ಗೋವಾವನ್ನು ಮಣಿಸಿದ ಕರ್ನಾಟಕ

Update: 2019-11-17 18:28 GMT

ವಿಜಯನಗರ, ನ.17: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ-20 ಪಂದ್ಯದಲ್ಲಿ ರವಿವಾರ ಗೋವಾ ವಿರುದ್ಧ ಕರ್ನಾಟಕ 35 ರನ್‌ಗಳ ಜಯ ಗಳಿಸಿದೆ.173 ರನ್ ಗಳಿಸಬೇಕಿದ್ದ ಗೋವಾ ತಂಡ ಕರ್ನಾಟಕದ ಬೌಲರ್‌ಗಳ ಸಂಘಟಿತ ದಾಳಿಗೆ ಸಿಲುಕಿ 19.3 ಓವರ್‌ಗಳಲ್ಲಿ 137 ರನ್‌ಗಳಿಗೆ ಆಲೌಟಾಗಿದೆ.

ಗೋವಾ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಆದಿತ್ಯ ನಾಯಕ್ 48 ರನ್ ಗಳಿಸಿರುವುದು ತಂಡದ ಪರ ದಾಖಲಾದ ಗರಿಷ್ಠ ಸ್ಕೋರ್ ಆಗಿದೆ. ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡ ಗೋವಾ ತಂಡಕ್ಕೆ ಕರ್ನಾಟಕ ವಿಧಿಸಿದ ದೊಡ್ಡ ಸವಾಲನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ.

ಕರ್ನಾಟಕ ತಂಡದ ಬೌಲರ್‌ಗಳಾದ ಶ್ರೇಯಸ್ ಗೋಪಾಲ್ (14ಕ್ಕೆ 3), ಅಭಿಮನ್ಯು ಮಿಥುನ್(24ಕ್ಕೆ 2), ರೋಣಿತ್ ಮೋರೆ(24ಕ್ಕೆ 2), ಪ್ರವೀಣ್ ದುಬೆ(30ಕ್ಕೆ 2) ಜಗದೀಶ್ ಸುಚಿತ್(42ಕ್ಕೆ 1) ದಾಳಿಗೆ ಸಿಲುಕಿದ ಗೋವಾ ತಂಡ ಗೆಲುವಿನ ಹಾದಿಯಲ್ಲಿ ಎಡವಿದೆ.

2 ರನ್‌ಗಳ ಅಂತರದಲ್ಲಿ ಅರ್ಧಶತಕ ವಂಚಿತರಾದ ಗೋವಾದ ಆರಂಭಿಕ ಬ್ಯಾಟ್ಸ್ ಮನ್ ಆದಿತ್ಯ ನಾಯಕ್ ಅವರಿಗೆ ಸಾಥ್ ನೀಡಿದ ಮಲಿಕ್‌ಸಾಬ್ ಸಿರೂರ್ (27), ಸುಹಾಸ್ ಪ್ರಭುದೇಸಾಯಿ(28) ಗೆಲುವಾಗಿ ಹೋರಾಟ ನಡೆಸಿದ್ದರು. ತಂಡದ 3 ಮಂದಿ ಆಟಗಾರರು ಖಾತೆ ತೆರೆಯದೆ ನಿರ್ಗಮಿಸಿದರು.

► ಕರ್ನಾಟಕ 172/9:  ಕರ್ನಾಟಕ ತಂಡ ನಿಗದಿತ 20 ಓವರ್‌ಗಳಲ್ಲಿ 172ರನ್ ಗಳಿಸಿತ್ತು. ಪವನ್ ದೇಶಪಾಂಡೆ (63) ಅರ್ಧಶತಕ ದಾಖಲಿಸಿದರು. ಆರಂಭಿಕ ಬ್ಯಾಟ್ಸ್‌ಮನ್ ಲೋಕೇಶ್ ರಾಹುಲ್ ಮತ್ತು ದೇವದತ್ತ ಪಡಿಕ್ಕಲ್ ಮೊದಲ ವಿಕೆಟ್‌ಗೆ 22 ರನ್ ಸೇರಿಸಿದರು. ಪಡಿಕ್ಕಲ್ ಇಂದಿನ ಪಂದ್ಯದಲ್ಲಿ ವಿಫಲರಾದರು. ಅವರು 11 ರನ್ ಗಳಿಸಿದರು. ಲೋಕೇಶ್ ರಾಹುಲ್ (32) ಮತ್ತು ಮನೀಷ್ ಪಾಂಡೆ ಎರಡನೇ ವಿಕೆಟ್‌ಗೆ ಜೊತೆಯಾದರು. ಅವರು 27 ರನ್ ಜಮೆ ಮಾಡಿದರು. ನಾಯಕ ಕರುಣ್ ನಾಯರ್(21) ಮತ್ತು ಪವನ್ ದೇಶಪಾಂಡೆ 4ನೇ ವಿಕೆಟ್‌ಗೆ 34 ರನ್‌ಗಳ ಜೊತೆಯಾಟ ನೀಡಿ ತಂಡದ ಸ್ಕೋರ್‌ನ್ನು 106ಕ್ಕೆ ತಲುಪಿಸಿದರು ನಾಯಕ ನಾಯರ್ ನಿರ್ಗಮನದ ಬಳಿತ ತಂಡದ ಬ್ಯಾಟಿಂಗ್ ದುರ್ಬಲಗೊಂಡಿತು. ಜಗದೀಶ್ ಸುಚಿತ್(13) ಎರಂಡಕೆಯ ಸ್ಕೋರ್ ದಾಖಲಿಸಿದರು.

ಪವನ್ ದೇಶಪಾಂಡೆ ಏಕಾಂಗಿ ಹೋರಾಟ ನಡೆಸಿದ ಕಾರಣದಿಂದಾಗಿ ಕರ್ನಾಟಕ ತಂಡಕ್ಕೆ ಸ್ಪರ್ಧಾತ್ಮಕ ರನ್ ಸೇರಿಸಲು ಸಾಧ್ಯವಾಯಿತು. ಹೆರಾಂಬ್ ಪರಾಬ್(24ಕ್ಕೆ 5) ತಂಡದ ಪರ ಯಶಸ್ವಿ ಬೌಲರ್ ಎನಿಸಿಕೊಂಡರು. ಅಮೂಲ್ಯ ಪಂಡ್ರೇಕರ್(35ಕ್ಕೆ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News