ತೈವಾನ್ ಜಲಸಂಧಿಯ ಮೂಲಕ ಹಾದು ಹೋದ ಚೀನಾ ಯುದ್ಧ ನೌಕೆ

Update: 2019-11-18 14:57 GMT
ಸಾಂದರ್ಭಿಕ ಚಿತ್ರ

ಬೀಜಿಂಗ್, ನ. 18: ತನ್ನ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ಯುದ್ಧ ನೌಕೆಯು ‘ದೈನಂದಿನ’ ತರಬೇತಿ ಮತ್ತು ತಪಾಸಣೆಗಳಿಗಾಗಿ ತೈವಾನ್ ಜಲಸಂಧಿಯಲ್ಲಿ ಹಾದುಹೋಗಿರುವುದನ್ನು ಚೀನಾ ಸೋಮವಾರ ಖಚಿತಪಡಿಸಿದೆ.

ತೈವಾನ್‌ನಲ್ಲಿ ಚುನಾವಣೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಚೀನಾವು ಸೇನಾ ಬಲವನ್ನು ತೋರಿಸಿ ಬೆದರಿಸುತ್ತಿದೆ ಎಂಬುದಾಗಿ ತೈವಾನ್ ಆರೋಪಿಸಿದ ಬಳಿಕ ಚೀನಾ ಈ ಪ್ರತಿಕ್ರಿಯೆ ನೀಡಿದೆ.

ಇನ್ನೂ ಹೆಸರಿಡದ ಈ ಯುದ್ಧ ನೌಕೆಯು ಚೀನಾದ ಎರಡನೇ ವಿಮಾನವಾಹಕ ಯುದ್ಧ ನೌಕೆಯಾಗಿದೆ ಹಾಗೂ ಅದು ಸೇವೆಗೆ ಇಳಿದ ಬಳಿಕ ಚೀನಾ ನೌಕಾ ಪಡೆಯ ಸಾಮರ್ಥ್ಯವನ್ನು ಭಾರೀ ಪ್ರಮಾಣದಲ್ಲಿ ವೃದ್ಧಿಸಲಿದೆ. ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾವು ಸ್ವಯಂ ಆಡಳಿತದ ತೈವಾನ್ ಮತ್ತು ನೆರೆಕರೆಯ ದೇಶಗಳಿಂದ ಸವಾಲುಗಳನ್ನು ಎದುರಿಸುತ್ತಿದೆ.

ಚೀನಾದ ಇನ್ನೊಂದು ವಿಮಾನವಾಹಕ ಯುದ್ಧ ನೌಕೆಯು ಸೋವಿಯತ್ ರಶ್ಯ ನಿರ್ಮಾಣದ್ದಾಗಿದೆ. ಚೀನಾವು ಅದನ್ನು ಯುಕ್ರೇನ್‌ನಿಂದ ಖರೀದಿಸಿದೆ.

ಯುದ್ಧ ನೌಕೆಯು ‘ವೈಜ್ಞಾನಿಕ ಸಂಶೋಧನೆ ಮತ್ತು ದೈನಂದಿನ ತರಬೇತಿ’ಗಾಗಿ ರವಿವಾರ ತೈವಾನ್ ಜಲಸಂಧಿಯ ಸೂಕ್ಷ್ಮ ಜಲಪ್ರದೇಶದ ಮೂಲಕ ದಕ್ಷಿಣ ಚೀನಾ ಸಮುದ್ರವನ್ನು ಪ್ರವೇಶಿಸಿತು ಎಂದು ನೌಕಾಪಡೆ ವಕ್ತಾರ ಚೆಂಗ್ ಡೆವೈ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯೊಂದರಲ್ಲಿ ತಿಳಿಸಿದರು.

‘‘ಅದು ಯಾವುದೇ ನಿರ್ದಿಷ್ಟ ಗುರಿಯೊಂದಿಗೆ ತೈವಾನ್ ಜಲಸಂಧಿಯ ಮೂಲಕ ಹಾದು ಹೋಗಿಲ್ಲ ಹಾಗೂ ಪ್ರಸಕ್ತ ರಾಜಕೀಯ ಸನ್ನಿವೇಶಕ್ಕೂ ಯುದ್ಧನೌಕೆಯ ಪ್ರಯಾಣಕ್ಕೂ ಯಾವುದೇ ಸಂಬಂಧವಿಲ್ಲ’’ ಎಂದು ಚೆಂಗ್ ನುಡಿದರು. ಆದರೆ ಅವರು ಹೆಚ್ಚಿನ ವಿವರಣೆಯನ್ನು ನೀಡಲಿಲ್ಲ.

ದಕ್ಷಿಣ ಚೀನಾ ಸಮುದ್ರದಲ್ಲಿ ಕೆಣಕುವುದನ್ನು ನಿಲ್ಲಿಸಿ: ಅಮೆರಿಕಕ್ಕೆ ಚೀನಾ ಎಚ್ಚರಿಕೆ

ಬ್ಯಾಂಕಾಕ್ (ಥಾಯ್ಲೆಂಡ್), ನ. 18: ದಕ್ಷಿಣ ಚೀನಾ ಸಮುದ್ರದಲ್ಲಿ ಕೆಣಕುವುದನ್ನು ನಿಲ್ಲಿಸಿ ಹಾಗೂ ತೈವಾನ್ ವಿಷಯದಲ್ಲಿ ‘ಹೊಸ ಅನಿಶ್ಚಿತತೆಗಳನ್ನು’ ಸೃಷ್ಟಿಸಬೇಡಿ ಎಂದು ಚೀನಾ ಸೋಮವಾರ ಅಮೆರಿಕದ ಸೇನೆಗೆ ಕರೆ ನೀಡಿದೆ.

ಜಗತ್ತಿನ ಎರಡು ಅತಿ ದೊಡ್ಡ ಆರ್ಥಿಕತೆಗಳ ನಡುವಿನ ಉದ್ವಿಗ್ನತೆಯನ್ನು ನಿವಾರಿಸಲು ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ಸೋಮವಾರ ಅಮೆರಿಕ ಮತ್ತು ಚೀನಾಗಳ ನಡುವೆ ನಡೆದ ಮಾತುಕತೆಯ ವೇಳೆ, ಚೀನಾದ ರಕ್ಷಣಾ ಸಚಿವ ವೇ ಫೆಂಗೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್‌ಗೆ ಈ ಎಚ್ಚರಿಕೆ ನೀಡಿದರು ಎಂದು ಚೀನಾದ ವಕ್ತಾರರೊಬ್ಬರು ತಿಳಿಸಿದರು.

ಎರಡು ವಾರಗಳ ಹಿಂದೆ, ದಕ್ಷಿಣ ಚೀನಾ ಸಮುದ್ರದ ನಿಬಿಡ ಜಲಮಾರ್ಗದಲ್ಲಿ ಚೀನಾದ ‘ಬೆದರಿಕೆ’ಯನ್ನು ಶ್ವೇತಭವನದ ಉನ್ನತ ಅಧಿಕಾರಿಯೊಬ್ಬರು ಖಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News