ಸರಕಾರ ರೈತರು-ಹಾಲು ಉತ್ಪಾದಕರಿಗೆ ಸಬ್ಸಿಡಿ ಮುಂದುವರಿಸಬೇಕು: ಡಾ.ಡಿ.ವೀರೇಂದ್ರ ಹೆಗ್ಗಡೆ

Update: 2019-11-19 15:38 GMT

ಮಂಗಳೂರು, ನ.19: ದೇಶಾದ್ಯಂತ ಗೋವಿನ ಮಹತ್ವ ಹೆಚ್ಚುತ್ತಿದೆ. ವಿದೇಶದಲ್ಲಿ ಗೋವುಗಳನ್ನು ವ್ಯವಹಾರಿಕವಾಗಿ ಪರಿಗಣಿಸಿದರೂ ಕೂಡಾ ದೇಶದಲ್ಲಿ ಅದಕ್ಕೆ ಪಾವಿತ್ರತೆಯನ್ನೂ ನೀಡಲಾಗಿದೆ. ದಿನಂಪ್ರತಿ ಹಾಲು ನೀಡುವ ಗೋವುಗಳನ್ನು ಸಾಕಣೆ ಮಾಡಿಯೇ ಗ್ರಾಮೀಣ ಭಾಗದ ಅದೆಷ್ಟೋ ಕುಟುಂಬಗಳು ಬದುಕು ಸಾಗಿಸುತ್ತಿವೆ. ರಾಜ್ಯ ಸರಕಾರ ಕೂಡಾ ರೈತರಿಗೆ, ಹಾಲು ಉತ್ಪಾದಕರಿಗೆ ಸಬ್ಸಿಡಿ ನೀಡುವ ಮೂಲಕ ಆರ್ಥಿಕ ಶಕ್ತಿ ತುಂಬುತ್ತಿದೆ. ಅದನ್ನು ಮುಂದುವರಿಸಿಕೊಂಡು ಹೋಗುವ ಮೂಲಕ ರೈತರ ಬಾಳು ಹಸನಾಗುವಂತೆ ನೋಡಿಕೊಳ್ಳಬೇಕು ಎಂದು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.

ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು 66ನೆ ಸಹಕಾರಿ ಸಪ್ತಾಹದ ಅಂಗವಾಗಿ ತಯಾರಿಸಲ್ಪಟ್ಟ ನೂತನ ಉತ್ಪನ್ನಗಳಾದ ನಂದಿನಿ ಕೋಲ್ಡ್ ಕಾಫಿ ಹಾಗೂ ನಂದಿನಿ ಕಷಾಯವನ್ನು ನಗರದ ಕುಲಶೇಖರದ ಚರ್ಚ್‌ಗೇಟ್‌ನ ಕೋರ್ಡೆಲ್ ಹಾಲ್‌ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಇದೇ ವೇಳೆ ಸಹಕಾರಿ ಸಪ್ತಾಹದ ಅಂಗವಾಗಿ ಸಹಕಾರ ಸಂಸ್ಥೆಗಳ ಮೂಲಕ ಆರ್ಥಿಕ ಸೇರ್ಪಡೆ, ತಂತ್ರಜ್ಞಾನ ಅಳವಡಿಕೆ ಹಾಗೂ ಗಣಕೀಕರಣ ದಿನಾಚರಣೆಯ ಕಾರ್ಯಕ್ರಮವನ್ನು ಡಾ. ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು.

ಜಗತ್ತು ಎಷ್ಟೇ ಮುಂದುವರಿದಿದ್ದರೂ ಕೂಡಾ ಹಾಲಿಗೆ ಪರ್ಯಾಯ ವಸ್ತುವನ್ನು ಈವರೆಗೆ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಇದು ಹಾಲಿನ ಶಕ್ತಿ, ಪೌಷ್ಟಿಕಾಂಶವನ್ನು ಎತ್ತಿ ತೋರಿಸುತ್ತಿದೆ. ರೈತರು, ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು ಸಬ್ಸಿಡಿಯ ಅಗತ್ಯವಿದೆ. ರೈತರ ಮುಖದಲ್ಲಿ ಸಂತೃಪ್ತಿ ಕಂಡರೆ ಎಲ್ಲರ ಬಾಳೂ ಹಸನಾಗಲಿದೆ ಎಂದ ಡಾ.ಡಿ.ವೀರೇಂದ್ರ ಹೆಗ್ಗಡೆ, ಗ್ರಾಮೀಣ ಜನರ ಬದುಕು ಸುರಕ್ಷಿತವಾಗಿರುವ ಜತೆಯಲ್ಲಿ ಅವರು ನೆಮ್ಮದಿಯಿಂದ ದಿನ ಕಳೆಯಲು ಹೈನುಗಾರಿಕೆ ಮೂಲ ಕಾರಣ. ಹೈನುಗಾರಿಕೆ ಗ್ರಾಮೀಣ ಜನರ ಆರ್ಥಿಕ ಶಕ್ತಿಗೆ ಭದ್ರವಾದ ನೆಲೆಯನ್ನು ನೀಡಿದೆ ಎಂದು ನುಡಿದರು.

ಶಾಸಕ ವೇದವ್ಯಾಸ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಒಕ್ಕೂಟದಿಂದ ತಯಾರಿಸಿದ ‘ನನ್ನಾಸೆಯ ನಂದಿನಿ’ ಎಂಬ ಸಾಕ್ಷ ಚಿತ್ರವನ್ನು ಬಿಡುಗಡೆ ಮಾಡಿ ಮಾತನಾಡಿದರು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ನಂದಿನಿ ಪನೀರ್ (500 ಗ್ರಾಂ ಪ್ಯಾಕೆಟ್) ಹಾಗೂ ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ ಎಸ್.ಆರ್.ರವರು ನಂದಿನಿ ಪೇಡಾ (25 ಗ್ರಾಂ)ನ ಬಿಡಿ ಪ್ಯಾಕ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಈಗ ಪ್ರತೀ ದಿನ ಕೆಎಂಎಫ್ 4.85 ಲಕ್ಷ ಲೀ. ಹಾಲು ಸಂಗ್ರಹ ಮಾಡುತ್ತಿದೆ. 15 ಕೋ.ರೂ.ಅಧಿಕ ಸಬ್ಸಿಡಿಯನ್ನು ರೈತರು, ಉತ್ಪಾದಕರಿಗೆ ನೀಡುತ್ತಿದೆ. ಪ್ರತೀ ವರ್ಷವೂ ಹೊಸ ಹೊಸ ಉತ್ಪನ್ನಗಳನ್ನು ಬಿಡುಗಡೆಗೊಳಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸುತ್ತಿವೆ ಎಂದರು. ಬಳಿಕ ಅವರು ಸಹಕಾರ ಶಿಕ್ಷಣ ನಿಧಿಯ ಚೆಕ್ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಕೆಎಂಎಫ್ ನಿರ್ದೇಶಕರಾದ ಕಾಪು ದಿವಕರ ಶೆಟ್ಟಿ, ಬಿ. ನಿರಂಜನ್, ಎ. ಜಗದೀಶ್ ಕಾರಂತ್, ಪದ್ಮನಾಭ ಶೆಟ್ಟಿ ಆರ್ಕಜೆ, ಹದ್ದೂರು ರಾಜೀವ್ ಶೆಟ್ಟಿ. ನಾರಾಯನ ಪ್ರಕಾಶ್, ಎಸ್.ಬಿ.ಜಯರಾಮ ರೈ, ನರಸಿಂಹ ಕಾಮತ್, ಬಿ. ಸುಧಾಕರ ರೈ, ಸುಧಾಕರ ಶೆಟ್ಟಿ, ಸುಭದ್ರ ರಾವ್, ಸವಿತಾ ಎನ್.ಶೆಟ್ಟಿ, ಸ್ಮಿತಾ ಆರ್. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ವ್ಯವಸ್ಥಾಪಕ ನಿರ್ದೇಶಕ ಡಾ. ಜಿ.ವಿ. ಹೆಗ್ಡೆ ಸ್ವಾಗತಿಸಿದರು. ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ವಂದಿಸಿದರು. ಸುಧಾಕರ್ ಮತ್ತು ಜಾನೆಟ್ ರೊಝಾರಿಯಾ ಕಾರ್ಯಕ್ರಮ ನಿರೂಪಿಸಿದರು.

ಎರಡೂ ಉತ್ಪನ್ನಗಳು 200 ಮಿ.ಲೀ. ಸಿಪಿಪಿ ಬಾಟಲುಗಳಲ್ಲಿ ಲಭ್ಯವಿದೆ. ನಂದಿನಿ ಕಷಾಯವನ್ನು ಸ್ಟೆರಿಲೈಸ್ಡ್ ಹೋಮೋಜಿನೈಸ್ಡ್ ಡಬಲ್ ಟೋನ್ಡ್ ಹಾಲು, ನೈಸರ್ಗಿಕವಾಗಿ ದೊರೆಯುವ ಸಾಂಬಾರ ಪದಾರ್ಥಗಳಾದ ಕೊತ್ತಂಬರಿ, ಜೀರಿಗೆ, ಅರಿಸಿಣ, ಚಕ್ಕೆ, ಲವಂಗ, ಒಣ ಶುಂಠಿ, ಕರಿಮೆಣಸು, ಬಿಳಿ ಮೆಣಸು ಮತ್ತು ಬೆಲ್ಲ ಮಿಶ್ರಣದಿಂದ ತಯಾರಿಸಲಾಗಿದೆ. 180 ದಿನ ಜೀವಿತಾವಧಿ ಯನ್ನು ಇದು ಹೊಂದಿರುತ್ತದೆ.

ನಂದಿನಿ ಕೋಲ್ಡ್ ಕಾಫಿಯನ್ನು ಸ್ಟೆರಿಲೈಸ್ಡ್ ಹೋಮೋಜಿನೈಸ್ಡ್ ಡಬಲ್ ಟೋನ್ಡ್ ಹಾಲು ಸಕ್ಕರೆ, ಸ್ಪೆಷಲ್ ಇನ್‌ಸ್ಟಂಟ್ ಕಾಫಿ ಹುಡಿ ಬಳಸಿ ತಯಾರಿಸಲಾಗಿದೆ. ನಂದಿನಿ ಪೇಡಾ 25 ಗ್ರಾಂನ ಬಿಡಿ ಪ್ಯಾಕ್ 10 ರೂ. ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News