ಸಂಸತ್ತಿನಲ್ಲಿ ಎನ್‌ಸಿಯ ಫಾರೂಕ್ ಅಬ್ದುಲ್ಲಾರ ಉಪಸ್ಥಿತಿಗೆ ಆಗ್ರಹಿಸಿದ ಪ್ರತಿಪಕ್ಷದ ಸದಸ್ಯರು

Update: 2019-11-18 17:25 GMT

ಹೊಸದಿಲ್ಲಿ, ನ. 18: ನ್ಯಾಷನಲ್ ಕಾನ್ಫರೆನ್ಸ್‌ನ ಸದಸ್ಯ ಪಾರೂಕ್ ಅಬ್ದುಲ್ಲಾ ಅವರನ್ನು ಗೃಹ ಬಂಧನದಿಂದ ಬಿಡುಗಡೆಗೊಳಿಸುವ ಹಾಗೂ ಸಂಸತ್ತಿನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವ ವಿಷಯದ ಬಗ್ಗೆ ಧ್ವನಿ ಎತ್ತಲು ಪ್ರತಿಪಕ್ಷಕ್ಕೆ ಯಾವುದೇ ಅವಕಾಶ ಸಿಕ್ಕಿಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಸೋಮವಾರ ಹೇಳಿದ್ದಾರೆ.

 ನಮ್ಮಲ್ಲಿ ಒಬ್ಬರಾದ ಫಾರೂಕ್ ಅಬ್ದುಲ್ಲಾ ಅವರು ಗೃಹ ಬಂಧನದ ಕಾರಣಕ್ಕೆ ಇಲ್ಲಿ ಇರದೇ ಇದ್ದರೂ ಸಂಸತ್ ಅಧಿವೇಶನ ಆರಂಭಿಸುತ್ತಿರುವ ಬಗ್ಗೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಲು ಯತ್ನಿಸಿದವು. ಆದರೆ, ನಮಗೆ ಈ ವಿಷಯವನ್ನು ಎತ್ತಲು ಕೂಡ ಅವಕಾಶ ನೀಡಲಿಲ್ಲ ಎಂದು ಅವರು ಹೇಳಿದ್ದಾರೆ.

 ಸರಕಾರದ ಆದೇಶದಂತೆ ಅಬ್ದುಲ್ಲಾ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಸರಕಾರ ತಾನು ಬಯಸಿದಾಗ ಅವರನ್ನು ಬಿಡುಗಡೆ ಮಾಡಬಹುದು ಎಂದು ಅವರು ತಿಳಿಸಿದರು.

 ಒಂದು ವೇಳೆ ಸರಕಾರ ಬಯಸಿದರೆ, ಅವರನ್ನು ಒಂದು ಗಂಟೆಯ ಒಳಗಡೆ ಬಿಡುಗಡೆ ಮಾಡಬಹುದು. ಆದುದರಿಂದ ಈ ವಿಷಯದ ಕುರಿತು ಸರಕಾರಕ್ಕೆ ಸೂಚಿಸುವಂತೆ ನಾವು ಸ್ಪೀಕರ್ ಅವರನ್ನು ಆಗ್ರಹಿಸಿದೆವು ಎಂದರು.

  ಫಾರೂಕ್ ಅಬ್ದುಲ್ಲಾ ಅವರು ಸದನದಲ್ಲಿ ಉಪಸ್ಥಿತರಿರುವಂತೆ ಪ್ರತಿಪಕ್ಷದ ಸದಸ್ಯರು ಕೋರಿದಾಗ ಸ್ಪೀಕರ್ ಓಂ ಬಿರ್ಲಾ, ಪಾರೂಕ್ ಅಬ್ದುಲ್ಲಾ ಅವರು ಗೃಹ ಬಂಧನದಲ್ಲಿ ಇರುವ ಬಗ್ಗೆ ತನ್ನಲ್ಲಿ ಲಿಖಿತ ಮಾಹಿತಿ ಇದೆ ಎಂದರು.

ಕಾಂಗ್ರೆಸ್, ಡಿಎಂಕೆ, ತೃಣಮೂಲ ಕಾಂಗ್ರೆಸ್ ಸಂಸದರು ಫಾರೂಕ್ ಅಬ್ದುಲ್ಲಾ ಅವರ ಉಪಸ್ಥಿತಿಯ ಬಗ್ಗೆ ಖಾತರಿ ನೀಡುವಂತೆ ಸ್ಪೀಕರ್ ಅವರನ್ನು ಆಗ್ರಹಿಸಿದರು. ಅನಂತರ ಸದನದ ಬಾವಿಗಿಳಿಗೆ ಅಬ್ದುಲ್ಲಾ ಅವರ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಇದಕ್ಕೆ ಎನ್‌ಸಿಪಿ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News