ಅನ್ಸಾಲ್ ಡೆವಲಪರ್ಸ್‌ ವಂಚನೆ ಪ್ರಕರಣ ಆದಿತ್ಯನಾಥ್‌ಗೆ ತಿಳಿದಿತ್ತು ಎಂದ ಸಚಿವೆ

Update: 2019-11-17 14:53 GMT
ಫೋಟೊ: ANI

ಲಕ್ನೋ, ನ. 17: ರಿಯಲ್ ಎಸ್ಟೇಟ್ ಉದ್ಯಮಿ ಅನ್ಸಾಲ್ ಡೆವಲಪ್ಪರ್ಸ್‌ ಭಾಗಿಯಾಗಿದ್ದ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಆದಿತ್ಯನಾಥ್‌ಗೆ ತಿಳಿದಿತ್ತು ಹಾಗೂ ಆ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಮೇಲಿನಿಂದ ಆದೇಶ ಬಂದಿತ್ತು ಎಂದು ತನ್ನನ್ನು ಭೇಟಿಯಾದ ರಾಜ್ಯ ಪೊಲೀಸ್ ವರಿಷ್ಠರಲ್ಲಿ ಉತ್ತರಪ್ರದೇಶ ಸಚಿವೆ ಸ್ವಾತಿ ಸಿಂಗ್ ತಿಳಿಸಿದ್ದಾರೆ.

 ಈಗ ಸಚಿವೆ ಸ್ವಾತಿ ಸಿಂಗ್ ಹಾಗೂ ರಾಜ್ಯ ಪೊಲೀಸ್ ವರಿಷ್ಠರ ಈ ಮಾತುಕತೆ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಮುಂದಿನ 24 ಗಂಟೆಗಳ ಒಳಗೆ ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್ ವರಿಷ್ಠರಿಗೆ ಸೂಚಿಸಿದ್ದಾರೆ. ಅಲ್ಲದೆ, ಸಚಿವೆ ಸ್ವಾತಿ ಸಿಂಗ್ ತನ್ನನ್ನು ಭೇಟಿಯಾಗುವಂತೆ ಸೂಚಿಸಿದ್ದಾರೆ.

ನಂಬಿಕೆ ದ್ರೋಹ, ವಂಚನೆಯ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿ ಸೆಪ್ಟಂಬರ್‌ನಲ್ಲಿ ದಿಲ್ಲಿ ವಿಮಾನ ನಿಲ್ದಾಣದಿಂದ ಅನ್ಸಾಲ್ ಎಪಿಐ ಅಧ್ಯಕ್ಷ ಪ್ರಣವ್ ಅನ್ಸಾಲ್‌ನನ್ನು ಬಂಧಿಸಲಾಗಿತ್ತು. ಅನಂತರ ಆತನನ್ನು ಲಕ್ನೋಗೆ ಕರೆ ತಂದು ಜೈಲಿನಲ್ಲಿ ಇರಿಸಲಾಗಿತ್ತು.

ಸಾಮಾಜಿಕ ಜಾಲ ತಾಣದಲ್ಲಿ ವೈರಲ್ಆದ ವೀಡಿಯೊ ಕ್ಲಿಪ್‌ನಲ್ಲಿ ಅನ್ಸಾಲ್ ಡೆವಲಪರ್ಸ್‌ ವಿರುದ್ಧ ಎಫ್‌ಐಆರ್ ದಾಖಲಿಸಿದ ಬಗ್ಗೆ ಲಕ್ನೋ ಕಂಟೋನ್ಮೆಂಟ್‌ನ ಸರ್ಕಲ್ ಅಧಿಕಾರಿ ಬೀನು ಸಿಂಗ್ ಅವರಲ್ಲಿ ಸ್ವಾತಿ ಸಿಂಗ್ ಪ್ರಶ್ನಿಸುತ್ತಿರುವುದು ಕೇಳಿ ಬಂದಿದೆ.

‘‘ನೀವು ಇದನ್ನು ಯಾಕೆ ಬರೆದಿರಿ? ಈಗ ಯಾವುದೇ ಎಫ್‌ಐಆರ್ ಅನ್ನು ಬರೆಯಬಾರದು ಎಂಬ ಬಗ್ಗೆ ಮೇಲಿಂದ ಆದೇಶ ಬಂದಿರುವ ಬಗ್ಗೆ ನಿಮಗೆ ಗೊತ್ತಿಲ್ಲವೇ?” ಎಂದು ಅವರು ಪ್ರಶ್ನಿಸುತ್ತಿರುವುದು ಕೇಳಿ ಬಂದಿದೆ.

ಎಫ್‌ಐಆರ್ ದಾಖಲಿಸುವ ಮುನ್ನ ತನಿಖೆ ನಡೆಸಲಾಗಿದೆ ಎಂದು ಸರ್ಕಲ್ ಅಧಿಕಾರಿ ವಿವರಣೆ ನೀಡಿದಾಗ ಸಚಿವರು, ‘‘ಯಾವ ವಿಚಾರಣೆ ? ಇದು ಹೈ ಪ್ರೊಫೈಲ್ ಪ್ರಕರಣದಂತೆ. ಈ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಅವರಿಗೆ ಕೂಡ ತಿಳಿದಿದೆ. ಯಾವ ತನಿಖೆಯನ್ನು ನೀವು ನಡೆಸಿದ್ದೀರಿ? ನಿಮ್ಮನ್ನು ಇಲ್ಲಿಗೆ ನಾಲ್ಕೈದು ದಿನಗಳಿಗೆ ನಿಯೋಜಿಸಲಾಗಿದೆ’’ ಎಂದು ಸಚಿವೆ ಹೇಳುವುದು ಅಡಿಯೊದಲ್ಲಿ ಕೇಳಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News