ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ: ಸಂಸದ ನಳಿನ್

Update: 2019-11-16 16:30 GMT

ಮಂಗಳೂರು, ನ.16: ಸ್ವಚ್ಛ, ಭ್ರಷ್ಟಾಚಾರ ರಹಿತ, ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೆಯ ಆಡಳಿತವನ್ನು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೀಡಲಿದೆ. ಪಕ್ಷದ ಗೌರವ, ನಂಬಿಕೆ, ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಮನಪಾದ ನೂತನ ಸದಸ್ಯರು ಕಾರ್ಯನಿರ್ವಹಿಸಿ ನಗರದ ಸರ್ವತೋಮುಖ ಅಭಿವೃದ್ಧಿಗೆ ದುಡಿಯಬೇಕು ಎಂದು ಸಂಸದ, ಬಿಜೆಪಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.

ಮಂಗಳೂರು ಮಹಾನಗರ ಪಾಲಿಕೆಗೆ ಆಯ್ಕೆಯಾದ ಬಿಜೆಪಿಯ ನೂತನ ಸದಸ್ಯರಿಗೆ ಬಿಜೆಪಿ ವತಿಯಿಂದ ನಗರದ ಕದ್ರಿ ಮೈದಾನ ದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಥಳೀಯ ಬಿಜೆಪಿ ಸಂಘಟನೆಯ ಶೈಲಿಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ನಾನು ರಾಜ್ಯಾಧ್ಯಕ್ಷನಾಗಿ ಆಯ್ಕೆಗೊಂಡ ಸಂದರ್ಭ ಹೇಳಿದ್ದೆ. ಮನಪಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಮಂಗಳೂರಿನಲ್ಲಿ ಪಕ್ಷದ ಸಂಘಟನಾ ಸಾಮರ್ಥ್ಯವನ್ನು ತೋರಿಸಿಕೊಟ್ಟಿದೆ. ನೂತನ ಸದಸ್ಯರು ಮುಂದಿನ ಐದು ವರ್ಷ ಮನಪಾದ ಅಭಿವೃದ್ಧಿಗೆ ಗಮನ ನೀಡಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಬಿಜೆಪಿ ವ್ಯಕ್ತಿ ಆಧಾರಿತ ಪಕ್ಷವಲ್ಲ. ಕಾರ್ಯಕರ್ತರ ಪಕ್ಷ. ಪಕ್ಷದ ಕಾರ್ಯಕರ್ತರ ಶ್ರಮದಿಂದ ಮನಪಾದಲ್ಲಿ ಗೆಲುವು ನಮ್ಮದಾಗಿದೆ. ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ನಳಿನ್ ಕುಮಾರ್ ಕಟೀಲು ಅವರು ಜೋಡೆತ್ತುಗಳಂತೆ ಪಕ್ಷವನ್ನು ಮುನ್ನಡೆಸಿದರೆ, ಮಂಗಳೂರಿನಲ್ಲಿ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ಅವರು ಜೋಡೆತ್ತುಗಳಾಗಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ ಎಂದರು.

ಶಾಸಕ ಡಾ.ಭರತ್ ಶೆಟ್ಟಿ ಮಾತನಾಡಿ, ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಮಾತ್ರ ಮಂಗಳೂರು ಅಭಿವೃದ್ಧಿ ಆಗಿತ್ತು. ಯಡಿಯೂರಪ್ಪ ನೀಡಿದ ಹಣದಿಂದ ಮಂಗಳೂರು ರಸ್ತೆಗಳು ಕಾಂಕ್ರಿಟ್ ಕಂಡಿವೆ. ಹಿರಿಯ ಸದಸ್ಯರು, ಪಕ್ಷ ಪ್ರಮುಖರ ಮಾರ್ಗದರ್ಶನ ಪಡೆದು ಜನರ ಆದ್ಯತೆಯಂತೆ ಕೆಲಸ ಮಾಡಿ. ನಾವು ಕೇಂದ್ರ ಹಾಗೂ ರಾಜ್ಯದಿಂದ ಅನುದಾನ ತರುತ್ತೇವೆ ಎಂದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಮನಪಾದಲ್ಲಿ ಈ ಹಿಂದೆ ಯಾವುದೇ ಅಭ್ಯರ್ಥಿಗೆ ಈ ರೀತಿಯ ಅಭೂತಪೂರ್ವ ಗೆಲುವು ದೊರೆತಿರಲಿಲ್ಲ. ಕಾರ್ಯಕರ್ತರ ಶ್ರಮದಿಂದ ಈ ಗೆಲುವು ದೊರೆತಿದೆ. ಈಗಿನ ಬಿಜೆಪಿ ಸರಕಾರ ಮಂಗಳೂರು ಅಭಿವೃದ್ಧಿಗೆ ಅನುದಾನ ನೀಡುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ, ಶಾಸಕ ಸಂಜೀವ ಮಠಂದೂರು ಮಾತನಾಡಿ, ಮನಪಾ ಚುನಾವಣೆಯಲ್ಲಿ ಮಂಗಳೂರಿನ ಜನತೆ ಬಿಜೆಪಿಗೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಇದು ರಾಜ್ಯದ ಮುಂದಿನ ಉಪಚುನಾವಣೆಗೆ ಗೆಲುವಿನ ಸೋಪಾನವಾಗ ಲಿದೆ ಎಂದು ತಿಳಿಸಿದರು.

ಶಾಸಕರಾದ ರಾಜೇಶ್ ನಾಯ್ಕ, ಉಮಾನಾಥ ಕೊಟ್ಯಾನ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಾಜಿ ಸಚಿವರಾದ ಕೃಷ್ಣ ಪಾಲೆಮಾರ್, ನಾಗರಾಜ ಶೆಟ್ಟಿ, ಬಿಜೆಪಿ ವಿಭಾಗ ಪ್ರಭಾರ ಉದಯ ಕುಮಾರ್ ಶೆಟ್ಟಿ, ಸಹಪ್ರಭಾರ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಉಪಾಧ್ಯಕ್ಷರಾದ ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಮಾಜಿ ಶಾಸಕರಾದ ಬಾಲಕೃಷ್ಣ ಭಟ್, ಯೋಗೀಶ್ ಭಟ್, ಪದ್ಮನಾಭ ಕೊಟ್ಟಾರಿ, ಮೋನಪ್ಪ ಭಂಡಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಿಶೋರ್ ರೈ, ಬೃಜೇಶ್ ಚೌಟ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಭಾಸ್ಕರ ಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಶಾಸಕ ವೇದವ್ಯಾಸ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಡಾ. ಭರತ್ ಶೆಟ್ಟಿ ವೈ. ವಂದಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಮೂಡುಬಿದಿರೆ ಕಾರ್ಯಕ್ರಮ ನಿರೂಪಿಸಿದರು.

‘ಉಪಚುನಾವಣೆಯಲ್ಲಿ ಬಿಜೆಪಿ ಸುಭದ್ರ’

ರಾಜ್ಯದ ಮುಂದಿನ ಉಪಚುನಾವಣೆಯಲ್ಲಿ 15ರಲ್ಲಿ 15 ಕ್ಷೇತ್ರವನ್ನೂ ಬಿಜೆಪಿ ಗೆಲ್ಲಲಿದೆ. ಉಪಚುನಾವಣೆಯಲ್ಲಿ ಎಲ್ಲ ಸ್ಥಾನಗಳನ್ನು ಬಿಜೆಪಿ ಗೆಲ್ಲುವ ಮೂಲಕ ಯಡಿಯೂರಪ್ಪ ಸರಕಾರ ಸುಭದ್ರವಾಗಲಿದೆ. ಕಾಂಗ್ರೆಸ್‌ಗೆ ಚುನಾವಣೆ ಎದುರಿಸುವ ಸಾಮರ್ಥ್ಯವೇ ಇಲ್ಲ. ಚುನಾವಣೆಗೆ ಉಸ್ತುವಾರಿಗಳನ್ನು ನೇಮಿಸಲೂ ಅವರಿಂದ ಸಾಧ್ಯವಾಗುತ್ತಿಲ್ಲ. ಯಡಿಯೂರಪ್ಪ ಅವರು ಸಿಎಂ ಆಗಿ ಮುಂದುವರಿಯಲು ನಾವು ಬಿಜೆಪಿ ಜತೆಗೆ ಇದ್ದೇವೆ ಎಂದು ಜನ ಹೇಳುತ್ತಿದ್ದಾರೆ ಎಂದು ಸಂಸದ ನಳಿನ್‌ ಕುಮಾರ್ ಕಟೀಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News