ಭಾರತದ ಅರ್ಥವ್ಯವಸ್ಥೆಯ ಬಗ್ಗೆ ಬಿಲ್‌ಗೇಟ್ಸ್ ಹೇಳಿದ್ದು ಹೀಗೆ…

Update: 2019-11-17 14:28 GMT
ಫೋಟೊ: business-standard.com

ಹೊಸದಿಲ್ಲಿ, ನ.17: ಭಾರತವು ಮುಂದಿನ ದಶಕದಲ್ಲಿ ಅತ್ಯಂತ ತೀವ್ರಗತಿಯ ಆರ್ಥಿಕ ಅಭಿವೃದ್ಧಿ ಹೊಂದುವ ವಿಶ್ವಾಸವಿದೆ ಎಂದು ಮೈಕ್ರೊಸಾಫ್ಟ್‌ನ ಸಹಸಂಸ್ಥಾಪಕ ಬಿಲ್ ಗೇಟ್ಸ್ ಹೇಳಿದ್ದಾರೆ.

ಆಧಾರ್ ಕಾರ್ಡ್ ವ್ಯವಸ್ಥೆಯನ್ನು ಶ್ಲಾಘಿಸಿರುವ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆ ಹೊಂದಿರುವ ಬಿಲ್ ಗೇಟ್ಸ್, ಆರ್ಥಿಕ ಸೇವೆ ಮತ್ತು ಔಷಧ ಕ್ಷೇತ್ರದಲ್ಲಿ ಭಾರತದ ಸಾಧನೆ ಅಭಿನಂದನಾರ್ಹ ಎಂದು ಹೇಳಿದ್ದಾರೆ.

“ಅಲ್ಪಾವಧಿಯ ಬಗ್ಗೆ ನನಗೆ ತಿಳಿದಿಲ್ಲ, ಆದರೆ ಮುಂದಿನ ದಶಕದ ಅವಧಿಯಲ್ಲಿ ಅತ್ಯಂತ ಕ್ಷಿಪ್ರಗತಿಯ ವಿಕಾಸ ಹೊಂದುವ ಅಂತಸ್ಸತ್ವವಿದೆ. ಇದು ಜನರನ್ನು ಬಡತನದಿಂದ ಮೇಲೆತ್ತಲು ಮತ್ತು ಆದ್ಯತಾ ಕ್ಷೇತ್ರಗಳಾದ ಆರೋಗ್ಯ ಹಾಗೂ ಶಿಕ್ಷಣ ವಲಯದಲ್ಲಿ ಹೆಚ್ಚಿನ ಹೂಡಿಕೆ ಮಾಡುವ ಚೈತನ್ಯವನ್ನು ಸರಕಾರಕ್ಕೆ ಒದಗಿಸಲಿದೆ . ಅತ್ಯಂತ ತ್ವರಿತವಾಗಿ ವಿಕಾಸ ಹೊಂದುವ ಅಂತಸ್ಸತ್ವವನ್ನು ಭಾರತ ಹೊಂದಿದೆ ಮತ್ತು ತ್ವರಿತ ವಿಕಾಸವನ್ನು ಪ್ರತಿಯೊಬ್ಬರೂ ನಿರೀಕ್ಷಿಸುತ್ತಿದ್ದಾರೆ ಎಂದು ಬಿಲ್‌ಗೇಟ್ಸ್ ಹೇಳಿದ್ದಾರೆ. ತಮ್ಮ ಪ್ರತಿಷ್ಠಾನದ ಕಾರ್ಯಕ್ರಮಗಳನ್ನು ಪರಿಶೀಲಿಸಲು ಅವರು ಈಗ ಭಾರತಕ್ಕೆ ಮೂರು ದಿನಗಳ ಭೇಟಿ ನೀಡಿದ್ದಾರೆ.

110 ಬಿಲಿಯನ್ ಅಮೆರಿಕನ್ ಡಾಲರ್ ಸಂಪತ್ತನ್ನು ಹೊಂದಿರುವ 64 ವರ್ಷದ ಬಿಲ್‌ಗೇಟ್ಸ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹಿರಿಮೆಯನ್ನು ಶುಕ್ರವಾರ ಮರಳಿ ಕೈವಶ ಮಾಡಿಕೊಂಡಿದ್ದಾರೆ. ಬಡತನ ನಿವಾರಣೆ ಹಾಗೂ ಸಾಮಾಜಿಕ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್‌ಗೆ ಬಿಲ್‌ಗೇಟ್ಸ್ ಇದುವರೆಗೆ 35 ಬಿಲಿಯನ್ ಡಾಲರ್ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News