ಸ್ಥಾಯಿ ಸಮಿತಿ ಸಭೆಗಳಿಗೆ ಹಾಜರಾಗುವಂತೆ ಸಂಸದರಿಗೆ ರಾಜ್ಯಸಭೆಯಲ್ಲಿ ನಾಯ್ಡು ಆಗ್ರಹ

Update: 2019-11-18 14:50 GMT

ಹೊಸದಿಲ್ಲಿ, ನ.18: ಸಂಸದೀಯ ಸ್ಥಾಯಿ ಸಮಿತಿ ಸಭೆಗಳಿಗೆ ತಮ್ಮ ಸಂಸದರು ನಿಯಮಿತವಾಗಿ ಹಾಜರಾಗುವಂತೆ ನೋಡಿಕೊಳ್ಳುವಂತೆ ಸೋಮವಾರ ರಾಜ್ಯಸಭೆಯಲ್ಲಿ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ರಾಜಕೀಯ ಪಕ್ಷಗಳನ್ನು ಆಗ್ರಹಿಸಿದರು.

ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರ ರಾಜ್ಯಸಭೆಯನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಕಳೆದ ವಾರದ ವಾಯುಮಾಲಿನ್ಯ ಕುರಿತು ಸಂಸತ್ತಿನ ಸ್ಥಾಯಿ ಸಮಿತಿಯ ಸಭೆಯು ಸದಸ್ಯರ ಗೈರುಹಾಜರಿಯಿಂದಾಗಿ ಮುಂದೂಡಲ್ಪಟ್ಟಿದ್ದ ಘಟನೆಯನ್ನು ಪ್ರಸ್ತಾಪಿಸಿದ ನಾಯ್ಡು,ಸಂಸತ್ತಿನ ಸ್ಥಾಯಿ ಸಮಿತಿಗಳು ಮಹತ್ವದ ಕಾರ್ಯಗಳನ್ನು ಮಾಡುತ್ತಿವೆ. ಇಂತಹ ಸಮಿತಿಗಳ ಸದಸ್ಯರು ನಿಯಮಿತವಾಗಿ ಸಭೆಗಳಿಗೆ ಹಾಜರಾಗಬೇಕು ಮತ್ತು ಚರ್ಚೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಾನು ಕೋರುತ್ತಿದ್ದೇನೆ ಎಂದರು.

ದಿಲ್ಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಕುರಿತು ಕಳೆದ ಶುಕ್ರವಾರ ಕರೆಯಲಾಗಿದ್ದ ಸಂಸತ್ತಿನ ಸ್ಥಾಯಿ ಸಮಿತಿಯ ಮಹತ್ವದ ಸಭೆಯೊಂದು ದಿಲ್ಲಿ ಸಂಸದ ಬಿಜೆಪಿಯ ಗೌತಮ ಗಂಭೀರ್ ಸೇರಿದಂತೆ ಕೆಲವು ಸಂಸದರ ಗೈರು ಹಾಜರಾತಿಯಿಂದಾಗಿ ಮುಂದೂಡಲ್ಪಟ್ಟಿತ್ತು. 29 ಸದಸ್ಯರ ಪೈಕಿ ಕೇವಲ ನಾಲ್ವರು ಸದಸ್ಯರು ಉಪಸ್ಥಿತರಿದ್ದು,ಇತರರು ಸಭೆಗೆ ಗೈರುಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News