ನನ್ನೊಂದಿಗೆ ಕೆಲಸ ಮಾಡಿ: ಅಲ್ಪಸಂಖ್ಯಾತರಿಗೆ ಗೊಟಬಯ ಕರೆ

Update: 2019-11-18 15:39 GMT
ಫೋಟೊ:  Dinuka Liyanawatte/Reuters

ಅನುರಾಧಪುರ (ಶ್ರೀಲಂಕಾ), ನ. 18: ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಾಜಿ ಸೇನಾಧಿಕಾರಿ ಗೊಟಬಯ ರಾಜಪಕ್ಸ ಸೋಮವಾರ ಸಂಪ್ರದಾಯಕ್ಕೆ ವಿರುದ್ಧವಾಗಿ ದೇಶದ ಪ್ರಾಚೀನ ನಗರ ಅನುರಾಧಾಪುರದಲ್ಲಿರುವ ಪ್ರಾಚೀನ ಬೌದ್ಧ ದೇವಾಲಯದಲ್ಲಿ ಅಧಿಕಾರದ ಪ್ರಮಾಣವಚನ ಸ್ವೀಕರಿಸಿದರು.

ಅವರ ಪ್ರಮಾಣವಚನವು ಹಲವು ವಿಧಗಳಲ್ಲಿ ಮಹತ್ವ ಪಡೆದುಕೊಂಡಿದೆ. ಅವರು ಪ್ರಮಾಣವಚನ ಸ್ವೀಕರಿಸಿದ ದೇವಸ್ಥಾನವನ್ನು 2,000ಕ್ಕೂ ಹೆಚ್ಚು ವರ್ಷಗಳ ಹಿಂದೆ ಸಿಂಹಳೀಯ ರಾಜನೊಬ್ಬ ನಿರ್ಮಿಸಿದ್ದಾನೆ. ಆ ರಾಜನು ದಂಡೆತ್ತಿ ಬಂದ ತಮಿಳರನ್ನು ಸೋಲಿಸಿದ್ದನು. ಇದು ಅವರ ಪ್ರಧಾನ ಬೆಂಬಲ ಗುಂಪಾದ ಸಿಂಹಳೀಯ ಬೌದ್ಧ ಜನಾಂಗೀಯರಿಗೆ ನೀಡಿದ ಸಂದೇಶವೂ ಆಗಿದೆ. ತನ್ನ ಪ್ರಧಾನ ಬೆಂಬಲ ಗುಂಪಿನಲ್ಲಿ ಅವರು ಭಾರೀ ಜನಪ್ರಿಯರಾಗಿದ್ದಾರೆ.

10 ವರ್ಷಗಳ ಹಿಂದೆ ಪ್ರತ್ಯೇಕತಾವಾದಿ ತಮಿಳು ಬಂಡುಕೋರರನ್ನು ನಿರ್ಮೂಲಗೊಳಿಸುವಲ್ಲಿ ಆಗ ಸೇನಾಧಿಕಾರಿಯಾಗಿದ್ದ ಗೊಟಬಯ ರಾಜಪಕ್ಸ ಪ್ರಮುಖ ಪಾತ್ರ ವಹಿಸಿದ್ದರು.

ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಜನಾಂಗೀಯ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಭಾಷಣಗಳನ್ನು ಮಾಡಿಯೇ ಗೊಟಬಯ ಅಧಿಕಾರಕ್ಕೆ ಬಂದ ಬಳಿಕ, ಅಲ್ಪಸಂಖ್ಯಾತರು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ.

ಪ್ರಮಾಣವಚನದ ಬಳಿಕ ಮಾತನಾಡಿದ ಗೊಟಬಯ ರಾಜಪಕ್ಸ, ತನ್ನೊಂದಿಗೆ ಕೆಲಸ ಮಾಡುವಂತೆ ಅಲ್ಪಸಂಖ್ಯಾತರನ್ನು ಒತ್ತಾಯಿಸಿದರು.

ನನ್ನ ವಿಜಯಕ್ಕೆ ಬೌದ್ಧ ಬಿಕ್ಕುಗಳ ಅಪಾರ ಆಶೀರ್ವಾದವೇ ಕಾರಣ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

‘‘ಸಿಂಹಳ ಬಹುಸಂಖ್ಯಾತರ ಮತ ಇಂದು ನನ್ನನ್ನು ಅಧ್ಯಕ್ಷ ಪೀಠದಲ್ಲಿ ಕೂರಿಸಿದೆ ಎನ್ನುವುದೇ ಈ ಚುನಾವಣೆಯ ಪ್ರಮುಖ ಸಂದೇಶವಾಗಿದೆ’’ ಎಂದು 70 ವರ್ಷದ ನಿವೃತ್ತ ಕರ್ನಲ್ ಹೇಳಿದರು.

‘ಸಿಂಹಳ ಬಹುಸಂಖ್ಯಾತರ ಮತಗಳಿಂದ ಮಾತ್ರ ಗೆಲ್ಲಬಲ್ಲೆ ಎಂದು ಗೊತ್ತಿತ್ತು’

‘‘ಸಿಂಹಳ ಬಹುಸಂಖ್ಯಾತರ ಮತಗಳಿಂದ ಮಾತ್ರ ನಾನು ಗೆಲ್ಲಬಲ್ಲೆ ಎಂದು ನನಗೆ ಗೊತ್ತಿತ್ತು. ಆದರೆ, ನನ್ನ ಯಶಸ್ಸಿನಲ್ಲಿ ಭಾಗಿಯಾಗುವಂತೆ ನಾನು ತಮಿಳರು ಮತ್ತು ಮುಸ್ಲಿಮರನ್ನು ವಿನಂತಿಸಿದೆ. ಅವರ ಪ್ರತಿಕ್ರಿಯೆ ನಾನು ನಿರೀಕ್ಷಿಸಿದಂತೆ ಇರಲಿಲ್ಲ. ಆದರೂ, ಒಂದು ಶ್ರೀಲಂಕಾವನ್ನು ನಿರ್ಮಿಸಲು ನನ್ನೊಂದಿಗೆ ಕೈಜೋಡಿಸುವಂತೆ ನಾನು ಅವರನ್ನು ಒತ್ತಾಯಿಸುತ್ತೇನೆ’’ ಎಂದರು.

ಅವರ ಅಣ್ಣ ಮಹಿಂದ ರಾಜಪಕ್ಸ 2005ರಿಂದ 2015ರವರೆಗೆ ದೇಶದ ಅಧ್ಯಕ್ಷರಾಗಿದ್ದಾಗ ಅವರು ರಕ್ಷಣಾ ಇಲಾಖೆಯ ಮುಖ್ಯಸ್ಥರಾಗಿದ್ದರು. ಇದೇ ಅವಧಿಯಲ್ಲಿ ಸೇನೆಯು 37 ವರ್ಷದ ಆಂತರಿಕ ಯುದ್ಧವನ್ನು ಕೊನೆಗೊಳಿಸಲು ಭೀಕರ ದಮನ ಕಾರ್ಯಾಚರಣೆ ನಡೆಸಿತು. ಈ ಭೀಕರ ಸೇನಾ ಕಾರ್ಯಾಚರಣೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಯುದ್ಧದ ಕೊನೆಯ ಘಟ್ಟಗಳಲ್ಲಿ ಸುಮಾರು 40,000 ತಮಿಳು ನಾಗರಿಕರನ್ನು ಸೇನೆ ಕೊಂದಿದೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News