ಆರ್ಥಿಕ ಹಿಂಜರಿತಕ್ಕೆ ಮೋದಿ ಸರಕಾರದ ದುರುದ್ದೇಶದ ನೀತಿಗಳೇ ಕಾರಣ: ಮನಮೋಹನ್ ಸಿಂಗ್

Update: 2019-11-18 17:20 GMT

ಹೊಸದಿಲ್ಲಿ, ನ.18: ಮೋದಿ ಸರಕಾರದ ತಪ್ಪು ನೀತಿಗಳಿಂದಾಗಿ, ಆರ್ಥಿಕ ಬೆಳವಣಿಗೆಯ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುವ ಜನರ ನಡುವೆ ಉಂಟಾಗಿರುವ ಗಾಢವಾದ ಭೀತಿ ಹಾಗೂ ಅಪನಂಬಿಕೆ ಉಂಟಾಗಿದ್ದು, ಇದರ ಪರಿಣಾಮವಾಗಿ ದೇಶದಲ್ಲಿ ಆರ್ಥಿಕ ಹಿಂಜರಿತವುಂಟಾಗಿದೆಯೆಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಅಭಿಪ್ರಾಯಿಸಿದ್ದಾರೆ.

ಮೋದಿ ಸರಕಾರವು ದುರುದ್ದೇಶಪೂರ್ವಕವಾಗಿ ದೇಶದ ಸಾಮಾಜಿಕ ಸಂರಚನೆಗೆ ಒಡಕುಂಟು ಮಾಡಿದೆಯೆಂದು ಅವರು ‘ದ ಹಿಂದೂ’ ದಿನಪತ್ರಿಕೆಗೆ ಬರೆದ ಲೇಖನದಲ್ಲಿ ಆಪಾದಿಸಿದ್ದಾರೆ. ಪ್ರಸಕ್ತ ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆಯು 15 ವರ್ಷಗಳಲ್ಲೇ ಅತ್ಯಂತ ಕಡಿಮೆಯೆಂದು ಉಲ್ಲೇಖಿಸಿದ ಅವರು, ನಿರುದ್ಯೋಗವು 45 ವರ್ಷಗಳಲ್ಲೇ ಅತ್ಯಧಿಕವಾಗಿದೆ ಎಂದಿದ್ದಾರೆ. ಗೃಹಬಳಕೆಯ ಉತ್ಪನ್ನಗಳ ಖರೀದಿಯು ಕಳೆದ ನಾಲ್ಕು ದಶಕಗಳಲ್ಲೇ ಈಗ ಅತ್ಯಂತ ತಳಮಟ್ಟಕ್ಕೆ ಕುಸಿದಿದೆ ಹಾಗೂ ಬ್ಯಾಂಕುಗಳು ವಸೂಲಾಗದ ಸಾಲದ ಸುಳಿಗೆ ಸಿಲುಕಿವೆ ಎಂದು ಮನಮೋಹನ್ ಆತಂಕ ವ್ಯಕ್ತಪಡಿಸಿದ್ದಾರೆ.

ದೇಶದ ಸ್ವಾಯತ್ತ ಸಂಸ್ಥೆಗಳ ಮೇಲೆ ಜನತೆಯ ನಂಬಿಕೆಯು ತೀವ್ರವಾಗಿ ನಶಿಸಿದೆ ಹಾಗೂ ಕಾನೂನು ಬಾಹಿರ ತೆರಿಗೆ ಕಿರುಕುಳ ಅಥವಾ ನ್ಯಾಯಯುತವಲ್ಲದ ನಿಯಮಾವಳಿಗಳ ವಿರುದ್ಧ ಜನರಿಗೆ ರಕ್ಷಣೆ ನೀಡುವಂತಹ ವ್ಯವಸ್ಥೆಯ ಕೊರತೆಯಿದೆ ಎಂದು ಲೇಖನದಲ್ಲಿ ಅಭಿಪ್ರಾಯಿಸಿದ್ದಾರೆ.

 ಭಾರದ ಆರ್ಥಿಕ ಬೆಳವಣಿಗೆ ಸ್ಥಗಿತಗೊಂಡಿದೆ. ಬ್ಯಾಂಕರ್‌ಗಳಿಗೆ ಸಾಲ ನೀಡಲು ಸಾಧ್ಯವಾಗುತ್ತಿಲ್ಲ ಕೈಗಾರಿಕೋದ್ಯಮಿಗಳಿಗೆ ಹೂಡಿಕೆ ಮಾಡಲು ಸಾಧ್ಯವಾಗುತ್ತಿಲ್ಲ ಹಾಗೂ ನೀತಿ ನಿರೂಪಕರಿಗೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲವೆಂದು ಅವರು ಹೇಳಿದ್ದಾರೆ.

 ಮೋದಿ ಸರಕಾರವು ಪ್ರತಿಯೊಬ್ಬರನ್ನು ಸಂಶಯ ಹಾಗೂ ಅಪನಂಬಿಕೆಯಿಂದ ನೋಡುತ್ತಿದೆ ಹಾಗೂ ನಗದು ಅಮಾನ್ಯತೆಯಂತಹ ನೀತಿಗಳ ಮೂಲಕ ತಾನೊಬ್ಬ ‘ಸಂರಕ್ಷಕನೆಂಬ ಹಾಗೆ ಬಿಂಬಿಸಿಕೊಳ್ಳುತ್ತದೆ. ಆದ ಇಂತಹ ನೀತಿಗಳು ವಿವೇಚನಾರಹಿತ ಹಾಗೂ ವಿನಾಶಕಾರಿಯೆಂದು ಈಗಾಗಲೇ ಸಾಬೀತಾಗಿದೆ ಎಂದು ಮನ್‌ಮೋಹನ್‌ಸಿಂಗ್ ಕಟಕಿಯಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News