ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಾಯಕರ ಮಧ್ಯೆ ಹೊಯ್ ಕೈ

Update: 2019-11-19 15:56 GMT

ಮಂಗಳೂರು, ನ.19: ಮನಪಾ ಚುನಾವಣೆಗೆ ಟಿಕೆಟ್ ಹಂಚಿಕೆ‌ ಮತ್ತು ಪ್ರಮುಖ ಅಭ್ಯರ್ಥಿಗಳ ಸೋಲಿಗೆ ಸಂಬಂಧಿಸಿ ಮಂಗಳವಾರ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಾಯಕರ ಮಧ್ಯೆ ಮಾತಿನ ಚಕಮಕಿ‌ ನಡೆದ ಬಗ್ಗೆ ವರದಿಯಾಗಿದೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಜನ್ಮದಿನಾಚರಣೆಯ ಹಿನ್ನಲೆಯಲ್ಲಿ ಪಕ್ಷದ ಮುಖಂಡರಾದ ಮಾಜಿ ಸಚಿವ ರಮಾನಾಥ ರೈ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವಾ, ಶಕುಂತಳಾ ಶೆಟ್ಟಿ, ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹೀಂ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭ ಮಾಜಿ‌ ಕಾರ್ಪೊರೇಟರ್ ಡಿಕೆ ಅಶೋಕ್ ಕುಮಾರ್ ಮಾತನಾಡಿ ತನ್ನ ಸೋಲಿಗೆ ಮಾಜಿ ಶಾಸಕ ಜೆ.ಆರ್.ಲೋಬೊ ಕಾರಣ. ಅವರು ತನ್ನ ವಿರುದ್ಧ ಕ್ರೈಸ್ತ ಅಭ್ಯರ್ಥಿಗಳನ್ನು ನಿಲ್ಲಿಸಿ ಮತ ಹಂಚಿ ಹೋಗುವಂತೆ ಮಾಡಿದ್ದಾರೆ. ಅಲ್ಲದೆ ಬಿಜೆಪಿಯಿಂದ ಪಕ್ಷಾಂತರಗೊಂಡಿದ್ದ ಮಾಜಿ ಕಾರ್ಪೊರೇಟರ್ ಮರಿಯಮ್ಮ‌ ಥಾಮಸ್ ಹಿಂದೂಗಳಿಗೆ ಮತ ಹಾಕುವ ಬದಲು ಕ್ರೈಸ್ತ ಅಭ್ಯರ್ಥಿಗೆ ಮತ ಹಾಕುವಂತೆ ಪ್ರಚಾರ ಮಾಡಿದ್ದಾರೆ. ಕಾಂಗ್ರೆಸ್ ನಲ್ಲಿದ್ದುಕೊಂಡು ಪಕ್ಷೇತರ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ. ಇದಕ್ಕೆ ಲೋಬೊ ನೇರ ಕಾರಣ ಎಂದು ಆರೋಪಿಸಿದರು.

ಇದರಿಂದ ಆಕ್ರೋಶಗೊಂಡ ಲೋಬೊ ಬೆಂಬಲಿಗರು ಡಿಕೆ ಅಶೋಕ್ ವಿರುದ್ಧ ಮುಗಿಬಿದ್ದರು ಎನ್ನಲಾಗಿದೆ. ಈ ಮಧ್ಯೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಮತ್ತು‌ ಮಾಜಿ‌ ಮೇಯರ್ ‌ಕವಿತಾ ಸನಿಲ್ ಮಧ್ಯೆ ಮಾತಿನ ಚಕಮಕಿ, ವಾಗ್ವಾದ ನಡೆಯಿತು.

ಅಷ್ಟರಲ್ಲಿ  ಮಿಥುನ್ ರೈ ಬೆಂಬಲಿಗರು ಸಭೆಯಲ್ಲಿ ರಾದ್ದಾಂತ ಆರಂಭಿಸಿದಾಗ ಮಾಜಿ ಸಚಿವ ರೈ ಎದ್ದು ನಿಂತು ಮಿಥುನ್ ಬೆಂಬಲಿಗರ ವಿರುದ್ಧ ಹರಿಹಾಯ್ದರು ಎನ್ನಲಾಗಿದೆ. ಇದರಿಂದ ಹತಾಶೆಗೊಂಡ ಮಿಥುನ್ ಸಭೆಯಿಂದ ಎದ್ದು ಹೋಗಲು‌ ಮುಂದಾದ ಘಟನೆಯೂ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸಭೆಯ ಕೊನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ. ಮೋಹನ್ ಪಕ್ಷದಲ್ಲಿ ತನ್ನನ್ನು‌ ಕಡೆಗಣಿಸಲಾಗುತ್ತಿದೆ. ಪ್ರಮುಖ ವಿಚಾರಗಳ ಬಗ್ಗೆ ತನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ರಪಡಿಸಿದರು ಎನ್ನಲಾಗಿದೆ. ಆವಾಗ ಮಿಥುನ್ ರೈ ಮತ್ತು ಬೆಂಬಲಿಗರು ಮೋಹನ್ ವಿರುದ್ಧ ಮುಗಿ ಬಿದ್ದರು ಎಂದು ತಿಳಿದು ಬಂದಿದೆ. ಸಭೆಯಲ್ಲಿ ಮಾತಿನ ಚಕಮಕಿ,‌ ಹೊಯ್ ಕೈ, ವಾಗ್ವಾದ ನಡೆದು ಮಾರಾಮಾರಿಯ ಹಂತ ತಲುಪಿತ್ತು. ಮಾಜಿ ಸಚಿವ ರೈ ಗುಡುಗಿದ ಕಾರಣ ಪರಿಸ್ಥಿತಿ ತಿಳಿಯಾಯಿತು ಎಂದು ತಿಳಿದು ಬಂದಿದೆ.

ಇಷ್ಟೆಲ್ಲಾ ಆದರೂ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಅಸಹಾಯಕತೆ ವ್ಯಕ್ತ ಪಡಿಸುವುದನ್ನು ಕಂಡ ಕಾರ್ಯಕರ್ತರು ಅವರು ರಾಜೀನಾಮೆ ನೀಡಿದರೆ ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲೆಯಲ್ಲಿ ನೆಲೆ ಸಿಕ್ಕೀತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಡಿಕೆ ಅಶೋಕ್, ಮಾಜಿ ಶಾಸಕ ಲೋಬೊ ವಿರುದ್ಧ ಆರಂಭಿಸಿದ ಆರೋಪಗಳ ಸುರಿಮಳೆಯು ನಾನಾ ತಿರುವು ಪಡೆದುಕೊಂಡಿತು ಎನ್ನಲಾಗಿದೆ. ಪೂರ್ವಾಹ್ನ 11 ಗಂಟೆಗೆ ಆರಂಭಗೊಂಡ ಸಭೆಯು ಅಪರಾಹ್ನ‌‌  3 ಗಂಟೆಯವರೆಗೆ ನಡೆದರೂ ಸೋಲಿನ ಪರಾಮರ್ಶೆ ನಡೆಸಲು ಸಾಧ್ಯವಾಗದೆ ಕಾರ್ಯಕರ್ತರು ಅಸಮಾಧಾನದಿಂದ ಎದ್ದು ಹೋಗುವ ಮೂಲಕ ಸಭೆ ಅಪೂರ್ಣಗೊಂಡಿದೆ ಎನ್ನಲಾಗಿದೆ.

ಈ ಮಧ್ಯೆ ಮಿಥುನ್ ರೈ ತನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ, ನಮ್ಮ ವೈ ಮನಸ್ಸನ್ನು‌ ಮರೆತು ಬಿಡೋಣ. ಪಕ್ಷಕ್ಕಾಗಿ ಜೊತೆಗೂಡಿ ಕೆಲಸ ಮಾಡೋಣ ಎಂದು ಭಿನ್ನವಿಸಿದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News