‘ಸ್ಯಾಂಡ್ ಬಝಾರ್’ನಲ್ಲಿ ಮಾತ್ರ ಮರಳು ಪೂರೈಕೆ: ಡಿಸಿ

Update: 2019-11-16 15:30 GMT

ಮಂಗಳೂರು, ನ.16: ದ.ಕ. ಜಿಲ್ಲೆಯಲ್ಲಿ ನಡೆಯುವ ಕಾಮಗಾರಿಗಳಿಗೆ ಹಾಗೂ ಜನಸಾಮಾನ್ಯರಿಗೆ ನಿರ್ದಿಷ್ಟ ಬೆಲೆ, ನಿಗದಿತ ಸಮಯದಲ್ಲಿ ಮರಳು ಪೂರೈಕೆಯಾಗುವ ನಿಟ್ಟಿನಲ್ಲಿ dksandbazaar.com ಆ್ಯಪ್‌ನ್ನು ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಿಂದ ರಚಿಸಲಾಗಿದೆ. ಆ್ಯಪ್ ಮೂಲಕ ಮಾತ್ರ ಮರಳು ಪೂರೈಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಅಧ್ಯಕ್ಷೆ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಈ ಆ್ಯಪ್ 2019ನೇ ಸಾಲಿನ ಮೇ 22ರಿಂದ ಕಾರ್ಯಾರಂಭ ಮಾಡುತ್ತಿದೆ. ಆ್ಯಪ್ ಮೂಲಕ ಬುಕ್ ಮಾಡಿದ 48 ಗಂಟೆಗಳಲ್ಲಿ ಗ್ರಾಹಕರಿಗೆ ಮರಳನ್ನು ಪೂರೈಕೆ ಮಾಡಲಾಗುತ್ತಿದೆ. ಇದುವರೆಗೆ 11,466 ಬೇಡಿಕೆಗಳು ಸ್ವೀಕೃತವಾಗಿದ್ದು, 11,028 ಬೇಡಿಕೆಗಳಿಗೆ ಮರಳನ್ನು ಆ್ಯಪ್ ಮೂಲಕ ಯಶಸ್ವಿಯಾಗಿ ಪೂರೈಸಲಾಗಿದೆ ಎಂದು ಹೇಳಿಕೆಯಲ್ಲಿ ಜಿಲ್ಲಾಧಿಕಾರಿ ತಿಳಿಸಿದರು.

ಪ್ರಸ್ತುತ ತುಂಬೆ ಡ್ಯಾಂನಲ್ಲಿ ಹೂಳೆತ್ತುವಿಕೆಯಿಂದ ಬಂದಂತಹ ಮರಳನ್ನು ಹಾಗೂ ಸಿಆರ್‌ಝೆಡ್ (ಕರಾವಳಿ ನಿಯಂತ್ರಣ ವಲಯ) ಪ್ರದೇಶದಲ್ಲಿ ಗುರುತಿಸಿರುವ ಮರಳು ದಿಬ್ಬಗಳಿಂದ ತೆರವುಗೊಳಿಸಿದ ಮರಳನ್ನು ಆ್ಯಪ್ ಮೂಲಕ ಗ್ರಾಹಕರಿಗೆ ಪೂರೈಸಲಾಗುತ್ತಿದೆ ಎಂದಿದ್ದಾರೆ.

ಮರಳಿನ ಮಾರಾಟ ದರ: ಸಿಆರ್‌ಝೆಡ್ ಪ್ರದೇಶದಲ್ಲಿನ ಮರಳಿನ ಪ್ರತಿ ಲೋಡ್‌ಗೆ 5,500 ರೂ., ತುಂಬೆ ಡ್ಯಾಂನಲ್ಲಿ ಹೂಳೆತ್ತುವಿಕೆಯಿಂದ ಬಂದ ಮರಳಿನ ಪ್ರತಿ ಲೋಡ್‌ಗೆ 4,830 ರೂ. ದರ ವಿಧಿಸಲಾಗುತ್ತಿದೆ. ಕ್ರೆಡೈ, ಸಿವಿಲ್ ಕಂಟ್ರಾಕ್ಟರ್ಸ್‌ ಅಸೋಸಿಯೇಶನ್, ವಾಹನ ಮಾಲಕರು ಹಾಗೂ ಎಲ್ಲ ತಾತ್ಕಾಲಿಕ ಪರವಾನಿಗೆದಾರರೊಂದಿಗೆ ಇತ್ತೀಚೆಗೆ ಸಭೆ ನಡೆಸಿ ಅಹವಾಲು ಹಾಗೂ ಬೇಡಿಕೆಗಳನ್ನು ಸ್ವೀಕರಿಸಲಾಗಿದೆ. ಪ್ರಸ್ತುತ ಆ್ಯಪ್‌ನಲ್ಲಿ ಕೆಲ ಮಾರ್ಪಾಟುಗಳನ್ನು ಮಾಡಿ ಬಲ್ಕ್ ಆರ್ಡರ್‌ಗಳನ್ನು ಸ್ವೀಕರಿಸಲಾಗುತ್ತಿದೆ ಎಂದರು.

ಜಿಲ್ಲೆಯ ಜನಸಾಮಾನ್ಯರು ಸ್ಯಾಂಡ್ ಬಝಾರ್ ಆ್ಯಪ್‌ನಲ್ಲಿ ನೋಂದಾಯಿಸುವುದು ಹಾಗೂ ಆ್ಯಪ್ ಬಳಸುವ ವಿಧಾನದ ಬಗ್ಗೆ ಮಾಹಿತಿಯನ್ನು ತಿಳಿಸಲು ಆಯಾ ಗ್ರಾಮ ಪಂಚಾಯತ್‌ಗಳಲ್ಲಿ ಕ್ರಮ ಕೈಗೊಳ್ಳುವಂತೆ ಎಲ್ಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಕೇವಲ ಆ್ಯಪ್ ಮೂಲಕ ಮಾತ್ರ ಮರಳನ್ನು ಪೂರೈಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಅಧ್ಯಕ್ಷೆ ಸಿಂಧೂ ಬಿ. ರೂಪೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News