ಆಯುಷ್ಮಾನ್ ಭಾರತ ಯೋಜನೆ: ಫಲಾನುಭವಿಗಳಿಗೆ ದುಬಾರಿ ಚಿಕಿತ್ಸೆಗೆ ಆರೋಗ್ಯ ಸಚಿವಾಲಯದ ವಿರೋಧ

Update: 2019-11-17 15:22 GMT

ಹೊಸದಿಲ್ಲಿ, ನ.17: ರಾಷ್ಟ್ರೀಯ ಆರೋಗ್ಯ ನಿಧಿಯಡಿ ಆಯುಷ್ಮಾನ್ ಭಾರತ ಯೋಜನೆಯ ಫಲಾನುಭವಿಗಳಿಗೆ ಮಾರಣಾಂತಿಕ ಕಾಯಿಲೆಗಳಿಗೆ ದುಬಾರಿ ವೆಚ್ಚದ ಚಿಕಿತ್ಸೆಯನ್ನು ಒದಗಿಸುವ ಪ್ರಸ್ತಾವವನ್ನು ಆರೋಗ್ಯ ಸಚಿವಾಲಯವು ತಿರಸ್ಕರಿಸಿದೆ. ಆರೋಗ್ಯ ವಿಮೆ ಯೋಜನೆಯನ್ನು ಪರಿಷ್ಕರಿಸುವಂತೆ ಮತ್ತು ಇಂತಹ ರೋಗಿಗಳ ಚಿಕಿತ್ಸೆಗೆ ಅವಕಾಶವಾಗುವಂತೆ ಐದು ಲ.ರೂ.ಗಳ ಮಿತಿಯನ್ನು ಹೆಚ್ಚಿಸುವಂತೆ ಅದು ಸಲಹೆ ನೀಡಿದೆ.

ಸಚಿವಾಲಯಕ್ಕೆ ಮನವಿಯನ್ನು ಸಲ್ಲಿಸಿದ್ದ ಏಮ್ಸ್ ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ),ರಕ್ತ ಕ್ಯಾನ್ಸರ್ ಮತ್ತು ದೀರ್ಘಕಾಲಿಕ ಯಕೃತ್ತು ರೋಗಗಳು ಆರೋಗ್ಯ ವಿಮೆ ಯೋಜನೆಯ ವ್ಯಾಪ್ತಿಯಲ್ಲಿ ಇಲ್ಲದ್ದರಿಂದ ಇಂತಹ ಕಾಯಿಲೆಗಳಿಗಾಗಿ ಆಯುಷ್ಮಾನ್ ಭಾರತ ಫಲಾನುಭವಿಗಳಿಗೆ ಚಿಕಿತ್ಸೆ ಅಲಭ್ಯವಾಗಿರುವ ಪ್ರಕರಣಗಳನ್ನು ಉಲ್ಲೇಖಿಸಿದ್ದವು.

ಎರಡೂ ಯೋಜನೆಗಳಿಗೆ ಮಾನದಂಡಗಳು ವಿಭಿನ್ನವಾಗಿರುವುದರಿಂದ ಎನ್‌ಎಚ್‌ಎ ಮತ್ತು ಏಮ್ಸ್‌ನ ಪ್ರಸ್ತಾವಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವಾಲಯವು ಆಯುಷ್ಮಾನ್ ಭಾರತ-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನಾ (ಎಬಿ-ಪಿಎಂಜೆಎವೈ)ದ ಸಿಇಒ ಇಂದು ಭೂಷಣ್ ಅವರಿಗೆ ಬರೆದಿರುವ ಪತ್ರದಲ್ಲಿ ಸ್ಪಷ್ಟಪಡಿಸಿದೆ.

ರಾಷ್ಟ್ರೀಯ ಆರೋಗ್ಯ ನಿಧಿಯಡಿ ಹಣಕಾಸು ನೆರವನ್ನು ಒದಗಿಸಲು ಅರ್ಹತಾ ಮಾನದಂಡಕ್ಕೆ ರಾಜ್ಯಗಳು ಕಾಲದಿಂದ ಕಾಲಕ್ಕೆ ನಿಗದಿಪಡಿಸುವ ಬಡತನ ರೇಖೆ ಮಿತಿಯು ಆಧಾರವಾಗಿರುತ್ತದೆ ಮತ್ತು ಪಿಎಂಜೆಎವೈ 2011ರ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿಯ ದತ್ತಾಂಶಗಳನ್ನು ಆಧರಿಸಿರುವ ಅರ್ಹತೆಯನ್ನು ಮಾನದಂಡವಾಗಿ ಹೊಂದಿರುವ ಯೋಜನೆಯಾಗಿದೆ ಎಂದಿರುವ ಸಚಿವಾಲಯವು,ಹೀಗೆ ಎರಡೂ ಯೋಜನೆಗಳಿಗೆ ಅರ್ಹತಾ ಮಾನದಂಡಗಳು ವಿಭಿನ್ನವಾಗಿವೆ. ಅಲ್ಲದೆ ಎಬಿ-ಪಿಎಂಜೆಎವೈ ಅರ್ಹತೆ ಆಧಾರಿತ ಯೋಜನೆಯಾಗಿದ್ದರೆ ರಾಷ್ಟ್ರೀಯ ಆರೋಗ್ಯ ನಿಧಿ ಯೋಜನೆಯಡಿ ಲಭ್ಯ ಬಜೆಟ್ ಹಂಚಿಕೆಯ ಮಿತಿಯೊಳಗೆ ಅರ್ಹ ರೋಗಿಗಳಿಗೆ ನೆರವು ಒದಗಿಸಲಾಗುತ್ತದೆ ಎಂದು ತಿಳಿಸಿದೆ.

ರಾಷ್ಟ್ರೀಯ ಆರೋಗ್ಯ ನಿಧಿಯು ಚಿಕಿತ್ಸಾ ವೆಚ್ಚ ಐದು ಲ.ರೂ.ಮೀರುವ ಎಲ್ಲ ರೋಗಿಗಳಿಗೆ ಚಿಕಿತ್ಸೆಯನ್ನು ಒದಗಿಸುವ ಸಾರ್ವತ್ರಿಕ ಆರೋಗ್ಯ ಯೋಜನೆಯಲ್ಲ. ಅದು ಸರಕಾರದ ಆರೋಗ್ಯ ವ್ಯವಸ್ಥೆಗೆ ಪರ್ಯಾಯವಾಗಲು ಸಾಧ್ಯವಿಲ ಎಂದೂ ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News