ಸಹಕಾರಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ : ಡಾ. ರಾಜೇಂದ್ರ ಕುಮಾರ್

Update: 2019-11-16 17:18 GMT

ಪುತ್ತೂರು : ಜಿಲ್ಲೆಯ ಎಲ್ಲಾ ಸಹಕಾರಿ ಸಂಘಗಳಲ್ಲಿ ಅತೀ ಶಿಘ್ರವಾಗಿ ಕಾಮನ್ ಸಾಪ್ಟ್‍ವೇರ್ (ಹೊಸ ತಂತ್ರಜ್ಞಾನ) ಅಳವಡಿಸಲಾಗುವುದು. ರೈತರ ಭೂಮಿ ದಾಖಲಾತಿ ವ್ಯವಸ್ಥೆಯೊಂದಿಗೆ ಬೆಳಿಗ್ಗೆ ಅರ್ಜಿ ಸಲ್ಲಿಸಿದವರಿಗೆ ಸಂಜೆಯೊಳಗೆ ಸಾಲ ಸೌಲಭ್ಯ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷರಾಗಿರುವ ಡಾ.ಎಂ.ಎನ್.ರಾಜೇಂದ್ರ ಕುಮಾರ್  ಹೇಳಿದರು. 

ಅವರು ಪುತ್ತೂರಿನ ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಶುಕ್ರವಾರ ಸಂಜೆ ನಡೆದ ಪುತ್ತೂರು ತಾಲೂಕು 66ನೇ ಅಖಿಲ ಭಾರತ ಸಹಕಾರ ಸಪ್ತಾಹ, ಮುಂಡೂರು ಸಹಕಾರಿ ಸಂಘದ ರೂ.1.68 ಕೋಟಿ ವೆಚ್ಚದ ವಿಸ್ತೃತ ಗೋದಾಮು, ವಾಣಿಜ್ಯ ಸಂಕೀರ್ಣ ಹಾಗೂ ವಸತಿ ಸಮುಚ್ಚಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ನೂತನ ಗೋದಾಮು , ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದ ಆರ್ಥಿಕ ವ್ಯವಸ್ಥೆ ಕಷ್ಟಕರ ಸ್ಥಿತಿಯಲ್ಲಿದೆ, ಜಿಡಿಪಿ ಕುಸಿದಿದೆ. ಆದರೆ ಎಲ್ಲಿಯೂ ಸಹಕಾರಿ ಕ್ಷೇತ್ರ ಕುಸಿತ ಕಂಡಿಲ್ಲ. ಜಿಲ್ಲೆಯ ಸಹಕಾರಿ ಕ್ಷೇತ್ರ ಬಲಿಷ್ಠವಾಗಿದೆ. ಜಿಡಿಪಿ ಹೆಚ್ಚಿಸುವಲ್ಲಿ ಸಹಕಾರಿ ಕ್ಷೇತ್ರ ಸಹಕಾರಿಯಾಗುತ್ತದೆ ಎಂದ ಅವರು ಸಹಕಾರಿ ಸಂಸ್ಥೆಗಳು ಕಾರ್ಪೋರೇಟ್ ಸಂಸ್ಥೆಗಳಿಗಿಂತಲೂ ಮೇಲಾಗಿ ಕೆಲಸ ಮಾಡುತ್ತಿದ್ದು, ದೇಶದ ಗೌರವ ಉಳಿದಿದ್ದರೆ ಅದು ಸಹಕಾರಿ ಕ್ಷೇತ್ರದಿಂದ ಮಾತ್ರ ಎಂದರು.

ವಾಣಿಜ್ಯ ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕ್‍ಗಳಲ್ಲಿ ಲಭಿಸುವ ವಿಮಾ ಸವಲತ್ತಿನಲ್ಲಿ ವ್ಯತ್ಯಾಸವಿದೆ ಎಂಬ ಭಾವನೆ ಜನರಲ್ಲಿ ಮೂಡಿದೆ. ಆದರೆ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕ್‍ಗಳಲ್ಲಿ ಒಂದೇ ತರದ ವಿಮಾ ಸೌಲಭ್ಯವಿದ್ದು, ಈ ಬಗ್ಗೆ ರೈತರಿಗೆ ತಿಳಿಯ ಪಡಿಸುವ ಕೆಲಸ ಆಗಬೇಕು ಎಂದ ಅವರು ಸಹಕಾರಿ ವ್ಯವಸ್ಥೆಯಿಂದಾಗಿ ಸಮಾಜದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ.

ಗ್ರಾಮಾಂತರ ಜನತೆಯ ನಾಡಿ ಮಿಡಿತವನ್ನು ಬಲ್ಲ ವ್ಯವಸ್ಥೆಯೊಂದಿದ್ದರೆ ಅದು ಸಹಕಾರಿ ವ್ಯವಸ್ಥೆ ಮಾತ್ರ ಎಂದರು. ಪ್ರಾಥಮಿಕ ಸಹಕಾರಿ ಸಂಘವೊಂದು 4 ಮನೆಗಳಿರುವ ವಸತಿ ಸಮುಚ್ಚಯವನ್ನು ನಿರ್ಮಿಸಿರುವುದು ಇದೇ ಮೊದಲು ಎಂದು ಅವರು ಶ್ಲಾಘಿಸಿದರು. ಮುಂದಿನ ವರ್ಷ ನವೋದಯ ಸ್ವಸಹಾಯ ಸಂಘದವರಿಗೆ ಹೊಸ ಸಮವಸ್ತ್ರ ವಿತರಿಸುವ ಹೊಸ ಯೋಜನೆ ಹಮ್ಮಿಕೊಂಡಿದೆ ಎಂದು ಅವರು ತಿಳಿಸಿದರು.

ಶಾಸಕ ಸಂಜೀವ ಮಠಂದೂರು ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ವಸತಿ ಸಮುಚ್ಚಯ ಉದ್ಘಾಟಿಸಿದರು. ಮಂಗಳೂರು ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರ್ರಸಾದ್ ಕೌಶಲ್ ಶೆಟ್ಟಿ ಬೆಳ್ಳಿಪ್ಪಾಡಿ ಸಹಕಾರಿ ಜಾಥಾ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್,  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ.ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮಂಗಳೂರು ಕೆ.ಎಂ.ಎಫ್ ಮಾಜಿ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಸ್.ಬಿ.ಜಯರಾಮ ರೈ ಜಳೆಜ್ಜ ಮತ್ತು ಶಶಿಕುಮಾರ್ ರೈ ಬಾಲ್ಯೊಟ್ಟು, ಪುತ್ತೂರು ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರವೀಣ್ ರೈ ಮೇನಾಲ, ಮುಂಡೂರು ಗ್ರಾ.ಪಂ. ಅಧ್ಯಕ್ಷ ವಸಂತ ಎಸ್.ಡಿ, ದ.ಕ.ಜಿಲ್ಲಾ ಸಹಕಾರಿ ಸಂಘಗಳ ಉಪನಿರ್ದೇಶಕ ಪ್ರವೀಣ್ ಬಿ.ನಾಯಕ್, ಮಂಗಳೂರು ಕೆ.ಎ.ಎಫ್.ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್, ಮಂಗಳೂರು ಸಹಕಾರಿ ಯೂನಿಯನ್ ನಿರ್ದೇಶಕ ಎನ್.ರಾಜಶೇಖರ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.

ಮುಂಡೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ನಿರ್ದೇಶಕ ಜಯಂತ ನಡುಬೈಲು ವಂದಿಸಿದರು. ನಿರ್ದೇಶಕ ಶಿವನಾಥ ರೈ ಮೇಗಿನಗುತ್ತು ಕಾರ್ಯಕ್ರಮ ನಿರೂಪಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News