ಶಿಕ್ಷಣದಲ್ಲಿ ಆಳ ಅಧ್ಯಯನ ಬಹಳ ಮುಖ್ಯ: ಅಣ್ಣಾಮಲೈ

Update: 2019-11-16 17:03 GMT

ಪುತ್ತೂರು: ಪ್ರತಿಯೊಬ್ಬನ ಜೀವನದಲ್ಲಿ ಆತನಿಗೆ ಅರಿತಿರುವ ಸಾಮಾನ್ಯ ಜ್ಞಾನ ಮುಖ್ಯವಾಗುತ್ತದೆ. ಏಕೆಂದರೆ ಬದುಕಿಗೆ ಅನ್ನ ನೀಡುವುದು ಸಾಮಾನ್ಯಜ್ಞಾನ. ಈ ಜ್ಞಾನ ಸಮಾಜ ಎಲ್ಲ ಕ್ಷೇತ್ರಗಳ ವಿಷಯಗಳನ್ನು ಒಳಗೊಂಡಿರುವುದರಿಂದ ಎಲ್ಲಿ ಬೇಕಾದರೂ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಅದೇ ರೀತಿ ಶಿಕ್ಷಣವನ್ನು ಪಡೆಯುವುದು ಮಾತ್ರವಲ್ಲ ಅದರಲ್ಲಿ ಆಳವಾದ ಅಧ್ಯಯನವನ್ನು ಮಾಡುವುದು ಬಹು ಮುಖ್ಯ. ಯಾವುದೇ ವಿಷಯದಲ್ಲಿ ಅಥವಾ ಕ್ಷೇತ್ರದಲ್ಲಿ ನಾವು ಪರಿಣತರಾಗಬೇಕು. ಇದರ ಆವಶ್ಯಕತೆ ಇದೆ ಎಂದು ಅಣ್ಣಾಮಲೈ ಐಪಿಎಸ್ ಹೇಳಿದರು.

ಅವರು ಶನಿವಾರ ಇಲ್ಲಿನ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕನಸು-2019 ಕಾರ್ಯಕ್ರಮದಲ್ಲಿ 'ನನ್ನ ದೇಶ-ನನ್ನ ಕನಸು' ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. 

ಹಸಿವು, ನೋವು ಗೊತ್ತಿರುವಾತ ಹಾಗೂ ನಿರೀಕ್ಷೆ ಇಲ್ಲದೆ ಕೆಲಸ ಮಾಡುವಾತ ಐಎಎಸ್, ಐಪಿಎಸ್ ಅಧಿಕಾರಿಯಾಗಲು ಸಾಧ್ಯ. ಏಕೆಂದರೆ ಕಷ್ಟ ಅನುಭವಿಸುವವನಿಗೆ ನೋವು ಅರ್ಥವಾಗುತ್ತದೆ. ಹಾಗೂ ಜನರ ಪ್ರತಿಯೊಂದು ಕಷ್ಟಗಳನ್ನು ಅರಿಯುವ ಮನಸ್ಸು ಬರುತ್ತದೆ. ಯಾವುದೇ ವಿಷಯದಲ್ಲಿ ಪದವಿಯನ್ನು ಮಾಡುವವರು ತಮ್ಮ ವಿಷಯದಲ್ಲಿ ಆಳವಾದ ಜ್ಞಾನ ಅಥವಾ ಅಧ್ಯಯನ ಅತ್ಯಗತ್ಯ. ಅದರೊಂದಿಗೆ ನಮ್ಮ ಆಚರಣೆ, ಪರಂಪರೆ, ಸಂಸ್ಕೃತಿಯಲ್ಲಿ ಸ್ಪಷ್ಟವಾದ ಉದ್ದೇಶವಿದೆ. ಎರಡುವರೆ ಸಾವಿರ ವರ್ಷಗಳ ಪರಂಪರೆ ಇರುವ ಭಾರತೀಯ  ಸಂಸ್ಕೃತಿಯನ್ನು ಇಂದು ವಿಜ್ಞಾನ ಕ್ಷೇತ್ರ ಒಪ್ಪಿಕೊಂಡಿದೆ ಎಂದರು.

ಗುರಿ ಚಿಕ್ಕ ವಯಸ್ಸಿನಲ್ಲೇ ಇರಬೇಕು, ಅಥವ ಪೋಷಕರ ಒತ್ತಡದಿಂದಲೋ ಜೀವನದ ಗುರಿ ನಿರ್ಧರಿಸುವ ಅವಶ್ಯಕತೆ ಇಲ್ಲ. ಬದುಕನ್ನು ತಿಳಿದುಕೊಳ್ಳುತ್ತಾ ಹೋದಂತೆ ಹೊಸತನ್ನು ತಿಳಿಯುತ್ತಾ ಹೋಗುತ್ತೇವೆ. ಆಗ ಏನು ಸಾಧಿಸಬೇಕು ಎಂದು ತಿಳಿಯುತ್ತದೆ, ಹಾಗಾಗಿ ಚಿಕ್ಕವಯಸ್ಸಿನಲ್ಲೇ ಗುರಿ ಇರಿಸಿಕೊಳ್ಳಬೇಕು ಎಂಬ ಅವಶ್ಯಕತೆ ಇಲ್ಲ. ಏಕೆಂದರೆ ಮನಸ್ಸಿನಲ್ಲಿ ಗುರಿಯತ್ತ ಚಂಚಲತೆ ಇದ್ದರೆ ಹಾಗೂ ಹಲವಾರು ಗುರಿಗಳಿದ್ದರೆ ಅದು ಜೀವನದ ಬಗ್ಗೆ ಇರುವ ಉತ್ಸಾಹ. ಏಕೆಂದರೆ ಇಂದು ಬೇಗ ಬೆಳೆಯುತ್ತಿರುವ ಸಮಾಜ, ಬದಲಾಗುತ್ತಿರುವ ಮನಸ್ಥಿತಿ. ಹಾಗಾಗಿ ಚಂಚಲತೆ ಚಿಕ್ಕವಯಸ್ಸಿನಲ್ಲಿದ್ದರೆ ಅದು ಯೋಚಿಸುವ ಸಂಗತಿಯಲ್ಲ ಎಂದರು.

ಕಾಲೇಜಿನ ತರಗತಿಯಲ್ಲಿ ಕೊನೆಯ ಬೆಂಚಿನಲ್ಲಿ ಕುಳಿತುಕೊಳ್ಳುವ ಮಕ್ಕಳು ಹೆಚ್ಚಾಗಿ ಗೆಲ್ಲುತ್ತಾರೆ ಎಂದು ಎಲ್ಲರು ಹೇಳುವ ಮಾತು. ಏಕೆಂದರೆ ಮೊದಲಿನಿಂದಲೂ ಅವರು ಯಾವುದನ್ನು ಯೋಚಿಸುತ್ತಾ ಬಂದಿರುವುದಿಲ್ಲ. ಆದರೆ ಜೀವನದಲ್ಲಿ ಒಮ್ಮೆ ಸಮಾಜದ ಮಾತುಗಳ ಎದುರಿಸಿ ಏನಾದರು ಸಾಧಿಸಬೇಕು ಎಂಬ ಛಲ ಬರುತ್ತದೆ. ಅದುವೇ ಅವರ ಜೀವನದ ತಿರುವಿನ ಹಂತವಾಗುತ್ತದೆ. ಹಾಗೂ ಅವರು ಗೆಲ್ಲಲೇ ಬೇಕು ಎಂಬ ಹಟವನ್ನು ಹೊತ್ತು ಮುನ್ನಡೆಯುತ್ತಾರೆ. ಆದರೆ ಚೆನ್ನಾಗಿ ಓದುವವರು ಓದುತ್ತಿರುವ ಕಾರಣವನ್ನು ತಿಳಿದು ಓದಿದರೆ ಗೆಲುವು ಲಭಿಸುತ್ತದೆ ಎಂದರು.

ಇಂದು ಹೆಚ್ಚು ಮಂದಿ ಸಿವಿಲ್ ಸರ್ವಿಸ್‍ಗೆ ಬರುತ್ತಿರುವವರು ಅಹಂ ಇರಿಸಿಕೊಂಡು ಬರುತ್ತಿದ್ದಾರೆ. ಅಂದರೆ ಕೆಲವರು ಸಾಧಿಸುವುದಕ್ಕಾಗಿ, ನಾನೂ ಹೆಚ್ಚು ತಿಳಿದವ ಎಂದು ತೋರಿಸಲು, ಪ್ರತಿಷ್ಠೆಯನ್ನು ತೋರಿಸಲು. ಆದರೆ ನಿಜವಾಗಿಯೂ ಯಾವುದೇ ವ್ಯಕ್ತಿ ಸೇವೆ ಮಾಡಬೇಕು ಎಂಬ ಮನಸ್ಸು ಇಟ್ಟು ಬರುವುದು ಕಡಿಮೆ. ಗ್ರಾಮಗಳಲ್ಲಿ ಬೆಳೆದ ಜನರು ಸೇವಾ ಮನೋಭಾವ ಇರಿಸಿ ಬರುತ್ತಾರೆ ಆದರೆ ಅದು ಅತಿ ವಿರಳ. ಧರ್ಮಗಳು ಹೇಳುವುದು ಏನು, ಯಾವಾಗ ಬಂದಿದ್ದು ಅದರ ಮೂಲ ಉದ್ದೇಶವನ್ನು ಅದರ ಒಳಗಿದ್ದು ಅರಿತರೆ ಮಾತ್ರ ನಿಜವಾದ ಧರ್ಮ ಏನು ಎಂದು ತಿಳಿಯುತ್ತದೆ. ಹಾಗೂ ಧರ್ಮದ ಬಗ್ಗೆ ತಿಳಿದ, ಅರ್ಥೈಸಿದ ವಿಚಾರಗಳು ತಪ್ಪು ಎಂದು ತಿಳಿಯುತ್ತದೆ. ಆಗ ನಡೆಯುತ್ತಿರುವ, ಮುಂದೆ ನಡೆಯುವ ಕೋಮುಗಲಭೆಗಳನ್ನು ತಡೆಯಬಹುದು. ಎಲ್ಲಾ ಧರ್ಮಗಳ ಮೂಲವೂ ಒಂದೆ ಹಾಗೂ ಅವು ಒಂದಲ್ಲಾ ಒಂದು ರೀತಿಯಲ್ಲಿ ವಿಜ್ಞಾನವನ್ನೇ ಹೇಳುತ್ತದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಕೆ. ಮಂಜುನಾಥ ಉಪಸ್ಥಿತರಿದ್ದರು. ಬೌತ್ತಶಾಸ್ತ್ರ ಉಪನ್ಯಾಸಕಿ ದೀಕ್ಷಿತ ಸ್ವಾಗತಿಸಿ, ನಿರೂಪಿಸಿದರು. ವಿನಯ್ ಜಾದವ್ ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News