ಅಸ್ಸಾಂ: ಆನೆ ‘ಬಿನ್ ಲಾದೆನ್’ ಸಾವು

Update: 2019-11-17 16:44 GMT
ಫೋಟೊ: ndtv.com

ಗುವಾಹಟಿ, ನ.17: ಅಸ್ಸಾಂನ ಅರಣ್ಯ ಇಲಾಖೆ ಸೆರೆಹಿಡಿದು ಬಳಿಕ ಪಳಗಿಸಿದ್ದ ಗಂಡು ಕಾಡಾನೆ ‘ಬಿನ್ ಲಾದೆನ್’ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೆರೆಹಿಡಿದು ಪಳಗಿಸಿದ್ದ ಈ ಕಾಡಾನೆ ಇತರ ಆನೆಗಳೊಂದಿಗೆ ಬೆರೆಯಲು ಆರಂಭಿಸಿತ್ತು. ಆದರೆ ರವಿವಾರ ಬೆಳಿಗ್ಗೆ 5:30ರ ವೇಳೆಗೆ ಸಾವನ್ನಪ್ಪಿರುವುದಾಗಿ ಮಾವುತರು ಮಾಹಿತಿ ನೀಡಿದ್ದಾರೆ ಎಂದು ಒರಾಂಗ್ ರಾಷ್ಟ್ರೀಯ ಉದ್ಯಾನದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪಶ್ಚಿಮ ಅಸ್ಸಾಂನ ಗೋಲ್‌ಪಾರ ಜಿಲ್ಲೆಯ ರೊಂಗ್‌ಜುಲಿ ಅರಣ್ಯಪ್ರದೇಶದಲ್ಲಿದ್ದ 35 ವರ್ಷದ ಈ ಸಲಗವನ್ನು ನವೆಂಬರ್ 11ರಂದು ಅರಣ್ಯಾಧಿಕಾರಿಗಳು ಸೆರೆಹಿಡಿದಿದ್ದರು. ನವೆಂಬರ್ 12ರಂದು ಆನೆಯನ್ನು ಒರಾಂಗ್ ರಾಷ್ಟ್ರೀಯ ಉದ್ಯಾನಕ್ಕೆ ವರ್ಗಾಯಿಸಿ ಅದನ್ನು ಪಳಗಿಸುವ ಪ್ರಕ್ರಿಯೆ ಆರಂಭವಾಗಿತ್ತು. ಖೆಡ್ಡಾಕ್ಕೆ ಬೀಳುವ ಮೊದಲು ಈ ಕಾಡಾನೆಗೆ ಸ್ಥಳೀಯರು ‘ಬಿನ್ ಲಾದೆನ್’ ಎಂದು ಹೆಸರಿಟ್ಟಿದ್ದರು. ಪಳಗಿಸಿದ ಬಳಿಕ ಈ ಆನೆಗೆ ‘ಕೃಷ್ಣ’ ಎಂದು ಮರುನಾಮಕರಣ ಮಾಡಲಾಗಿತ್ತು. ಆನೆಯ ಮರಣೋತ್ತರ ಪರೀಕ್ಷೆ ನಡೆಸಲು ಅಸ್ಸಾಂ ಸರಕಾರ ತಜ್ಞ ಪಶುವೈದ್ಯರ ತಂಡವನ್ನು ಸ್ಥಳಕ್ಕೆ ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News