ಉನ್ನಾವೊ: ಹಿಂಸಾರೂಪಕ್ಕೆ ತಿರುಗಿದ ಸಂತ್ರಸ್ತ ರೈತರ ಪ್ರತಿಭಟನೆ

Update: 2019-11-18 16:01 GMT

ಹೊಸದಿಲ್ಲಿ, ನ.18: ಉತ್ತರಪ್ರದೇಶ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ (ಯುಪಿಎಲ್‌ಐಡಿಸಿ)ಕ್ಕಾಗಿ ವಶಪಡಿಸಿಕೊಳ್ಳಲಾದ ತಮ್ಮ ಜಮೀನಿಗೆ ಉತ್ತಮ ಪರಿಹಾರ ನೀಡುವಂತೆ ಕೋರಿ ಉತ್ತರಪ್ರದೇಶದ ಉನ್ನಾವೊದ ರೈತರು ಕಳೆದ ಎರಡು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಸೋಮವಾರ ಹಿಂಸಾರೂಪಕ್ಕೆ ತಿರುಗಿದೆ.

ಪೊಲೀಸರೊಂದಿಗೆ ಘರ್ಷಣೆಗಿಳಿದ ಉದ್ರಿಕ್ತ ಪ್ರತಿಭಟನಕಾರರು ಕಲ್ಲುತೂರಾಟ ನಡೆಸಿದರು. ಆ ಪ್ರದೇಶದಲ್ಲಿದ್ದ ಕಟ್ಟಡ ನಿರ್ಮಾಣ ಕೆಲಸದ ಯಂತ್ರಕ್ಕೆ ಉದ್ರಿಕ್ತರು ಬೆಂಕಿ ಹಚ್ಚಿದ್ದಾರೆ.

ಹಿಂಸಾಚಾರ ಹಾಗೂ ಸಾರ್ವಜನಿಕ ಸೊತ್ತಿಗೆ ಹಾನಿಯುಂಟು ಮಾಡಿದ ಆರೋಪದಲ್ಲಿ ಯುಪಿಎಸ್‌ಐಡಿಸಿ ತಾನು ಸಲ್ಲಿಸಿದ ಎಫ್‌ಐಆರ್‌ನಲ್ಲಿ ಎಂಟು ಮಂದಿಯನ್ನು ಆರೋಪಿಗಳೆಂದು ಹೆಸರಿಸಿದ್ದರೆ, ಉಳಿದ 200 ಮಂದಿಯನ್ನು ಹೆಸರಿಸಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಐವರನ್ನು ಬಂಧಿಸಲಾಗಿದೆಯೆಂದು ಅದು ತಿಳಿಸಿದೆ.

2002ರಲ್ಲಿ ವಿಶೇಷ ಆರ್ಥಿಕ ವಲಯ ಯೋಜನೆಗಾಗಿ ಉನ್ನಾವೊದ 115 ಎಕರೆ ಜಮೀನನ್ನು ಆಗಿನ ಅಖಿಲೇಶ್ ಯಾದವ್ ನೇತೃತ್ವದ ಸರಕಾರವು ವಪಡಿಸಿಕೊಂಡಿತ್ತು.

ಪ್ರತಿ ಗುಂಟೆ ಜಮೀನಿಗೆ 1.5 ಲಕ್ಷ ರೂ.ನಂತೆ ಪರಿಹಾರ ನೀಡುವುದಾಗಿ ಸರಕಾರವು ಪ್ರಕಟಿಸಿತ್ತು. ಆದರೆ 2015 ಹಾಗೂ 2016ರಲ್ಲಿ ರೈತರು ಪ್ರತಿಭಟನೆ ನಡೆಸಿದ ಬಳಿಕ ಪರಿಹಾರದ ಮೊತ್ತವನ್ನು ಪ್ರತಿ ಗುಂಟೆಗೆ 5.5 ಲಕ್ಷ ರೂ.ಗೆ ಹೆಚ್ಚಿಸಲಾಗಿತ್ತು. ಆದರೆ ಶೇ.30ರಷ್ಟು ರೈತರಿಗೆ ಇನ್ನೂ ಕೂಡಾ ಪರಿಹಾರ ದೊರೆತಿಲ್ಲವೆಂದು ರೈತ ಮುಖಂಡರು ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಅವರು ಕರೆ ನೀಡಿದ್ದರು.

 ರೈತರ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆಗಳು ಮುಂದುವರಿಯಲಿದೆಯೆದಂು ಚಳವಳಿಯ ನೇತೃತ್ವ ವಹಿಸಿರುವ ರಾಷ್ಟ್ರೀಯ ಕಿಸಾನ್ ಮಂಚ್ ತಿಳಿಸಿದೆ. ‘‘ನಾವು ಹಿಂದೆ ಸರಿಯಲಾರೆವು ಹಾಗೂ ಪ್ರತಿಯೊಬ್ಬ ರೈತನಿಗೂ ಪರಿಹಾರ ಸಿಗುವವರೆಗೆ ನಾವು ಪ್ರತಿಭಟನೆ ಮುಂದುವರಿಸಲಿದ್ದೇವೆ’’ ರಾಷ್ಟ್ರೀಯ ಕಿಸಾನ್ ಮಂಚ್ ಅಧ್ಯಕ್ಷ ಶೇಖರ್ ದೀಕ್ಷಿತ್ ತಿಳಿಸಿದ್ದಾರೆ.

ಪ್ರತಿಭಟನೆಯ ವೇಳೆ ಹಿಂಸಾಚಾರ ಮತ್ತೆ ಭುಗಿಲೇಳುವ ಸಾಧ್ಯತೆಯಿರುವುದರಿಂದ ಅದನ್ನು ತಡೆಯಲು ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News