ಅಭದ್ರತೆ ಸಹಿಸಲು ಸಾಧ್ಯವಿಲ್ಲ: ಪ್ರತಿಭಟನಕಾರರಿಗೆ ಇರಾನ್ ಅಧ್ಯಕ್ಷ ರೂಹಾನಿ ಎಚ್ಚರಿಕೆ

Update: 2019-11-18 15:05 GMT

ಟೆಹರಾನ್ (ಇರಾನ್), ನ. 18: ಇರಾನ್‌ನಲ್ಲಿ ಅಭದ್ರತೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಆ ದೇಶದ ಅಧ್ಯಕ್ಷ ಹಸನ್ ರೂಹಾನಿ ರವಿವಾರ ಎಚ್ಚರಿಕೆ ನೀಡಿದ್ದಾರೆ.

ಎರಡು ದಿನಗಳ ಗಲಭೆಯಲ್ಲಿ ಇಬ್ಬರು ಸಾವಿಗೀಡಾದ ಬಳಿಕ ಅವರು ಈ ಎಚ್ಚರಿಕೆ ನೀಡಿದ್ದಾರೆ. ಗಲಭೆಯನ್ನು ನಿಯಂತ್ರಿಸುವುದಕ್ಕಾಗಿ ಪೊಲೀಸರು ಈಗಾಗಲೇ ಡಝನ್‌ಗಟ್ಟಲೆ ಜನರನ್ನು ಬಂಧಿಸಿದ್ದಾರೆ ಹಾಗೂ ಇಂಟರ್‌ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸಿದ್ದಾರೆ.

‘‘ಪ್ರತಿಭಟಿಸುವುದು ಜನರ ಹಕ್ಕು. ಆದರೆ ಪ್ರತಿಭಟನೆ ಬೇರೆ, ಗಲಭೆ ಬೇರೆ. ಸಮಾಜದಲ್ಲಿ ಅಭದ್ರತೆಗೆ ಅವಕಾಶ ನೀಡಲು ಸಾಧ್ಯವಿಲ್ಲ’’ ಎಂದು ಅವರು ಹೇಳಿದರು.

ಜನರ ಪ್ರತಿಭಟನೆಗಳಿಗೆ ಕಾರಣವಾದ ವಿವಾದಾಸ್ಪದ ಪೆಟ್ರೋಲ್ ಬೆಲೆ ಏರಿಕೆಯನ್ನು ರೂಹಾನಿ ಸಮರ್ಥಿಸಿಕೊಂಡರು. ತೀವ್ರ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಗಳಿಗೆ ಹಣ ಒದಗಿಸಲು ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಳೆದ ವರ್ಷದ ಮೇ ತಿಂಗಳಲ್ಲಿ, ಅಮೆರಿಕ ಇರಾನ್ ಪರಮಾಣು ಒಪ್ಪಂದದಿಂದ ಹಿಂದೆ ಸರಿದು ಇರಾನ್ ಮೇಲೆ ಕಠಿಣ ಆರ್ಥಿಕ ದಿಗ್ಬಂಧನಗಳನ್ನು ಹೇರಿದ ಬಳಿಕ ಇರಾನ್ ಜನರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಹಾಗಾಗಿ, ಆ ದೇಶದ ಹೆಚ್ಚಿನ ಜನರು ಈಗ ಹೆಚ್ಚಿನ ಹಣ ಕೊಟ್ಟು ಪೆಟ್ರೋಲ್ ಖರೀದಿಸುವ ಪರಿಸ್ಥಿತಿಯಲ್ಲಿ ಇಲ್ಲ.

ಪೆಟ್ರೋಲ್‌ಗೆ 50ರಿಂದ 200 ಶೇಕಡ ಬೆಲೆ ಏರಿಕೆ!

ಪ್ರತಿ ತಿಂಗಳು ಖರೀದಿಸುವ ಮೊದಲ 60 ಲೀಟರ್‌ವರೆಗಿನ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ ಈಗಿನ 10,000 ರಿಯಾಲ್ (ಸುಮಾರು 17 ರೂಪಾಯಿ)ನಿಂದ ಲೀಟರ್‌ಗೆ 15,000 ರಿಯಾಲ್ (ಸುಮಾರು 25.50 ರೂಪಾಯಿ)ಗೆ ಹಾಗೂ ಆ ಮಿತಿಯ ನಂತರ ಖರೀದಿಸುವ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 30,000 ರಿಯಾಲ್ (ಸುಮಾರು 51 ರೂಪಾಯಿ)ಗೆ ಏರಿಸಲು ಇರಾನ್ ಸರಕಾರ ಶುಕ್ರವಾರ ನಿರ್ಧರಿಸಿದೆ.

ಬೆಲೆ ಏರಿಕೆ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಇರಾನ್‌ನಲಿ ಅಶಾಂತಿ ತಲೆದೋರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News