ಬಂಧನ ಕೇಂದ್ರದಲ್ಲಿರುವ ಶಾ ಫೈಸಲ್, ಸಜ್ಜಾದ್ ಲೋನ್ ಗೆ ಹಲ್ಲೆ: ಇಲ್ತಿಜಾ ಮುಫ್ತಿ ಆರೋಪ

Update: 2019-11-18 04:20 GMT
ಫೋಟೊ: PTI/Wikipedia

ಶ್ರೀನಗರ, ನ. 17: ಶ್ರೀನಗರದ ಬಂಧನ ಕೇಂದ್ರದಿಂದ ರವಿವಾರ ವರ್ಗಾಯಿಸುವ ಸಂದರ್ಭ ಜಮ್ಮು ಹಾಗೂ ಕಾಶ್ಮೀರದ ಮೂವರು ರಾಜಕೀಯ ನಾಯಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ವರದಿಯನ್ನು ಪೊಲೀಸರು ನಿರಾಕರಿಸಿದ್ದಾರೆ.

ಕಾಶ್ಮೀರ ಚಳಿ ನಿರ್ವಹಿಸಲು ಬೇಕಾದ ಉಷ್ಣಾಂಶ ಹೆಚ್ಚಿಸುವ ಸೌಲಭ್ಯದ ಕೊರತೆ ಹಿನ್ನೆಲೆಯಲ್ಲಿ ಸೆಂಟೌರ್ ಹೊಟೇಲ್‌ನಿಂದ ಎಂಎಲ್‌ಎ ಹಾಸ್ಟೆಲ್‌ಗೆ ವರ್ಗಾಯಿಸಲಾಗಿದ್ದ 34 ಮಂದಿ ರಾಜಕೀಯ ನಾಯಕರಲ್ಲಿ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಸಜ್ಜಾದ್ ಲೋನ್, ಶಾ ಫೈಸಲ್ ಹಾಗೂ ವಾಹೀದ್ ಪಾರಾ ಕೂಡಾ ಇದ್ದಾರೆ.

ಪಿಡಿಪಿ ನಾಯಕಿ ಹಾಗೂ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಟ್ವಿಟರ್ ಖಾತೆ ಮೂಲಕ ಪುತ್ರಿ ಇಲ್ತಿಜಾ ಮುಫ್ತಿ ಹಲ್ಲೆ ಆರೋಪ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಈ ಪ್ರತಿಕ್ರಿಯೆ ನೀಡಿದ್ದಾರೆ. ವಶದಲ್ಲಿದ್ದ ನಾಯಕರನ್ನು ಎಂದಿನಂತೆ ತಪಾಸಣೆ ನಡೆಸಲಾಯಿತು ಹಾಗೂ ಅವರ ಲಗೇಜ್‌ಗಳನ್ನು ಪರಿಶೀಲಿಸಲಾಯಿತು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಶ್ರೀನಗರದ ಎಂಎಲ್‌ಎ ಹಾಸ್ಟೆಲ್‌ನಲ್ಲಿ ಕೆಲವು ರಾಜಕೀಯ ನಾಯಕರಿಗೆ ಹಲ್ಲೆ ನಡೆಸಲಾಗಿದೆ ಎಂದು ಕೆಲವು ಟ್ವಿಟರ್ ಹ್ಯಾಂಡಲ್ ಪ್ರತಿಪಾದಿಸಿವೆ. ಆದರೆ, ಅಂತಹ ಯಾವುದೇ ಘಟನೆಗಳು ನಡೆದಿಲ್ಲ. ರಾಜಕೀಯ ನಾಯಕರನ್ನು ವರ್ಗಾಯಿಸುವಾಗ ಕಡ್ಡಾಯ ಭದ್ರತ ಪರಿಶೀಲನೆ ಅನುಸರಿಸಿದ್ದೇವೆ ಎಂದು ಜಮ್ಮು ಹಾಗೂ ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ಇಮ್ತಿಯಾಝ್ ಹುಸೈನ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಕೇಂದ್ರ ಸರಕಾರ ಆಗಸ್ಟ್‌ನಲ್ಲಿ ವಿಧಿ 370 ರದ್ದುಗೊಳಿಸಿ ಆದೇಶ ಹೊರಡಿಸಿದ ಬಳಿಕ ಮೆಹಬೂಬಾ ಮುಫ್ತಿ, ಫಾರೂಕ್ ಅಬ್ದುಲ್ಲಾ ಹಾಗೂ ಉಮರ್ ಅಬ್ದುಲ್ಲಾ ಸೇರಿದಂತೆ ನೂರಾರು ರಾಜಕೀಯ ನಾಯಕರನ್ನು ವಶದಲ್ಲಿ ಇರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News