ಇದು ಮೋದಿಯ ತುರ್ತು ಸ್ಥಿತಿ: ಜೆಎನ್‌ಯು ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಕ್ರಮ ಕುರಿತು ಯೆಚೂರಿ

Update: 2019-11-18 14:39 GMT

ಹೊಸದಿಲ್ಲಿ, ನ.18: ಪ್ರತಿಭಟನಾನಿರತ ಜೆಎನ್‌ಯು ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಕ್ರಮವನ್ನು ಸೋಮವಾರ ಖಂಡಿಸಿದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರು,ಇದು ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ನಿಭಾಯಿಸುವ ಸರಿಯಾದ ರೀತಿಯಲ್ಲ ಎಂದು ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಇದು ಮೋದಿಯವರ ತುರ್ತು ಸ್ಥಿತಿಯಾಗಿದೆ. ಪ್ರತಿಭಟನಾ ಸ್ಥಳದಲ್ಲಿ ಉಪಸ್ಥಿತ ಪೊಲೀಸರ ಸಂಖ್ಯೆ ನಾವು ತುರ್ತುಸ್ಥಿತಿಯಲ್ಲಿ ನೋಡಿದ್ದಕ್ಕಿಂತ ಹೆಚ್ಚಾಗಿದೆ. ಮೋದಿ ಸರಕಾರವು ವಿದ್ಯಾರ್ಥಿಗಳನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದೆ ಎಂದರು.

ಪ್ರಜಾಸತ್ತಾತ್ಮಕ ಸಮಾಜದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ಪ್ರಜಾಸತ್ತಾತ್ಮಕ ಹಕ್ಕು ಆಗಿದೆ. ವಿದ್ಯಾರ್ಥಿಗಳನ್ನು ಥಳಿಸುವುದು ಸರಕಾರದ ತೀವ್ರ ನಿರಂಕುಶತೆಯನ್ನು ತೋರಿಸುತ್ತದೆ ಎಂದು ತುರ್ತು ಸ್ಥಿತಿ ಸಂದರ್ಭ ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾಗಿದ್ದ ಯೆಚೂರಿ ಹೇಳಿದರು.

ತನ್ನ ವಿದ್ಯಾರ್ಥಿ ದಿನಗಳಲ್ಲಿ ಯಾವುದೇ ಹಿಂಸೆಯಿಲ್ಲದೆ ಸಂಸತ್ ಭವನದವರೆಗೂ ಜಾಥಾಗಳನ್ನು ಒಯ್ಯಲಾಗುತ್ತಿತ್ತು. ಇಲ್ಲಿ ಪೊಲೀಸರು ಇನ್ನೂ ಸಂಯಮವನ್ನು ಕಾಯ್ದುಕೊಂಡಿರುವ ವಿದ್ಯಾರ್ಥಿಗಳನ್ನು ಪ್ರಚೋದಿಸುತ್ತಿದ್ದಾರೆ ಎಂದರು.

ಹಾಸ್ಟೆಲ್ ಶುಲ್ಕ ಹೆಚ್ಚಳವನ್ನು ಸಂಪೂರ್ಣವಾಗಿ ಹಿಂದೆಗೆದುಕೊಳ್ಳಬೇಕು ಎಂಬ ಬೇಡಿಕೆಯೊಂದಿಗೆ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರ ಜಾಥಾದಲ್ಲಿ ತೆರಳಿದ್ದ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಪೊಲೀಸರು ಜೆಎನ್‌ಯು ಕ್ಯಾಂಪಸ್‌ನಿಂದ ಅರ್ಧ ಕಿ.ಮೀ.ದೂರದಲ್ಲಿಯೇ ತಡೆದಿದ್ದರು. ಕೆಲವರು ಮುಂದಕ್ಕೆ ಸಾಗಲು ಪ್ರಯತ್ನಿಸಿದ್ದರಾದರೂ ಭಾರೀ ಸಂಖ್ಯೆಯಲ್ಲಿದ್ದ ಪೊಲೀಸರು ಅದಕ್ಕೆ ಅವಕಾಶ ನೀಡಿರಲಿಲ್ಲ. ಈ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿ ನಾಯಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News