​ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಸೈನ್ಸ್ ಟ್ಯಾಲೆಂಟ್ ಹಂಟ್

Update: 2019-11-16 16:48 GMT

ಮಂಗಳೂರು, ನ.16: ಭಾರತ ಸರ್ಕಾರದ ಸ್ಟಾರ್ಟ್ ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ ಕಾರ್ಯಕ್ರಮಗಳಿಗೆ ಪೂರಕವಾಗಿ ನಗರದ ಹೊರ ವಲಯದ ಅಡ್ಯಾರ್‌ನಲ್ಲಿರುವ ಸಹ್ಯಾದ್ರಿ ಕ್ಯಾಂಪಸ್ ಇಂದು ಕಿರಿಯ ವಿಜ್ಞಾನಿಗಳ ಮಾದರಿಗಳ ಪ್ರದರ್ಶನಕ್ಕೆ ವೇದಿಕೆಯನ್ನು ಕಲ್ಪಿಸಲಾಯಿತು.

ಸೈನ್ಸ್ ಟ್ಯಾಲೆಂಟ್ ಹಂಟ್‌ನಲ್ಲಿ ಭವಿಷ್ಯದ ವಿಜ್ಞಾನಿಗಳು ತಾವು ಅನ್ವೇಷಿಸಿದ ವೈಜ್ಞಾನಿ ಮಾದರಿಗಳನ್ನು ಪ್ರದರ್ಶಿಸಿದರು.
ಭತ್ತದ ಗದ್ದೆಯ ಸಮಗ್ರ ನಿರ್ವಹಣೆಯ ರೋಬಾಟ್, ನಿಸರ್ಗ ಸ್ನೇಹಿ ಮತ್ಸ ಬೇಟೆ, ರಸ್ತೆ ಹಂಪ್ಸ್‌ನಲ್ಲಿ ವಿದ್ಯುತ್ ಉತ್ಪಾದನೆ ಸೇರಿದಂತೆ ಹಲವು ಬಗೆಯ ವೈಜ್ಞಾನಿಕ ಮಾದರಿಗಳು ಕಿರಿಯ ವಿಜ್ಞಾನಿಗಳ ಪ್ರತಿಭೆಯನ್ನು ಅನಾವರಣಗೊಳಿಸಿತು.

ವಿಜ್ಞಾನದ ಕಡೆಗೆ ವಿದ್ಯಾರ್ಥಿಗಳನ್ನು ಸೆಳೆಯುವ ಉದ್ದೇಶದಿಂದ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್‌ ಮ್ಯಾನೇಜ್‌ಮೆಂಟ್ ಸಂಸ್ಥೆಯು ಪ್ರೌಢಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಈ ವಿಜ್ಞಾನ ಮಾದರಿಗಳ ಪ್ರದರ್ಶನದಲ್ಲಿ ಪ್ರದರ್ಶಿಸಲಾದ 400 ಕ್ಕೂ ಅಧಿಕ ಮಾದರಿಗಳಲ್ಲಿ ಶನಿವಾರ ಅತ್ಯುತ್ತಮ 40 ಮಾದರಿಗಳ ಆಯ್ಕೆಯನ್ನು ತಜ್ಞರು ಅಂತಿಮಗೊಳಿಸಿದ್ದಾರೆ.ಈ ಉತ್ಪನ್ನಗಳನ್ನು ಸ್ಟಾರ್ಟ್‌ಅಪ್‌ಗಳಾಗಿ ಪರಿವರ್ತಿಸುವ ಕೆಲಸ ಸಹ್ಯಾದ್ರಿ ಮೂಲಕ ನಡೆಯಲಿದೆ.

ಸಹ್ಯಾದ್ರಿ ಶಿಕ್ಷಣ ಸಮೂಹ ಸಂಸ್ಥೆಯ ಮುಖ್ಯಸ್ಥ ಮಂಜುನಾಥ ಭಂಡಾರಿ ಸ್ಥಳದಲ್ಲಿದ್ದು, ಮಾರ್ಗದರ್ಶನ ನೀಡಿದರು. ಕಾರ್ಯಕ್ರಮ ಸಂಯೋಜಕ ಜಾನ್ಸನ್ ಟೆಲ್ಲಿಸ್, ಎಸಿಸಿಇಎಲ್ ಪಾಲುದಾರ ಪ್ರಶಾಂತ್ ಪ್ರಕಾಶ್, ಪ್ರಿನ್ಸಿಪಾಲ್ ಡಾ.ಆರ್.ಶ್ರೀನಿವಾಸ ರಾವ್ ಕುಂಟೆ ಉಪಸ್ಥಿತರಿದ್ದರು.

ಬೀಜ ಬಿತ್ತನೆ, ಉಳುಮೆ, ಕಟಾವು, ನಿರ್ವಹಣೆ ಸಹಿತ ಭತ್ತದ ಬೇಸಾಯದ ಸಮಗ್ರ ನಿರ್ವಹಣೆಯನ್ನು ತಂತ್ರಜ್ಞಾನಗಳನ್ನು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳು ‘ಆಗ್ರೋ ಬೋಟ್’ ಹೆಸರಿನಲ್ಲಿ ಮತ್ತು ಕುಂದಾಪುರದ ಆರ್.ಎನ್.ಶೆಟ್ಟಿ ಪಿ.ಯು. ಕಾಲೇಜ್ ವಿದ್ಯಾರ್ಥಿಗಳು ‘ಅಗ್ರಿಕಲ್ಚರ್ ರೋಬಾಟ್’ ಹೆಸರಿನಲ್ಲಿ ಅಭಿವೃಧ್ಧಿಪಡಿಸಿದ್ದಾರೆ.

ರಸ್ತೆಯ ಹಂಪ್ಸ್‌ಗಳಲ್ಲಿ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನವನ್ನು ಆಳ್ವಾಸ್ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.

ನೈನ್ ಹೊಸ ಕೇಂದ್ರ ಶೀಘ್ರ ಉದ್ಘಾಟನೆ

ಸುಸಜ್ಜಿತ ಕಟ್ಟಡದಲ್ಲಿ ಸಿದ್ದಗೊಂಡಿರುವ ನ್ಯೂ ಏಜ್ ಇನ್ಕೂಬೇಶನ್ ಸೆಂಟರ್ (ನೈನ್) ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ.
ಪೂರ್ವ ನಿಗದಿಯಂತೆ ನೈನ್ ಹೊಸ ಕಟ್ಟಡದಲ್ಲಿ ಶನಿವಾರ (ನ.16) ಉದ್ಘಾಟನೆಗೊಳ್ಳಬೇಕಿತ್ತು. ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಆಗಮನ ವಿಳಂಬ ಕಾರಣ ಉದ್ಘಾಟನೆ ಕೆಲ ಕಾಲ ಮುಂದೂಡಲ್ಪಟ್ಟಿದೆ ಎಂದು ಸಂಸ್ಥೆಯ ಮೂಲ ತಿಳಿಸಿದೆ.

ಸಹ್ಯಾದ್ರಿಯ ನೈನ್ ಕೇಂದ್ರವನ್ನು ಕರ್ನಾಟಕ ಸರ್ಕಾರ ದ ಕೆ- ಟೆಕ್ ಇನ್ನೋವೇಶನ್ ಸೆಂಟರ್ ಮೂಲಕ ಸ್ಥಾಪಿಸಲಾಗಿದೆ. ನೈನ್‌ನಲ್ಲಿ ಈಗಾಗಲೇ ಎರಡು ಯೋಜನೆಗಳನ್ನು ಆಯ್ಕೆ ಮಾಡಿ ಸ್ಟಾರ್ಟ್‌ಅಪ್‌ಗಳಾಗಿ ಪರಿವರ್ತಿಸುವ ಕೆಲಸಕ್ಕೆ ಚಾಲನೆ ದೊರೆತಿದೆ. ಈ ಎರಡು ಸ್ಟಾಟ್‌ಅಪ್‌ಗಳು ಇನ್ನು ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News