ಸ್ವಚ್ಛ ಉಡುಪಿಗಾಗಿ ‘ಉಡುಪಿ ಪ್ರಶಸ್ತಿ’ ನೀಡಲು ನಿರ್ಧಾರ: ಡಿಸಿ

Update: 2019-11-19 15:18 GMT

ಉಡುಪಿ, ನ.19: ತಾನು ಮೈಸೂರಿನಲ್ಲಿ ಜಾರಿಗೊಳಿಸಿ ಯಶಸ್ವಿಯಾದ ರೀತಿಯಲ್ಲೇ ಸ್ವಚ್ಛ ಉಡುಪಿಗಾಗಿ, ವಿವಿಧ ವಿಭಾಗಗಳಲ್ಲಿ ‘ಉಡುಪಿ ಪ್ರಶಸ್ತಿ’ ಯನ್ನು ನೀಡಲು ನಿರ್ಧರಿಸಿರುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಉಡುಪಿ ಸಿಟಿ ಬಸ್ ನೌಕರರ ತುರ್ತು ಸೇವಾ ಸಂಘದ ನಿರ್ವಹಣೆಯಲ್ಲಿ ಪ್ರಥಮ ಬಾರಿಗೆ ಸ್ವಚ್ಛತಾ ಆಂದೋಲನದ ಅಂಗವಾಗಿ ಉಡುಪಿ ಸಿಟಿ ಬಸ್ ನಿಲ್ದಾಣ ಹಾಗೂ ಅದರ ಆಸುಪಾಸು ‘ಸ್ವಚ್ಛ ನಿಲ್ದಾಣ-ಉಡುಪಿ ಸಿಟಿ ಬಸ್ ನಿಲ್ದಾಣ’ ಯೋಜನೆಗೆ ಮಂಗಳವಾರ ಸಿಟಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿ ಅವರು ಮಾತನಾಡುತಿದ್ದರು.

ಸ್ವಚ್ಛತೆ ಇರುವಲ್ಲಿ ದೇವರಿದ್ದಾನೆ ಎಂಬ ನಂಬಿಕೆಯಲ್ಲಿ ನಾವಿರುವ ಕಡೆ ಸ್ವಚ್ಛತೆ ಇರುವಂತೆ ನೋಡಿಕೊಳ್ಳಬೇಕು ಎಂಬ ಆಶಯನಮ್ಮದು. ನಗರ ಸ್ವಚ್ಛವಾಗಿರಲು ಕಸ ನಿರ್ವಹಣೆ ಸಮರ್ಪಕವಾಗಿರಬೇಕು. ಉಳಿದೆಡೆಗೆ ಹೋಲಿಸಿದರೆ ಉಡುಪಿ ಸಾಕಷ್ಟು ಸ್ವಚ್ಛವಾಗಿಯೇ ಇದೆ. ಜನರಿಗೂ ಈ ಬಗ್ಗೆ ಅರಿವಿದೆ ಎಂದು ಅವರು ಶ್ಲಾಘಿಸಿದರು.

ಸ್ವಚ್ಛ ಉಡುಪಿಗಾಗಿ ವಿವಿಧ ರೀತಿಯ ಸ್ಪರ್ಧೆ ಏರ್ಪಡಿಸಲು ನಿರ್ಧರಿಸಲಾಗಿದೆ. ಸ್ವಚ್ಛ ಶಾಲೆ, ಸ್ವಚ್ಛ ಅಂಗಡಿ, ಸ್ವಚ್ಛ ಮಾರ್ಕೆಟ್, ಸ್ವಚ್ಚ ಬಸ್‌ನಿಲ್ದಾಣ, ಸ್ವಚ್ಛ ಗಲ್ಲಿ ಹೀಗೆ ಬೇರೆ ಬೇರೆ ವಿಭಾಗದ ಪ್ರಶಸ್ತಿ ನೀಡಿ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಗು ವುದು. ಘನ ತ್ಯಾಜ್ಯ ಹಾಗೂ ದ್ರವ ತ್ಯಾಜ್ಯಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ದೇಶಕ್ಕೆ ಮಾದರಿಯಾಗಬೇಕು ಎಂದರು.

ಈಗಾಗಲೇ ಜಿಲ್ಲೆಯ 40 ಗ್ರಾಪಂಗಳಲ್ಲಿ ತ್ಯಾಜ್ಯ ನಿರ್ವಹಣೆಗೆಂದು ಜಾಗವನ್ನು ಗುರುತಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಇನ್ನೂ 50 ಗ್ರಾಪಂಗಳಲ್ಲಿ ಜಾಗವನ್ನು ಗುರುತಿಸಿ ಅಲ್ಲೂ ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಗದೀಶ್ ತಿಳಿಸಿದರು.

ಅಲೆವೂರು ಸಮೀಪದ ಕರ್ವಾಲ್‌ನಲ್ಲಿರುವ ಉಡುಪಿ ನಗರಸಭೆಯ ಘಟಕ ಈಗ ಡಂಪಿಂಗ್ ಯಾರ್ಡ್ ಆಗಿದೆ. ಅದನ್ನು ತಮಿಳುನಾಡಿನಲ್ಲಿ ಬಳಕೆಯಲ್ಲಿರುವ ಬಯೋ ಮೈನಿಂಗ್ ಮೂಲಕ ತ್ಯಾಜ್ಯ ಸಂಸ್ಕರಣೆಯನ್ನು ಇಲ್ಲೂ ಅಳವಡಿಸಲು ಯೋಜನೆ ರೂಪಿಸಲಾಗುತ್ತಿದೆ. ಈ ಮೂಲಕ ಅಲ್ಲಿರುವ ಕಸದ ಬೆಟ್ಟವನ್ನು ಕರಗಿಸಲು ಪ್ರಯತ್ನಿಸಲಾಗುವುದು ಎಂದರು.

ಇದಕ್ಕಾಗಿ ಈಗಾಗಲೇ ತಮಿಳುನಾಡಿನ ತಜ್ಞರ ಜೊತೆ ಚರ್ಚೆ ನಡೆದಿದ್ದು, ಇದಕ್ಕಾಗಿ 2.5ರಿಂದ 3 ಕೋಟಿ ರೂ.ಅಗತ್ಯವಿದೆ. ಇದನ್ನು ಸ್ವಚ್ಚ ಭಾರತ್ ಮಿಷನ್‌ನಿಂದ ಪಡೆದು ಯೋಜನೆ ಪ್ರಾರಂಭಿಸುವ ಆಲೋಚನೆ ಇದೆ. ಇದರೊಂದಿಗೆ ಇನ್ನು ಮುಂದೆ ಹಸಿ ಕಸದಿಂದ ಮನೆಯಲ್ಲೇ ಕಾಂಪೋಸ್ಟ್ ಗೊಬ್ಬರ ತಯಾರಿಸಿ ಗಿಡ-ಮರಕ್ಕೆ ಬಳಸಲು ಸೂಚಿಸಲಾಗುವುದು ಎಂದರು.

ಅಲ್ಲದೇ ಶೀಘ್ರದಲ್ಲೇ ನಗರದ ಹೊಟೇಲ್, ಅಪಾರ್ಟ್‌ಮೆಂಟ್, ಛತ್ರಗಳಲ್ಲಿ ಉತ್ಪತ್ತಿ ಯಾಗುವ ಕಸವನ್ನು ಅಲ್ಲೇ ನಿರ್ವಹಣೆ ಮಾಡುವಂತೆ ‘ನಿಮ್ಮ ಕಸ, ನಮ್ಮ ಜವಾಬ್ದಾರಿ’ ಯೋಜನೆ ರೂಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಇದರೊಂದಿಗೆ ಇನ್ನೊಂದು ತಿಂಗಳೊಳಗೆ ನಗರದ ಎಲ್ಲಾ ರಸ್ತೆಗಳ ಹೊಂಡಗಳನ್ನು ಪ್ರಾಕೃತಿಕ ವಿಕೋಪ ನಿಧಿಯಿಂದ ಮುಚ್ಚಲು ನಿರ್ಧರಿಸಲಾಗಿದೆ. ಇದರಲ್ಲಿ ನಮ್ಮಾಂದಿಗೆ ನಗರಸಭೆ ಕೈಜೋಡಿಸಲಿದೆ ಎಂದು ಜಿ.ಜಗದೀಶ್ ನುಡಿದರು.

ಉಡುಪಿ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಸುರೇಶ್ ನಾಯಕ ಕುಯಿಲಾಡಿ ಅದ್ಯಕ್ಷತೆ ವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶೇಷಶಯನ ಕಾರಂಜಿ, ಜಿಲ್ಲಾ ವರ್ತಕರ ಸಂಘದ ಅಧ್ಯಕ್ಷ ಸಹನ ಶೀಲ ಪೈ, ಅಂಬಲಪಾಡಿಯ ಸಮಾಜ ಸೇವಕ ವಿಶು ಶೆಟ್ಟಿ, ಸರಸ್ವತಿ ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯಿನಿ ಅಕ್ಷತಾ ಕಾಮತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News