಲ್ಲಿ ಚೀನಿ ಅಂದರೆ ಸಕ್ಕರೆ. ಸಕ್ಕರೆಯೊಂದಿಗೆ ಮೈದಾ, ಚಾಕ್ಲೇಟ್ ತಿನ್ನುವುದು, ಬಳಕೆಯನ್ನು ನಿಲ್ಲಿಸಿ. ಸಕ್ಕರೆ ಹಾಗೂ ಮೈದಾ ಎರಡೂ ಬಿಳಿ ವಿಷಗಳು ಎಂದವರು ನುಡಿದರು. ಚೀನಿಯೊಂದಿಗೆ ಚೀನಾ ದೇಶದ ಉತ್ಪನ್ನಗಳನ್ನೂ ಕೈಬಿಡಿ ಎಂದು ನೆರೆದವರಿಗೆ ಕಿವಿಮಾತು ಹೇಳಿದರು.

ಯೋಗ ಚಿಕಿತ್ಸೆ ಮತ್ತು ಯೋಗ ಶಿಬಿರದ ಮೊದಲ ದಿನ ವೇದಿಕೆಯಲ್ಲಿ ಯೋಗ ಪ್ರಾತ್ಯಕ್ಷಿಕೆ ನೀಡುತ್ತಲೇ ಮಧ್ಯೆ ಮಧ್ಯೆ ಯೋಗಾಸನ ಹಾಗೂ ಆರೋಗ್ಯ ಟಿಪ್ಸ್‌ಗಳನ್ನು ನೀಡುತಿದ್ದರು. ಅಮೃತ ಬಳ್ಳಿಗೆ ಕ್ಯಾನ್ಸರ್ ಸಹಿತ ನೂರು ರೋಗಗಳನ್ನು ನಿವಾರಿಸುವ ಶಕ್ತಿ ಇದೆ. ಇದೇ ರೀತಿ ಅಲವೇರಾ ಕೂಡ ಪರಿಣಾಮಕಾರಿ ಎಂದವರು ನುಡಿದರು.

ಸಕ್ಕರೆ ಬದಲು ಬೆಲ್ಲದ ರಸಗುಲ್ಲ ಸೇವಿಸಿ. ಉಪ್ಪಿನ ಬದಲು ಸೈಂಧವ ಲವಣ ಉಪಯೋಗಿಸಿ. ಊಟದ ಒಂದು ಗಂಟೆ ಮೊದಲು, ಊಟದ ಒಂದು ಗಂಟೆ ನಂತರ ನೀರು ಸೇವಿಸಿ. ಹಣ್ಣುಗಳನ್ನು ಊಟಕ್ಕೆ ಮೊದಲೇ ಸೇವಿಸಿ. ವಿವಿಧ ತರಹದ ತರಕಾರಿಗಳನ್ನು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಸೇವಿಸಿ. ಖಾಲಿ ಹೊಟ್ಟೆಗೆ ಒಂದು ಚಮಚ ಶುದ್ಧ ತೆಂಗಿನ ಎಣ್ಣೆ ಸೇವಿಸಿದರೆ ಉತ್ತಮ ಎಂದರು.

ವಿದೇಶೀ ಉತ್ಪನ್ನಗಳಲ್ಲಿರುವ ಆರೋಗ್ಯ ಹಾನಿಕರ ವಸ್ತುಗಳನ್ನು ಮನಗಂಡೆ ನಾನು ಸ್ವದೇಶೀ ಉತ್ಪನ್ನಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಎಂದು ರಾಮ್‌ದೇವ್ ತಿಳಿಸಿದರು.

ರಾಜ್ಯ ಪತಂಜಲಿ ಸಂಸ್ಥೆಗಳ ಪ್ರಭಾರಿ ಭವರ್‌ಲಾಲ್ ಆರ್ಯ ಕಾರ್ಯಕ್ರಮ ನಿರ್ವಹಿಸಿ, ಜಿಲ್ಲಾ ಸಂರಕ್ಷಕ ಬಾಲಾಜಿ ರಾಘವೇಂದ್ರ ಆಚಾರ್ಯ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News