ನ.21ರಿಂದ ರಂಗಭೂಮಿ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ

Update: 2019-11-19 15:20 GMT

ಉಡುಪಿ, ನ.19: ರಾಜ್ಯದ ಪ್ರತಿಷ್ಠಿತ ನಾಟಕ ಸಂಸ್ಥೆಗಳಲ್ಲಿ ಒಂದಾದ ರಂಗಭೂಮಿ ಉಡುಪಿ ಆಯೋಜಿಸುವ 40ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ ನ.21ರಿಂದ ಡಿ.12ರ ಸೋಮವಾರದವರೆಗೆ ಪ್ರತಿದಿನ ಸಂಜೆ 6:30ಕ್ಕೆ ಸರಿಯಾಗಿ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಎಂದು ರಂಗಭೂಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಟಕ ಸ್ಪರ್ಧೆಯನ್ನು ನ.21ರ ಸಂಜೆ 6:00ಗಂಟೆಗೆ ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಜಿ.ವಿಜಯ ಉದ್ಘಾಟಿಸಲಿದ್ದು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬಿಕ್ಕೇರಿ ಉಪಸ್ಥಿತರಿರುವರು ಎಂದರು.

ಇದೇ ಸಂದರ್ಭದಲ್ಲಿ ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಚಿತ್ರಕಲಾವಿದ ಯು.ರಮೇಶ್ ರಾವ್, ನೇತ್ರತಜ್ಞ ಡಾ.ಕೆ.ಕೃಷ್ಣ ಪ್ರಸಾದ್ ಹಾಗೂ ಬಿ.ಜಿ.ಮೋಹನದಾಸ್ ಇವರನ್ನು ರಂಗಭೂಮಿ ಗೌರವಿಸಲಿದೆ ಎಂದು ತಲ್ಲೂರ್ ತಿಳಿಸಿದರು.
ಈ ಬಾರಿ ನಾಟಕ ಸ್ಪರ್ಧೆಗೆ ಒಟ್ಟು 12 ತಂಡಗಳನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರಿನ 5, ಉಡುಪಿ ಮತ್ತು ಮೈಸೂರುಗಳ ತಲಾ ಎರಡು, ಮಂಗಳೂರು, ಬಳ್ಳಾರಿ ಹಾಗೂ ಬೆಳಗಾವಿಯ ತಲಾ ಒಂದು ತಂಡವನ್ನು ಆಯ್ಕೆ ಮಾಡಲಾಗಿದೆ. 12 ನಾಟಕಗಳು 12 ದಿನಗಳ ಕಾಲ ಪ್ರದರ್ಶನಗೊಳ್ಳಲಿದೆ ಎಂದರು.

ಡಾ.ಟಿಎಂಎ ಪೈ, ಎಸ್.ಎಲ್.ನಾರಾಯಣ ಭಟ್ ಹಾಗೂ ಮಲ್ಪೆ ಮಧ್ವರಾಜ್ ಇವರ ಸ್ಮರಣಾರ್ಥ ನಡೆಯುವ ಸ್ಪರ್ಧೆಯ ವಿಜೇತರಿಗೆ 35,000ರೂ., ದ್ವಿತೀಯ ಸ್ಥಾನಿಗೆ 25,000ರೂ. ಹಾಗೂ ತೃತೀಯ ಸ್ಥಾನಿ ತಂಡಕ್ಕೆ 15,000ರೂ.ಗಳ ನಗದು ಹಾಗೂ ಪ್ರಶಸ್ತಿ ಫಲಕ ನೀಡಲಾಗುವುದು. ಇದರೊಂದಿಗೆ ಶ್ರೇಷ್ಠ ನಿರ್ದೇಶಕ, ಶ್ರೇಷ್ಠ ನಟ, ನಟಿ, ಪ್ರಸಾದನ, ರಂಗಪರಿಕರ, ಸಂಗೀತ, ಬೆಳಕು, ಹಾಸ್ಯನಟ, ಬಾಲನಟ ವೈಯಕ್ತಿಕ ಪ್ರಶಸ್ತಿಗಳು ನಗದು ಸಹಿತ ನೀಡಲಾಗುವುದು ಎಂದು ರಂಗಭೂಮಿ ಅಧ್ಯಕ್ಷರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ನಂದಕುಮಾರ್ ಎಂ., ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ, ಜತೆ ಕಾರ್ಯದರ್ಶಿ ಭಾಸ್ಕರ ರಾವ್ ಕಿದಿಯೂರು, ಸದಸ್ಯರಾದ ಮೇಟಿ ಮುದಿಯಪ್ಪ ಹಾಗೂ ಶ್ರೀಪಾದ್ ಹೆಗಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News