ಕನಸನ್ನು ಸಾಕ್ಷಾತ್ಕಾರಗೊಳಿಸಲು ಪ್ರಯತ್ನಿಸಿ: ದೇಚಮ್ಮ

Update: 2019-11-16 16:59 GMT

ಪುತ್ತೂರು: ದೊಡ್ಡ ಕನಸುಗಳನ್ನು ಕಾಣುವುದು ತಪ್ಪಲ್ಲ. ಆದರೆ ಅದನ್ನು ಸಾಕ್ಷಾತ್ಕಾರಗೊಳಿಸುವ ಕಾರ್ಯ ಕೆಳಗಿನ ಹಂತದಿಂದಲೇ ಪ್ರಾರಂಭಿಸಬೇಕು. ಇತರರ ನಿರ್ಧಾರಗಳಿಗೆ ಕಿವಿಗೊಡುವುದಕ್ಕಿಂತ ನಿಮ್ಮ ಮನಸ್ಸಿನ ಮಾತುಗಳನ್ನು ಕೇಳಿ ಮುಂದುವರಿದರೆ ಯಶಸ್ಸಿನ ಖುಷಿ ನಿಮ್ಮದಾಗುತ್ತದೆ ಎಂದು ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‍ನ ಪ್ರಾಂಶುಪಾಲೆ ದೇಚಮ್ಮ ಹೇಳಿದರು.

ಅವರು ಶನಿವಾರ ಇಲ್ಲಿನ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ 'ಕನಸುಗಳು-2019' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪಕ್ವತೆಯು ಬೆಳವಣಿಗೆಯ ಸಂಕೇತ. ವ್ಯಕ್ತಿತ್ವ ವಿಕಾಸಗೊಂಡಂತೆ ಪ್ರೌಢ ಮನಸ್ಥಿತಿ ನಿರ್ಮಾಣಗೊಳ್ಳುತ್ತದೆ. ಅದು ಮಾವೀಯತೆಯ ಸಂಕೇತವೂ ಹೌದು. ಮನುಷ್ಯ ಮಾಲಗಿದಂತೆಲ್ಲ ತನ್ನ ಸುತ್ತಲೂ ಕನಸುಗಳ ಲೋಕವನ್ನು ನಿರ್ಮಿಸಬಲ್ಲ. ಅದರ ಸಾಕ್ಷಾತ್ಕಾರಕ್ಕಾಗಿ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳನ್ನು ತುಂಬುವ ಕೆಲಸ ಶ್ಲಾಘನೀಯ ಎಂದರು.

ಕನಸುಗಳ ಬಗ್ಗೆ ಮಾತನಾಡುವವರು ಹಲವರಿದ್ದಾರೆ. ಆದರೆ ಕೆಲವೊಂದು ಮಾತುಗಳು ಮಾತ್ರ ನಮ್ಮ ಮನಸ್ಸನ್ನು ತಟ್ಟುತ್ತದೆ. ಅವು ನಮ್ಮ ಜೀವನಕ್ಕೆ ಗುರಿಯನ್ನು ನೀಡುತ್ತದೆ. ಹಲವಾರು ಕನಸುಗಳು ಪ್ರತಿಯೊಬ್ಬರಲ್ಲೂ ಇರುತ್ತದೆ ಆದರೆ ಅದನ್ನು ನಿಜಗೊಳಿಸುವ ದಾರಿಯನ್ನು ನಾವೇ ಹುಡುಕಿಕೊಳ್ಳಬೇಕು. ಆ ದಾರಿ ಒಂದು ಹೊಸ ಮಜಲನ್ನೇ ಸೃಷ್ಟಿಸುವಂತಿರಬೇಕು. ಕನಸನ್ನು ಸಾಧಿಸುವ ಮಾರ್ಗವು ಪುಟ್ಟ ಹೆಜ್ಜೆಗಳಿಂದ ಪ್ರಾರಂಭವಾಗಬೇಕು ಹಾಗೂ ಅವು ನೆಮ್ಮದಿಯನ್ನು ಕೊಡುವಂತಿರಬೇಕು ಎಂದು ಹೇಳಿದರು.

ಪುತ್ತೂರಿನ ಕ್ಷೇತ್ರಶಿಕ್ಷಣಾಧಿಕಾರಿ ವಿಷ್ಣು ಪ್ರಸಾದ್ ಅವರು ಹತ್ತನೇ ತರಗತಿಯ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುವಂಥ ಮಾದರಿ ಪ್ರಶ್ನೆಪತ್ರಿಕೆಗಳ ಸಂಕಲನವನ್ನು ಬಿಡುಗಡೆಗೊಳಿಸಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ. ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ., ಸಂಚಾಲಕ ಸಂತೋಷ್ ಬಿ., ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಕೆ. ಮಂಜುನಾಥ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಡಾ.ಸುಬ್ರಹ್ಮಣ್ಯ ಕೆ.ಉಪಸ್ಥಿತರಿದ್ದರು.

ಆಂಗ್ಲ ವಿಭಾಗದ ಮುಖ್ಯಸ್ಥ ಪಿ.ಕೆ. ಪರಮೇಶ್ವರ ಶರ್ಮ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಹರ್ಷಿತಾ ಪಿ.ವಂದಿಸಿದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಸ್ನೇಹ ಬಿ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News