ತ್ಯಾಜ್ಯ ನಿಗ್ರಹ ಅಭಿಯಾನಕ್ಕೆ ಹಳೆಯ ಹಾಡುಗಳನ್ನು ಮರುಸೃಷ್ಟಿಸುತ್ತಿರುವ ಪುಣೆಯ ಸ್ವಚ್ಛತಾ ಕಾರ್ಮಿಕ

Update: 2019-11-18 15:37 GMT

ಪುಣೆ, ನ.18: ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯಗಳನ್ನು ಎಸೆಯುವ ಜನರನ್ನು ನಿರುತ್ತೇಜಿಸಲು ಪುಣೆ ಮಹಾನಗರ ಪಾಲಿಕೆ (ಪಿಎಂಸಿ)ಯ ಸ್ವಚ್ಛತಾ ಕಾರ್ಮಿಕ ಮಹಾದೇವ ಜಾಧವ್ (57) ಅವರು ಹಳೆಯ ಬಾಲಿವುಡ್ ಹಾಡುಗಳನ್ನು ಬಳಸಿಕೊಳ್ಳುತ್ತಿರುವ ವಿಶಿಷ್ಟ ಶೈಲಿಯು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

ಪುಣೆಯ ಪಾರ್ವತಿ ನಗರ ಪ್ರದೇಶದಲ್ಲಿ ಬೆಳಗಿನ ವಾಯುವಿಹಾರಕ್ಕೆ ಬಂದಿದ್ದ ಕೆಲವು ಸುಶಿಕ್ಷಿತರು ತ್ಯಾಜ್ಯಗಳಿದ್ದ ಪ್ಲಾಸ್ಟಿಕ್ ಚೀಲಗಳನ್ನು ರಸ್ತೆಗಳಲ್ಲಿ ಎಸೆಯುತ್ತಿರುವುದನ್ನು ಕಂಡಾಗ ವಿಡಂಬನೆಗೆ ಹಳೆಯ ಹಿಂದಿ ಹಾಡುಗಳನ್ನು ಬಳಸುವ ವಿಚಾರ ಜಾಧವ್ ತಲೆಗೆ ಹೊಳೆದಿತ್ತು.

‘ ನನಗೆ ಹಾಡುವಿಕೆ ಮತ್ತು ಕವನ ರಚನೆಯ ಆಸಕ್ತಿಯಿದ್ದು,ತ್ಯಾಜ್ಯ ನಿರ್ವಹಣೆ ಹಾಗೂ ಒಣ ಮತ್ತು ಹಸಿ ತ್ಯಾಜ್ಯಗಳ ವಿಂಗಡಣೆ ಬಗ್ಗೆ ಅರಿವು ಮೂಡಿಸಲು ಹಾಗೂ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯಗಳನ್ನು ಎಸೆಯದಂತೆ ಜನರನ್ನ್ನು ನಿರುತ್ತೇಜಿಸಲು ನಾನು ಈ ಆಸಕ್ತಿಯನ್ನು ಬಳಸಿಕೊಳ್ಳುತ್ತಿದ್ದೇನೆ ’ಎಂದು ಜಾಧವ್ ಹೇಳಿದರು.

ಬೀದಿಗಳಲ್ಲಿ ಕಸಗುಡಿಸುತ್ತಿರುವಾಗ ತನ್ನದೇ ರಚನೆಗಳನ್ನು ಹಳೆಯ ಜನಪ್ರಿಯ ಹಿಂದಿ ಹಾಡುಗಳ ಧಾಟಿಯಲ್ಲಿ ಹಾಡುವ ಮೂಲಕ ಜನರ ಗಮನವನ್ನು ಸೆಳೆಯುತ್ತಿರುವ ಜಾಧವ್ ಅವರ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಉದಾಹರಣೆಗೆ ‘ಕಜರಾ ಮುಹಬ್ಬತ್ ವಾಲಾ,ಅಂಖಿಯೋಮೆ ಐಸಾ ಡಾಲಾ, ಕಜರೇನೆ ಲೇ ಲೀ ಮೇರಿ ಜಾನ್,ಹಾಯ್ ರೆ ಮೈ ತೇರಿ ಕುರ್ಬಾನ್’ ಎಂಬ ಪ್ರಸಿದ್ಧ ಹಾಡನ್ನು ಜಾಧವ್ ‘ಕಚರಾ ಸೂಖಾ ಔರ್ ಗೀಲಾ,ಸಬ್‌ನೆ ಮಿಲಾಕರ್ ಡಾಲಾ,ಕಚರೇನೆ ಲೇ ಲೀ ಸಬ್‌ಕೆ ಜಾನ್,ಗೌರ್ ಸೆ ಸುನಿಯೆ ಮೆಹರಬಾನ್......’ಎಂದು ಪುನರ್‌ರಚಿಸಿ ಅದೇ ಧಾಟಿಯಲ್ಲಿ ಹಾಡುತ್ತಾರೆ. ಇಂತಹ ಕೆಲವು ಹಾಡುಗಳು ಅವರ ಬತ್ತಳಿಕೆಯಲ್ಲಿವೆ.

ಪಿಎಂಸಿ ಸಾಂಸ್ಕೃತಿಕ ತಂಡದ ಮುಖ್ಯ ಸದಸ್ಯರಾಗಿರುವ ಜಾಧವ್ ತನ್ನ ಸಮಾನ ಮನಸ್ಕ ಸಹೊದ್ಯೋಗಿಗಳೊಂದಿಗೆ ಶಾಲಾಕಾಲೇಜುಗಳು ಮತ್ತು ಹೌಸಿಂಗ್ ಸೊಸೈಟಿಗಳಿಗೆ ಭೇಟಿ ನೀಡಿ ತನ್ನ ವಿಶಿಷ್ಟ ಶೈಲಿಯ ಮೂಲಕ ತ್ಯಾಜ್ಯ ನಿರ್ವಹಣೆಯ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿಯೂ ತೊಡಗಿಕೊಂಡಿದ್ದಾರೆ.

ಕೇಂದ್ರ ಸರಕಾರದ ಸ್ವಚ್ಛತಾ ಸಮೀಕ್ಷೆಗಾಗಿ ಪಿಎಂಸಿ ನಡೆಸಲಿರುವ ಸ್ವಚ್ಛತಾ ಅಭಿಯಾನಕ್ಕೆ ಜಾಧವ್ ಅವರನ್ನು ಬ್ರಾಂಡ್ ರಾಯಭಾರಿಯನ್ನಾಗಿಸಲು ನಾವು ಉದ್ದೇಶಿಸಿದ್ದೇವೆ ಎಂದು ಸ್ವಚ್ಛತಾ ವಿಭಾಗದ ಮುಖ್ಯಸ್ಥ ಜ್ಞಾನೇಶ್ವರ ಮೋಲಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News