ಮರಳು ಪರವಾನಿಗೆಯಲ್ಲಿ ಎಸ್‌ಸಿ,ಎಸ್‌ಟಿಗೆ ವಂಚನೆ: ಪ.ಜಾತಿ, ಪ.ಪಂ.ಗಳ ಹೊಯ್ಗೆ ದೋಣಿ ಕಾರ್ಮಿಕರ ಸಂಘದ ಪ್ರತಿಭಟನೆ

Update: 2019-11-19 15:23 GMT

ಉಡುಪಿ, ನ.19:ಜಿಲ್ಲೆಯ ಸಿಆರ್‌ಝಡ್ ವ್ಯಾಪ್ತಿಯ ಮರಳು ದಿಬ್ಬಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ ತೆರವುಗೊಳಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕಾದಿರಿಸಿದ 16 ಪರವಾನಿಗೆಗಳನ್ನು ಪ.ಜಾ. ಮತ್ತು ಪಂಗಡದ ಹೆಸರಿನಲ್ಲಿ ಮೇಲ್ವರ್ಗದ ದುರ್ಬಳಕೆ ಮಾಡಿಕೊಂಡು ದಲಿತರನ್ನು ವಂಚಿಸಿರುವ ಬಗ್ಗೆ ಎಸಿಬಿಯಿಂದ ತನಿಖೆ ನಡೆಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹೊಯ್ಗೆ ದೋಣಿ ಕಾರ್ಮಿಕರ ಸಂಘ ಇಂದು ಪ್ರತಿಭಟನೆ ನಡೆಸಿತು.

ಜಿಲ್ಲೆಯ ನದಿ ದಂಡೆಗಳಲ್ಲಿ ವಾಸ ಮಾಡಿಕೊಂಡಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮರಳು ತೆಗೆಯುವ ಕಾರ್ಮಿಕರು ಸಾಂಪ್ರದಾಯಿಕ ರೀತಿಯಲ್ಲಿ ತಲೆತಲಾಂತರಗಳಿಂದ ಮರಳು ದಿಬ್ಬಗಳನ್ನು ತೆರವು ಗೊಳಿಸುವ ಕೆಲಸ ಮಾಡಿ ಕೊಂಡು ಬಂದಿದ್ದಾರೆ. ದಸಂಸದ ಹೋರಾಟದ ಫಲವಾಗಿ ಮೀಸಲಾತಿ ಅಡಿಯಲ್ಲಿ 2016-17ನೇ ಸಾಲಿನಿಂದ ಒಟ್ಟು 17 ಪರವಾನಿಗೆಗಳನ್ನು ಇವರಿಗೆ ಮರಳು ಉಸ್ತುವಾರಿ ಸಮಿತಿ ಮಂಜೂರು ಮಾಡಲಾಗುತ್ತಿದೆ ಎಂದು ಸಂಘದ ಗೌರವಾಧ್ಯಕ್ಷ ಉದಯಕುಮಾರ್ ತಲ್ಲೂರ್ ತಿಳಿಸಿದರು.

ಆದರೆ ಉಡುಪಿ ಹೊಯಿಗೆ ದೋಣಿ ಕಾರ್ಮಿಕರ ಸಂಘವು ಈ ಪರವಾನಿಗೆ ಯನ್ನು ತನಗೆ ಬೇಕಾದ ಮರಳು ಕಾರ್ಮಿಕರಲ್ಲದ ಪರಿಶಿಷ್ಟ ಜಾತಿ ವ್ಯಕ್ತಿಯನ್ನು ಬಳಸಿಕೊಂಡು ಮೇಲ್ವರ್ಗದವರಿಗೆ ನೀಡಿ ಪರವಾನಿಗೆಯ ದುರ್ಬಳಕೆ ಮಾಡಿಕೊಂಡು ಅರ್ಹರನ್ನು ವಂಚಿತರನ್ನಾಗಿ ಮಾಡಲಾಗುತ್ತಿದೆ ಎಂದವರು ಆರೋಪಿಸಿದರು.

ಈ ಬಗ್ಗೆ ಸತತ ಮೂರು ವರ್ಷಗಳಿಂದ ಹೋರಾಟ ನಡೆಸಿ ತನಿಖೆ ಮಾಡಲು ದಾಖಲೆ ಸಹಿತ ಮನವಿಯನ್ನು ನೀಡಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಈವರೆಗೆ ನಿರ್ಲಕ್ಷ ವಹಿಸಿದೆ. ಇಂಥ ಪ್ರಕರಣ ನಮ್ಮಲ್ಲಿ ನಡೆದಿಲ್ಲ ಎಂದು ಮಂಗಳೂರಿನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಹಿಂಬರಹ ನೀಡಿದೆ ಎಂದೂ ಉದಯಕುಮಾರ್ ತಲ್ಲೂರು ದೂರಿದರು.

ಆದರೆ ಇದೀಗ ಜಿಲ್ಲೆಯ ಐರೋಡಿ ಗ್ರಾಪಂ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಕೃಷ್ಣ ಬಾಳ್ಕುದ್ರು ಎಂಬವರ ಮರಳು ಪರವಾನಿಗೆಯನ್ನು ದಲಿತೇತರರು ಬೆದರಿಕೆಯೊಡ್ಡಿ ಆತನನ್ನು ಜೀತದಾಳಾಗಿ ಇಟ್ಟುಕೊಂಡು ಆತನ ಪರವಾನಿಗೆ ಯಲ್ಲಿ ಡ್ಯಾನಿಸ್ ಡಿಸೋಜ ಹಾಗೂ ಥಾಮಸ್ ಡಿಸೋಜ ಎಂಬವರು ಮರಳು ದಂಧೆ ನಡೆಸುತ್ತಿರುವುದು ಸಾಬೀತಾಗಿದೆ ಎಂದವರು ಹೇಳಿದರು.

ಈ ಬಗ್ಗೆ ಈಗಾಗಲೇ ಕೃಷ್ಣ ಬಾಳ್ಕುದ್ರು ಇವರು ಕೋಟ ಠಾಣೆಯಲ್ಲಿ ದಲಿತ ದೌರ್ಜನ್ಯದ ಪ್ರಕರಣವನ್ನು ದಾಖಲಿಸಿದ್ದಾರೆ.ಆದರೂ ಈವರೆಗೆ ಆರೋಪಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ಜಿಲ್ಲಾಡಳಿತ ವಿಫಲವಾಗಿದೆ. ಹೀಗಾಗಿ ಕೂಡಲೇ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕೆಂದು ಉಡುಪಿ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹೊಗೆ ದೋಣಿ ಕಾರ್ಮಿಕರ ಸಂಘ ಒತ್ತಾಯಿಸಿ ಪ್ರತಿಭಟನೆ ನಡೆಸಿದೆ ಎಂದವರು ವಿವರಿಸಿದರು.

ಬೇಡಿಕೆ: ಕೃಷ್ಣ ಬಾಳ್ಕುದ್ರುರಿಂದ ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿರುವ ಇಬ್ಬರು ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಪ.ಜಾತಿ, ಪಂಗಡದವರಿಗೆ ಮೀಸಲಾತಿಯಡಿಯಲ್ಲಿ ನೀಡಲಾಗಿರುವ ಮರಳು ಪರವಾನಿಗೆ ಬೇನಾಮಿ ಹೆಸರಲ್ಲಿ ಕಾರ್ಯನಿರ್ವಹಿಸುತಿದ್ದು, ಈ ಬಗ್ಗೆ ಎಸಿಬಿ ಮೂಲಕ ಉನ್ನತ ಮಟ್ಟದ ತನಿಖೆಯಾಗಬೇಕು.

ಸಿಆರ್‌ಝಡ್ ವ್ಯಾಪ್ತಿಯಲ್ಲಿ ಈಗಾಗಲೇ 158 ಪರವಾನಿಗೆ ನೀಡಲಾಗಿದ್ದು, ರೋಸ್ಟರ್ ಪದ್ಧತಿಯಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ 27 ಪರವಾನಿಗೆ ನೀಡಬೇಕಿತ್ತು. ಆದರೆ ಕೇವಲ 16ನ್ನು ಮಾತ್ರ ಮೀಸಲಾತಿಯಡಿ ನೀಡಿ ವಂಚನೆ ಎಸಗಲಾಗಿದೆ. ಈ ಬಗ್ಗೆಯೂ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು.

ಸಿಹಿನೀರು ಮರಳುಗಾರಿಕೆ ಟೆಂಡರ್‌ನಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ನೀಡದೇ ಅನ್ಯಾಯವೆಸಲಾಗಿದೆ. ಈ ಬಗ್ಗೆಯೂ ತನಿಖೆ ನಡೆಸಿ ನಮಗೆ ಮರಳು ದಿಬ್ಬ ತೆರವಿಗೆ ಅವಕಾಶ ಮಾಡಿಕೊಡಬೇಕು.

ಪ್ರತಿಭಟನಕಾರರು ನಗರದಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಅವರಿಗೆ ಮನವಿಗಳನ್ನು ಅರ್ಪಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷವಿಜಯ್ ಕೆ.ಎಸ್., ಉಪಾಧ್ಯಕ್ಷ ಪ್ರಶಾಂತ್ ತೊಟ್ಟಂ, ಪ್ರಧಾನ ಕಾರ್ಯದರ್ಶಿ ಶೇಖರ ಹೆಜಮಾಡಿ, ಸುರೇಶ್ ಬಂಟಕಲ್, ಕೃಷ್ಣ ಅಲ್ತಾರ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News