ಮಂಗಳೂರು : ರಸ್ತೆಯ ಗುಂಡಿಗಳನ್ನು ಮುಚ್ಚಿ ಮನಪಾಕ್ಕೆ ಸಡ್ಡು ಹೊಡೆಯುತ್ತಿರುವ ನಾಗರಿಕರ ತಂಡ

Update: 2019-11-19 12:15 GMT

ಮಂಗಳೂರು, ನ.19: ವಾಹನಗಳ ಸಂಚಾರಕ್ಕೆ ಅಯೋಗ್ಯವಾಗಿರುವ ನಗರದ ಪ್ರಮುಖ ರಸ್ತೆಗಳಲ್ಲಿನ ಹೊಂಡ ಗುಂಡಿಗಳನ್ನು ಮುಚ್ಚಿಸುವ ಅಭಿಯಾನವನ್ನು ಮಂಗಳೂರು ನಾಗರಿಕರ ಗುಂಪು (ಮಂಗಳೂರು ಸಿವಿಕ್ ಗ್ರೂಪ್) ಮುಂದುವರಿಸಿದೆ.

ಇಂದು ಮತ್ತೆ ನಗರದ ಪ್ರಮುಖ ಸ್ಥಳಗಳಲ್ಲಿನ ಕಿತ್ತು ಹೋಗಿರುವ ಇಂಟರ್‌ಲಾಕ್‌ಗಳನ್ನು ಮತ್ತೆ ಅಳವಡಿಸುವ ಮೂಲಕ ಮಹಾನಗರ ಪಾಲಿಕೆ ಆಡಳಿತದ ನಿರ್ಲಕ್ಷಕ್ಕೆ ಸೆಡ್ಡು ಹೊಡೆದಿದೆ. ತಮ್ಮದೇ ಸ್ವಂತ ಖರ್ಚಿನಲ್ಲಿ ಈ ನಾಗರಿಕರ ಗುಂಪು ಈ ಕಾರ್ಯವನ್ನು ನಡೆಸುವ ಮೂಲಕ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

72ರ ಹರೆಯಡ ಗಿಲ್ಬಟರ್ ಡಿಸೋಜಾ ಅವರ ನೇತೃತ್ವದಲ್ಲಿ ಕಳೆದ ಕೆಲ ದಿನಗಳ ಹಿಂದೆ ನಗರದ ಕಂಕನಾಡಿಯಿಂದ ಪಂಪ್‌ವೆಲ್‌ವರೆಗಿನ ಹೊಂಡಗುಂಡಿಗಳಿಗೆ ಡಾಮರೀಕರಣ ನಡೆಸಲಾಗಿತ್ತು. ತಮ್ಮದೇ ಸ್ವಂತ ಖರ್ಚಿನಲ್ಲಿ ಈ ಕಾರ್ಯ ಮಾಡಿದ್ದ ಗಿಲ್ಬರ್ಟ್ ಹಾಗೂ ಅವರ ಗುಂಪಿಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿತ್ತು. ಅವರ ಈ ಸಾಮಾಜಿಕ ಚಟುವಟಿಕೆಗೆ ನಗರದ ಟ್ರಾಫಿಕ್ ವಾರ್ಡನ್‌ಗಳು ಹಾಗೂ ಟ್ರಾಫಿಕ್ ಪೊಲೀಸರು ಸಹಕಾರ ನೀಡುತ್ತಿದ್ದಾರೆ.

ಇಂದು ಮತ್ತೆ ನಗರದ ಜ್ಯೋತಿ ಸರ್ಕಲ್, ಡಾನ್‌ಬಾಸ್ಕೋ ರಸ್ತೆ, ಹಂಪನ್‌ಕಟ್ಟ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಕಿತ್ತು ಹೋಗಿರುವ ಇಂಟರ್‌ಲಾಕ್‌ಗಳನ್ನು ಸರಿಪಡಿಸುವ ಕಾರ್ಯವನ್ನು ಸಿವಿಕ್ ಗ್ರೂಪ್ ಸದಸ್ಯರು ನಡೆಸಿದ್ದಾರೆ. ಇದಕ್ಕೆ ನಗರದ ಟ್ರಾಫಿಕ್ ವಾರ್ಡನ್‌ಗಳು ಹಾಗೂ ಟ್ರಾಫಿಕ್ ಪೊಲೀಸರು ಕೂಡಾ ನೆರವು ನೀಡಿದರು.

‘‘ರಸ್ತೆ ಬಳಸುವ ನಾವು ಕೂಡಾ ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಅಪಘಾತಗಳನ್ನು ತಪ್ಪಿಸಿ ಪ್ರಾಣ ಹಾನಿಯನ್ನು ರಕ್ಷಿಸಬಹುದು’’ ಎನ್ನುವ ಗಿಲ್ಬರ್ಟ್ ಡಿಸೋಜಾ, ತಮ್ಮ ಗುಂಪಿನ ಸದಸ್ಯರೊಂದಿಗೆ ಸ್ಥಳದಲ್ಲಿದ್ದು ರಸ್ತೆ ಗುಂಡಿ ಮುಚ್ಚಿಸುವ ಕಾರ್ಯ ನಡೆಸಿದರು.
ಜೆಸಿಬಿ, ಟಿಪ್ಪರ್ ಲಾರಿ ಬಳಸಿ, ಮರಳು, ಇಂಟರ್‌ಲಾಕ್‌ಗಳನ್ನು ತಂದು ಕಿತ್ತುಹೋಗಿರುವಲ್ಲಿ, ಅವುಗಳನ್ನು ಅಳವಡಿಸುವ ಕಾರ್ಯವನ್ನು ಇಂದು ನಡೆಸಲಾಯಿತು.

ಕಳೆದ ಹಲವು ದಿನಗಳಿಂದ ನಾವು ಮಾಡುತ್ತಿರುವ ಕಾರ್ಯವನ್ನು ಕಂಡು ಅನೇಕರು ಸ್ವಯಂಪ್ರೇರಣೆಯಿಂದ ನಮ್ಮ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ನಾವೆಲ್ಲಾ ಒಗ್ಗೂಡಿ ಇದೀಗ ಈ ಕಾರ್ಯವನ್ನು ಮಾಡುತ್ತಿದ್ದೇವೆ. ನಾಗರಿಕರು ಮನಸ್ಸು ಮಾಡಿದರೆ ಇಂತಹ ಸಮಾಜಕ್ಕೆ ಅಗತ್ಯವಾದ ಕೆಲಸಗಳನ್ನು ಮಾಡಲು ಸಾಧ್ಯ ಎನ್ನುತ್ತಾರೆ ಗಿಲ್ಬಟ್ ಹಾಗೂ ಅವರ ತಂಡ.

ಇಂದು ನಡೆಸಲಾದ ರಸ್ತೆ ಗುಂಡಿ ಮುಚ್ಚುವ ಕಾರ್ಯದಲ್ಲಿ ಅರ್ಜುನ್ ಮಸ್ಕರೇನಸ್, ಅಲೋಶಿಯಸ್ ಅಲ್ಬುಕರ್ಕ್, ಲ್ಯಾನ್ಸಿ ಮೆನೆಜಸ್, ಸ್ಟಾನಿ ಸುವರಿಸ್, ವಿಸ್ಟಯೆಂಟ್ ಡಿಸಿಲ್ವಾ ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News