ಎನ್‌ಡಿಎ ಒಂದು ಪಕ್ಷದ ಸೊತ್ತಲ್ಲ: ಶಿವಸೇನೆ

Update: 2019-11-18 17:21 GMT
PTI

ಹೊಸದಿಲ್ಲಿ, ನ. 18: ಸಂಸತ್ತಿನಲ್ಲಿ ಶಿವಸೇನೆ ಸಂಸದರನ್ನು ಪ್ರತಿಪಕ್ಷದ ಸೀಟುಗಳಲ್ಲಿ ಕುಳ್ಳಿರಿಸಿದ ಬಳಿಕ ಬಿಜೆಪಿಯನ್ನು ಸೋಮವಾರ ತರಾಟೆಗೆ ತೆಗೆದುಕೊಂಡಿರುವ ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಒಂದು ಪಕ್ಷದ ಸೊತ್ತಲ್ಲ. ಆದರೆ, ಕೆಲವರು ತಮ್ಮನ್ನು ದೇವರು ಎಂದು ಅಂದುಕೊಂಡಿದ್ದಾರೆ ಎಂದಿದ್ದಾರೆ.

‘‘ಪ್ರಜಾಪ್ರಭುತ್ವವನ್ನು ಅನುಸರಿಸಬೇಕು. ಒಬ್ಬರು ತಮ್ಮನ್ನು ದೇವರು ಎಂದು ಪರಿಗಣಿಸಬಾರದು. ಆಹಂನ ಕಾರಣದಿಂದ ಮಹಾರಾಷ್ಟ್ರದಲ್ಲಿ ಈ ರಾಜಕೀಯ ಸನ್ನಿವೇಶ ಸೃಷ್ಟಿಯಾಗಿದೆ. ನಾವು ಕೂಡ ಎನ್‌ಡಿಎಯ ನಾಲ್ವರು ಸ್ಥಾಪಕರಲ್ಲಿ ಒಬ್ಬರು. ಎನ್‌ಡಿಎ ಒಂದು ಪಕ್ಷದ ಸೊತ್ತಲ್ಲ. ಆದರೆ, ಕೆಲವು ಬಾರಿ ಅವರು ತಾವು ದೇವರು ಎಂದು ಭಾವಿಸುತ್ತಾರೆ’’ ಎಂದು ಸಂಜಯ್ ರಾವತ್ ಹೇಳಿದ್ದಾರೆ.

ನೀವು ಒಪ್ಪಿಕೊಂಡ ಒಪ್ಪಂದದಿಂದ ಹಿಂದಡಿ ಇಟ್ಟರೆ, ಅದು ಸರಿಯಲ್ಲ. ಎನ್‌ಡಿಎ ಸ್ಥಾಪಿಸಿದ ನಾಲ್ವರು ನಾಯಕರಲ್ಲಿ ಬಾಳಾ ಸಾಹೇಬ್ ಠಾಕ್ರೆ ಕೂಡ ಒಬ್ಬರು. ನಾವು ಹಲವು ಬಾರಿ ಎನ್‌ಡಿಎಯನ್ನು ರಕ್ಷಿಸಿದ್ದೇವೆ. ನಾವು ಎಂದೂ ಅವರ ಕೈ ಬಿಟ್ಟಿಲ್ಲ. ಆದರೆ, ಇಂದು ಅವರು ತಾವು ದೇವರು ಎಂದು ಭಾವಿಸಿದ್ದಾರೆ. ಎನ್‌ಡಿಎಯಿಂದ ಶಿವಸೇನೆಯನ್ನು ವಜಾಗೊಳಿಸಬೇಕು ಎಂದು ಭಾವಿಸಿದರೆ, ನೀವು ದೇವರಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಎನ್‌ಡಿಎಯಿಂದ ಶಿವಸೇನೆಯನ್ನು ತೆಗೆದು ಹಾಕಲು ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಮುನ್ನ ಬಿಜೆಪಿ ಪ್ರಕಾಶ್ ಸಿಂಗ್ ಬಾದಲ್ ಹಾಗೂ ನಿತೀಶ್ ಕುಮಾರ್ ಅವರೊಂದಿಗೆ ಕೇಳಿದ್ದಾರೆಯೇ ಎಂದು ರಾವತ್ ಪ್ರಶ್ನಿಸಿದರು.

ಈ ವರ್ತನೆ ನಡೆಯದು. ಶಿವಸೇನೆ ಜನರಿಗಾಗಿ ಕಾರ್ಯನಿರ್ವಹಿಸಲಿದೆ. ಆದುದರಿಂದ ಶಿವಸೇನೆಯ ಸಂಸದರನ್ನು ಸಂಸತ್ತಿನ ಎಲ್ಲಿ ಕುಳ್ಳಿರಿಸಿದರೂ ತೊಂದರೆ ಇಲ್ಲ ಎಂದು ಅವರು ಹೇಳಿದ್ದಾರೆ.

 ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಹಾಗೂ ಕಾಂಗ್ರೆಸ್‌ನೊಂದಿಗೆ ಸೇರಿ ತ್ರಿಪಕ್ಷ ಮೈತ್ರಿ ಸರಕಾರ ರೂಪಿಸುವ ಶಿವಸೇನೆಯ ಯೋಜನೆಯ ಕುರಿತು ಮಾತನಾಡಿದ ಅವರು, ಶೀಘ್ರದಲ್ಲಿ ಮಹಾರಾಷ್ಟ್ರ ಸರಕಾರ ರಚನೆಯಾಗಲಿದೆ. ಶಿವಸೇನೆಯವರು ಮುಖ್ಯಮಂತ್ರಿಯಾಗಲಿದ್ದಾರೆ. ಮೂರು ಪಕ್ಷಗಳ ಒಪ್ಪಿಕೊಂಡ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಆಧಾರದಲ್ಲಿ ಸರಕಾರ ಮುಂದುವರಿಯಲಿದೆ ಎಂದು ರಾವತ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News