ಬಾಳ ಠಾಕ್ರೆ ಪುಣ್ಯತಿಥಿ: ಫಡ್ನವೀಸ್‌ ರನ್ನು ಲೇವಡಿ ಮಾಡಿದ ಶಿವಸೇನೆ ಕಾರ್ಯಕರ್ತರು

Update: 2019-11-17 15:13 GMT

ಮುಂಬೈ, ನ.17: ಶಿವಸೇನಾ ಸ್ಥಾಪಕ ಬಾಳ ಠಾಕ್ರೆಯವರ ಪುಣ್ಯತಿಥಿಯಾದ ರವಿವಾರ ಇಲ್ಲಿಯ ಶಿವಾಜಿ ಪಾರ್ಕ್‌ನಲ್ಲಿಯ ಅವರ ಸಮಾಧಿ ಸ್ಥಳದಲ್ಲಿ ಗೌರವಾರ್ಪಣೆ ಸಲ್ಲಿಸಿ ಮರಳುತ್ತಿದ್ದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಘೋಷಣೆಗಳನ್ನು ಕೂಗುತ್ತಿದ್ದ ಕೆಲವು ಸೇನಾ ಕಾರ್ಯಕರ್ತರು ಲೇವಡಿ ಮಾಡಿದ ಘಟನೆ ನಡೆದಿದೆ.

ಫಡ್ನವೀಸ್ ಅವರ ವಾಹನಗಳ ಸಾಲಿನ ಬಳಿ ನಿಂತಿದ್ದ ಕಾರ್ಯಕರ್ತರು ‘ನಾನು ಮುಖ್ಯಮಂತ್ರಿಯಾಗಿ ಮರಳುತ್ತೇನೆ ’ ಎಂಬ ಅವರ ಚುನಾವಣಾ ಪ್ರಚಾರದ ಘೋಷಣೆಯ ಜೊತೆಗೆ ಶಿವಸೇನೆಯ ಸಾಂಪ್ರದಾಯಿಕ ‘ಛತ್ರಪತಿ ಶಿವಾಜಿ ಮಹಾರಾಜ ಕೀ ಜೈ’ ಎಂಬ ಘೋಷಣೆಗಳನ್ನೂ ಕೂಗಿದರು.

ಫಡ್ನವೀಸ್ ಮತ್ತು ಅವರೊಂದಿಗಿದ್ದ ಹಲವಾರು ಹಿರಿಯ ಬಿಜೆಪಿ ಸಚಿವರು ಸೇನಾ ಕಾರ್ಯಕರ್ತರ ಅಣಕಗಳಿಗೆ ಪ್ರತಿಕ್ರಿಯಿಸದೆ ಅಲ್ಲಿಂದ ತೆರಳಿದರು. ಫಡ್ನವೀಸ್ ಅವರು ಶಿವಾಜಿ ಪಾರ್ಕ್‌ಗೆ ಆಗಮಿಸಿದ ಸಂದರ್ಭದಲ್ಲಿ ಉದ್ಧವ್ ಠಾಕ್ರೆಯವರ ಆಪ್ತ ಸಹಾಯಕ ಮಿಲಿಂದ ನಾರ್ವೇಕರ್ ಹೊರತು ಪಡಿಸಿದರೆ ಶಿವಸೇನೆಯ ನಾಯಕರಾರೂ ಸ್ಥಳದಲ್ಲಿರಲಿಲ್ಲ.

ಮಹಾರಾಷ್ಟ್ರದಲ್ಲಿ ನೂತನ ಸರಕಾರ ರಚನೆಯ ವಿವಾದದಲ್ಲಿ ಶಿವಸೇನೆಯು ಬಿಜೆಪಿಯೊಂದಿಗಿನ ತನ್ನ ಮೂರು ದಶಕಗಳ ಮೈತ್ರಿಯನ್ನು ಕಡಿದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News