ಶೇ.5ರಷ್ಟು ಆರ್ಥಿಕ ಮಂದಗತಿಯಿಲ್ಲ, ನಮ್ಮದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ಸರಕಾರದ ಪ್ರತಿಪಾದನೆ

Update: 2019-11-18 14:44 GMT

ಹೊಸದಿಲ್ಲಿ, ನ.18: ಭಾರತವು ಶೇ.5ರಷ್ಟು ಆರ್ಥಿಕ ಮಂದಗತಿಯನ್ನು ಎದುರಿಸುತ್ತಿಲ್ಲ ಮತ್ತು ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಮುಂದುವರಿದಿದೆ ಎಂದು ಸರಕಾರವು ಸೋಮವಾರ ಲೋಕಸಭೆಯಲ್ಲಿ ಪ್ರತಿಪಾದಿಸಿದೆ.

ಆರ್ಥಿಕತೆಯನ್ನು ಸದೃಢಗೊಳಿಸಲು ಸರಕಾರವು ಬ್ಯಾಂಕುಗಳ ವಿಲೀನ,ಕೈಗಾರಿಕೆಗಳು,ವಿದೇಶಿ ನೇರ ಹೂಡಿಕೆಗಳು ಮತ್ತು ಎಂಎಸ್‌ಎಂಇ ಕೇತ್ರಕ್ಕೆ ತೆರಿಗೆ ರಿಯಾಯಿತಿಗಳು ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಸಹಾಯಕ ವಿತ್ತ ಸಚಿವ ಅನುರಾಗ್ ಠಾಕೂರ್ ಅವರು ಪ್ರಶ್ನೆವೇಳೆಯಲ್ಲಿ ತಿಳಿಸಿದರು. ದೇಶವು ಆರ್ಥಿಕ ಮಂದಗತಿಯನ್ನು ಎದುರಿಸುತ್ತಿದೆ ಎಂದು ಆಪ್ ಸಂಸದ ಭಗವಂತ ಮಾನ್ ಹೇಳಿದಾಗ,‘ ಶೇ.5ರಷ್ಟೂ ಮಂದಗತಿಯಿಲ್ಲ. ನಿಮಗೆ ಎಲ್ಲಿಂದ ಅಂಕಿಅಂಶಗಳು ದೊರಕಿವೆ? ನಮಗೂ ತೋರಿಸಿ ’ಎಂದು ಠಾಕೂರ್ ತಿಳಿಸಿದರು.

ವಿಶ್ವದಲ್ಲಿ ಹಲವಾರು ರಾಷ್ಟ್ರಗಳು ಆರ್ಥಿಕ ಹಿಂಜರಿತವನ್ನು ಅನುಭವಿಸುತ್ತಿವೆ,ಆದರೆ ಭಾರತವು ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಮುಂದುವರಿದಿದೆ ಎಂದ ಅವರು,2025ರ ವೇಳೆಗೆ ಭಾರತವು ಐದು ಟ್ರಿಲಿಯನ್ ಡಾಲರ್‌ಗಳ ಆರ್ಥಿಕತೆಯಾಗಲಿದೆ ಎಂದರು.

ಕಪ್ಪುಹಣದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನೋಟು ನಿಷೇಧ ಮತ್ತು ಜಿಎಸ್‌ಟಿ ಜಾರಿಯಿಂದಾಗಿ ತೆರಿಗೆ ಪಾವತಿಸುವವರ ಸಂಖ್ಯೆ ದುಪ್ಪಟ್ಟಾಗಿದೆ ಎಂದ ಅವರು,ರಾಷ್ಟ್ರೀಯ ಅಂಕಿಸಂಖ್ಯೆ ಕಚೇರಿಯ ವರದಿಯಂತೆ 2014-19ರ ಅವಧಿಯಲ್ಲಿ ಜಿಡಿಪಿ ವೃದ್ಧಿ ದರ ಶೇ.7.5ರಷ್ಟಿದ್ದು,ಇದು ಜಿ-20 ದೇಶಗಳಲ್ಲಿಯೇ ಅತ್ಯಂತ ಹೆಚ್ಚಿನದಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News