ಕಾರ್ಕಳ: ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ ಹವಾಮಾನ ಮಾಹಿತಿ ಸಂಗ್ರಹಕ ಉಪಕರಣ

Update: 2019-11-16 17:41 GMT

ಕಾರ್ಕಳ, ನ.16: ಹವಾಮಾನ ಸಂಬಂಧಿತ ಮಾಹಿತಿ ಸಂಗ್ರಹಕ ಉಪಕರಣವೊಂದು ಗ್ರಾಮಸ್ಥರ ಆತಂಕಕ್ಕೆ ಕಾರಣವಾದ ಘಟನೆ ಇಂದು ಬೆಳಗ್ಗೆ ತಾಲೂಕಿನ ಬೋಳ ಗ್ರಾಮದಲ್ಲಿ ನಡೆದಿದೆ.

ಶನಿವಾರ ಬೆಳಗ್ಗೆ ಬೋಳ ಗ್ರಾಮದ ಕಿಶೋರ್ ಮೂಲ್ಯ ಎಂಬವರ ಮನೆಯೆದುರಿದ್ದ ತೋಟದ ತೆಂಗಿನಮರದಲ್ಲಿ ಬಿಳಿ ಬಣ್ಣದ ಪ್ಯಾರಾಚೂಟ್‌ನಂತ ಸಾಧನವೊಂದು ಸಿಲುಕಿಕೊಂಡಿತ್ತು. ಅದರ ಕೆಳಗೆ ಉಪಕರಣದಂತಹ ಪೆಟ್ಟಿಗೆಯೂ ನೇತಾಡುತ್ತಿತ್ತು. ಇದನ್ನು ಗಮನಿಸಿದ ಮನೆಮಂದಿ ಆತಂಕಗೊಂಡರು. ಕೂಡಲೇ ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ಈ ನಡುವೆ ಚಿಪ್ ಒಳಗೊಂಡ ಸಣ್ಣ ಉಪಕರಣದ ಜೊತೆ ದೊಡ್ಡ ಬಲೂನ್‌ವೊಂದು ಪತ್ತೆಯಾಗಿರುವ ಈ ಸುದ್ದಿ ಊರೆಲ್ಲಾ ಹಬ್ಬಿತ್ತು. ಮನೆಯವರ ಗಾಬರಿ ಕರೆಗೆ ಕೂಡಲೇ ಸ್ಪಂದಿಸಿದ ಪೊಲೀಸರು, ಗ್ರಾಮ ಕರಣಿಕ ಸಹಿತ ಹಲವರು ಕಿಶೋರ್ ಮೂಲ್ಯ ಮನೆ ಬಳಿ ಆಗಮಿಸಿದರು.

ಈ ಸಂದರ್ಭ ಪೊಲೀಸರು ಚಿಪ್‌ಯುಕ್ತ ಬಲೂನ್‌ನನ್ನು ಪರಿಶೀಲಿಸಿದಾಗ ಅದು ಆರ್‌ಎಸ್‌ಜಿ-20ಎ ಜಿಪಿಎಸ್ ರೇಡಿಯೋ ಅನ್ವೇಷಕ ಎಂದು ತಿಳಿದುಬಂತು. ಇದು ಹವಾಮಾನ ಸಂಬಂಧಿತ ಮಾಹಿತಿ ಕಲೆ ಹಾಕುವ ಉಪಕರಣ ಎಂಬುದು ಮನದಟ್ಟಾಯಿತು. ಅದರ ಮೂಲದ ಬಗ್ಗೆ ಪರಿಶೀಲಿಸಿದಾಗ ಅದನ್ನು ಮಂಗಳೂರಿನ ಶಕ್ತಿನಗರದಲ್ಲಿರುವ ಹವಾಮಾನ ಕೇಂದ್ರದಿಂದ ಹಾರಿಬಿಟ್ಟಿರುವುದು ಎಂದು ತಿಳಿದುಬಂತು. ಇದರೊಂದಿಗೆ ಗ್ರಾಮಸ್ಥರ ಆತಂಕ ದೂರವಾಗಿ ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಯಿತು.

ಇದೇ ರೀತಿಯ ಆರ್‌ಎಸ್‌ಜಿ-20ಎ ಜಿಪಿಎಸ್ ರೇಡಿಯೋ ಅನ್ವೇಷಕವನ್ನು ಹವಾಮಾನ ಕೇಂದ್ರದಿಂದ ಪ್ರತಿನಿತ್ಯ ಮುಂಜಾನೆ 4:30ಕ್ಕೆ ಆಕಾಶಕ್ಕೆ ಹಾರಿಬಿಡಲಾಗುತ್ತದೆ. ಇದರ ಮೂಲಕ ವಾತಾವರಣದಲ್ಲಿನ ಏರುಪೇರು, ಹವಾಮಾನ ವೈಪರೀತ್ಯ ಸಹಿತ ಹವಾಮಾನಕ್ಕೆ ಸಂಬಂಧಿಸಿದ ನಿಖರ ಮಾಹಿತಿ-ಮುನ್ಸೂಚನೆಯನ್ನು ಕಲೆ ಹಾಕಲಾಗುತ್ತದೆ. ಕೊರಿಯಾ ನಿರ್ಮಿತ ಈ ಉಪಕರಣ ಮಾಹಿತಿ ಸಂಗ್ರಹದ ಬಳಿಕ ಹೆಚ್ಚಾಗಿ ನಿರ್ಜನ ಪ್ರದೇಶ ಅಥವಾ ಸಮುದ್ರದಲ್ಲಿ ಪತನವಾಗುತ್ತದೆ. ಅಪರೂಪಕ್ಕೆ ಕೆಲವೊಮ್ಮೆ ಮೇಲ್ಮೈ ಗಾಳಿ ಬಲವಾಗಿ ಬೀಸಿದರೆ ದಿಕ್ಕು ತಪ್ಪಿ ಜನವಸತಿ ಪ್ರದೇಶದಲ್ಲೂ ಬೀಳುವುದಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News