ಎನ್‌ಎಂಪಿಟಿಯ ವಾಹನ ಚಾಲಕರ ಸುರಕ್ಷತೆಗಾಗಿ ಕಣ್ಣಿನ ತಪಾಸಣೆ

Update: 2019-11-19 09:48 GMT

ಮಂಗಳೂರು, ನ.19: ಎನ್‌ಎಂಪಿಟಿಯು ತನ್ನ ಖಾಸಗಿ ವಾಹನಗಳ ಚಾಲಕರ ಸುರಕ್ಷತೆಗೆ ಒತ್ತು ನೀಡುವ ಉದ್ದೇಶದಿಂದ ಶೆಲ್ ಇಂಡಿಯಾ ಮತ್ತು ವಿಷನ್ ಸ್ಪ್ರಿಂಗ್ ಸಂಸ್ಥೆಗಳ ಸಹಯೋಗದಲ್ಲಿ ಇಂದು ನೇತ್ರ ತಪಾಸಣಾ ಶಿಬಿರ ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಿತು.

ಎನ್‌ಎಂಪಿಟಿಯ ಆರೋಗ್ಯ ಕೇಂದ್ರದಲ್ಲಿ ಇಂದು ನಡೆದ ಶಿಬಿರಕ್ಕೆ ಅಧ್ಯಕ್ಷ ಎ.ವಿ. ರಮಣ್ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿ, ದೇಹದ ಎಲ್ಲಾ ಅಂಗಗಳಲ್ಲೂ ಪ್ರಧಾನವಾದುದು ಕಣ್ಣು. ಕಣ್ಣು ಆರೋಗ್ಯವಾಗಿದ್ದರೆ ಮಾತ್ರವೇ ನಿಸರ್ಗದ ಸೌಂದರ್ಯವನ್ನು ಸವಿಯಲು ಸಾಧ್ಯ. ಹಾಗೆಯೇ ಉತ್ತಮ ಜೀವನ ಸಾಗಿಸಲು ಸಹಕಾರಿ ಎಂದರು.

ಕಬ್ಬಿಣದ ಅದಿರು, ಗ್ರೆನೇಟ್ ಕಲ್ಲುಗಳು, ಕಾಫಿ, ಗೇರುಬೀಜ ಮೊದಲಾದ ಸಾಮಗ್ರಿಗಳನ್ನು ಅಪಾರ ಪ್ರಮಾಣದಲ್ಲಿ ರಫ್ತು ಮಾಡುವ ಹಾಗೂ ಕಚ್ಚಾ ಹಾಗೂ ಪೆಟ್ರೋಲಿಯಂ ಉತ್ಪನ್ನಗಳನ್ನು ಅಪಾರ ಪ್ರಮಾಮದಲ್ಲಿ ಆಮದು ಮಾಡಿಕೊಳ್ಳುವ ಎನ್‌ಎಂಪಿಟಿಯಡಿ ಸಾವಿರಾರು ಸಂಖ್ಯೆಯ ಖಾಸಗಿ ಘನ ವಾಹನಗಳು ಕಾರ್ಯ ನಿರ್ವಹಿಸುತ್ತಿವೆ. ಇದರಡಿ ಸಾವಿರಾರು ಸಂಖ್ಯೆಯಲ್ಲಿ ಚಾಲಕರು ಕಾರ್ಯ ನಿರ್ವಹಿಸುತ್ತಿದ್ದು, ಅವರ ಸುರಕ್ಷಿತ ಚಾಲನೆಗೆ ಒತ್ತು ನೀಡುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಶಿಬಿರವು ಡಿಸೆಂಬರ್ ಅಂತ್ಯದವರೆಗೆ ಮುಂದುವರಿಯಲಿದೆ ಎಂದು ಎ.ವಿ. ರಮಣ್ ಹೇಳಿದರು.

ಶೆಲ್ ಇಂಡಿಯಾ ಸಂಸ್ಥೆಯ ಏಕ್ತಾ ಕುಮಾರ್ ಮಾತನಾಡಿ, ಶೆಲ್ ಇಂಡಿಯಾ ಹಾಗೂ ವಿಷನ್ ಸ್ಪ್ರಿಂಗ್ ಸಂಸ್ಥೆಯು ‘ಡ್ರೈವ್ ಸೇಫ್ ಇಂಡಿಯಾ’ ಅಭಿಯಾನದಡಿ 2020ರೊಳಗೆ 3.65 ಲಕ್ಷ ವಾಣಿಜ್ಯ ವಾಹನಗಳ ಚಾಲಕರ ಸುರಕ್ಷಿತ ಚಾಲನೆಗೆ ಒತ್ತು ನೀಡುವ ಗುರಿಯನ್ನು ಹೊಂದಿದೆ ಎಂದರು.

ಅಭಿಯಾನದಂಗವಾಗಿ ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳನ್ನು ಆಯ್ದುಕೊಳ್ಳಲಾಗಿದ್ದು, ಈಗಾಗಲೇ ವಿವಿಧ ಕಡೆಗಳಲ್ಲಿ ಈ ಕಣ್ಣು ತಪಾಸಣೆ ಹಾಗೂ ಕನ್ನಡಕ ವಿತರಣೆ ಕಾರ್ಯಕ್ರಮವನ್ನು ಆಜಿಸಿರುವುದಾಗಿ ಅವರು ಹೇಳಿದರು.

ವೇದಿಕೆಯಲ್ಲಿ ವಿಷನ್ ಸ್ಪ್ರಿಂಗ್ ಸಂಸ್ಥೆಯ ಮ್ಯಾನೇಜರ್ ಸುಲೇಖಾ ಉಪಸ್ಥಿತರಿದ್ದರು. ಎನ್‌ಎಂಪಿಟಿ ಟ್ರಾಫಿಕ್ ಮ್ಯಾನೇಜರ್ ವೈ.ಆರ್. ಬೆಳಗಲ್ ಕಾರ್ಯಕ್ರಮ ನಿರೂಪಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News