ಹುಲಿ ರಾಷ್ಟ್ರ ಪ್ರಾಣಿಯಾಗಿದ್ದಕ್ಕೆ ಭಯೋತ್ಪಾದನೆ ಹೆಚ್ಚಳ: ಪೇಜಾವರ ಶ್ರೀ

Update: 2019-11-19 16:16 GMT

ಉಡುಪಿ, ನ.19: ಧಾರ್ಮಿಕ, ಆರ್ಥಿಕ ದೃಷ್ಠಿಯಿಂದ ಮಾತ್ರವಲ್ಲದೆ ಮಾನವೀಯತೆಯ ದೃಷ್ಠಿ ಯಿಂದಲೂ ಗೋ ಹತ್ಯೆ ನಿಷೇಧ ಮಾಡಬೇಕು. ಗೋಹತ್ಯೆ ಮಾನವೀಯತೆಗೆ ಎಸಗುವ ದ್ರೋಹವಾಗಿದೆ. ಭಾರತದ ರಾಷ್ಟ್ರೀಯ ಪ್ರಾಣಿ ಹುಲಿಯಲ್ಲ, ಅದರ ಬದಲು ಗೋವು ಆಗಬೇಕು. ಹುಲಿ ರಾಷ್ಟ್ರ ಪ್ರಾಣಿಯಾಗಿದ್ದಕ್ಕೆ ಭಯೋತ್ಪಾದನೆ ಹೆಚ್ಚಾಗುತ್ತದೆ. ದೇಶದಲ್ಲಿ ಶಾಂತಿ ನೆಲೆಸಬೇಕಾದರೆ ಗೋವನ್ನು ರಾಷ್ಟ್ರ ಪ್ರಾಣಿ ಯನ್ನಾಗಿ ಮಾಡಬೇಕು. ಈ ಮೂಲಕ ಆತಂಕವಾದ ಹೋಗಿ ಅನುಕಂಪವಾದ ಆಗಬೇಕು ಎಂದು ಪೇಜಾವರ ಸ್ವಾಮೀಜಿ ಹೇಳಿದರು.

ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಮಂಗಳ ವಾರ ಯೋಗಗುರು ಬಾಬಾರಾಮ್ ದೇವ್, ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆದ ಸಂತರ ಸಮಾವೇಶದಲ್ಲಿ ಸಮಾನ ನಾಗರಿಕ ಸಂಹಿತೆ, ಗೋಹತ್ಯಾ ನಿಷೇಧ ಹಾಗೂ ಜನಸಂಖ್ಯೆ ನಿಯಂತ್ರಣ ಕಾಯಿದೆ ಜಾರಿಗೆ ತರುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸುವ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಸಭೆಯಲ್ಲಿ ಮಾತನಾಡಿದ ಪೇಜಾವರ ಸ್ವಾಮೀಜಿ, ರಾಷ್ಟ್ರದಲ್ಲಿ ಅಗತ್ಯವಾಗಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಬರಬೇಕು ಮತ್ತು ಗಂಗಾ ನದಿ ಶುದ್ಧೀಕರಣ ಆಗಬೇಕು. ನಮ್ಮನ್ನು ಶುದ್ದ ಮಾಡಬೇಕಾದ ಗಂಗೆಯನ್ನು ನಾವೇ ಶುದ್ದೀಕರಣ ಮಾಡ ಬೇಕಾಗಿರುವುದು ದುರಂತ ಎಂದು ಹೇಳಿದರು.

ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಮತ್ತು ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ಜಾರಿಯಾಗಬೇಕು. ಹಿಂದೂ ಸಂತರು ಈ ಬಗ್ಗೆ ಸಭೆ ಸೇರಿ ಚರ್ಚೆ ಮಾಡಬೇಕು. ಎಲ್ಲಾ ಧರ್ಮೀಯರು ಸೇರಿ ಯಾವುದೇ ಭಿನ್ನಾಭಿಪ್ರಾಯ ಇಲ್ಲದಂತೆ ಈ ಕಾನೂನುಗಳನ್ನು ಜಾರಿಗೆ ತರುವಂತೆ ಮಾಡಬೇಕು ಎಂದು ಅವರು ತಿಳಿಸಿದರು.

ಯೋಗ ಗುರು ಬಾಬಾ ರಾಮ್ ದೇವ್ ಮಾತನಾಡಿ, ಸಮಾನ ನಾಗರಿಕ ಸಂಹಿತೆ ಜಾರಿಗೆ ಆಂದೋಲನ ಮಾಡಬೇಕಾಗಿದೆ. ಈ ಬಗ್ಗೆ ರಾಷ್ಟ್ರದಲ್ಲಿ ಜಾಗೃತಿ ಮೂಡಿಸಬೇಕು. ಅಂಬೇಡ್ಕರ್ ಒಂದು ದೇಶ ಒಂದು ಕಾನೂನು ಹೇಳಿದ್ದರು. ಆದರೆ ಹಲವರು ಇದನ್ನು ಒಪ್ಪುದಿಲ್ಲ. ದಲಿತರು ಮಾತ್ರ ಈ ದೇಶದ ಮೂಲ ನಿವಾಸಿಗಳಲ್ಲ. ಪ್ರತಿಯೊಬ್ಬ ಭಾರತೀಯ ಕೂಡ ಈ ದೇದ ಮೂಲನಿವಾಸಿ ಯಾಗಿದ್ದಾರೆ ಎಂದರು.

ಪೆರಿಯಾರ್‌ ವಾದಿಗಳು ರಾಮ, ಕೃಷ್ಣ ದೇವರು ಹಿಂದುಳಿದವರನ್ನು ಕೊಲೆ ಮಾಡಿದರು ಎಂದು ಹೇಳುತ್ತಾರೆ. ಆದರೆ ಪೆರಿಯಾರ್‌ ವಾದ, ಕಮ್ಯುನಿಷ್ಟ್ ವಾದ, ಸ್ವಯಂಘೋಷಿತ ಸಮಾಜವಾದ, ವಿಚಾರವಾದದ ವಿರುದ್ದ ರಾಷ್ಟ್ರವಾದ ಪ್ರಯೋಗಿಸಬೇಕಾಗಿದೆ ಎಂದು ಅವರು ತಿಳಿಸಿದರು.

ರಾಷ್ಟ್ರದಲ್ಲಿ ಗೋ ಹತ್ಯಾ ನಿಷೇಧ ಮಾಡಲೇಬೇಕು. ಅಕ್ಬರ್, ಬಾಬರ್, ಹುಮಾಯೂನ್, ಔರಂಗಜೇಬನ ಕಾಲದಲ್ಲಿ ಜಾರಿಯಲ್ಲಿದ್ದ ಗೋ ಹತ್ಯಾ ನಿಷೇಧ ಈಗ ಯಾಕೆ ಮಾಡಲು ಆಗುವುದಿಲ್ಲ. ಭಾರತೀಯ ಮುಸಲ್ಮಾನರು ಇದನ್ನು ಬೆಂಬಲಿಸಬೇಕು. ಜಾಗತಿಕ ತಾಪಮಾನಕ್ಕೆ ಮಾಂಸಹಾರವೇ ಅತೀ ಮುಖ್ಯ ಕಾರಣವಾಗಿದೆ. ಮಾಂಸ ತಿನ್ನಲೇ ಬೇಕಾದವರು ಗೋವನ್ನು ಬಿಟ್ಟು ಬೇರೆ ಏನಾದರೂ ತಿನ್ನಿ ಎಂದರು.

ಅಧ್ಯಕ್ಷತೆಯನ್ನು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ವಹಿಸಿದ್ದರು. ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಶ್ರೀವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ, ಸೋದೆ ಶ್ರೀವಿಶ್ವವಲ್ಲಭತೀರ್ಥ ಸ್ವಾಮೀಜಿ, ಪ್ರಯಾಗ ಶ್ರೀವಿದ್ಯಾತ್ಮತೀರ್ಥ ಸ್ವಾಮೀಜಿ, ಬಾಳೆಕುದ್ರು ಶ್ರೀನೃಸಿಂಹಾಶ್ರಮ ಸ್ವಾಮೀಜಿ, ಮಂಜೇಶ್ವರ ಕೊಂಡೆವೂರು ಶ್ರೀಯೋಗಾನಂದ ಸ್ವಾಮೀಜಿ, ಮಾಣಿಲ ಮೋಹನದಾಸ ಸ್ವಾಮೀಜಿ, ಹೊಸ್ಮಾರು ಶ್ರೀವಿಖ್ಯಾತಾನಂದ ಸ್ವಾಮೀಜಿ, ರಾಮ ಕ್ಷೇತ್ರದ ಶ್ರೀಬ್ರಹ್ಮಾನಂದ ಸ್ವಾಮೀಜಿ, ಆನೆಗುಂದಿ ಶ್ರೀಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ, ಸುಬ್ರಹ್ಮಣ್ಯ ಶ್ರೀವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ವಜ್ರದೇಹಿ ಶ್ರೀರಾಜಶೇಖರಾನಂದ ಸ್ವಾಮೀಜಿ, ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಮೂಡುಬಿದಿರೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಉಪಸ್ಥಿತರಿದ್ದರು.

ಹುಲಿ ರಾಷ್ಟ್ರ ಪ್ರಾಣಿಯಾಗಿದ್ದಕ್ಕೆ ಭಯೋತ್ಪಾದನೆ ಹೆಚ್ಚಳ: ಪೇಜಾವರ ಶ್ರೀ

ಧಾರ್ಮಿಕ, ಆರ್ಥಿಕ ದೃಷ್ಠಿಯಿಂದ ಮಾತ್ರವಲ್ಲದೆ ಮಾನವೀಯತೆಯ ದೃಷ್ಠಿ ಯಿಂದಲೂ ಗೋ ಹತ್ಯೆ ನಿಷೇಧ ಮಾಡಬೇಕು. ಗೋಹತ್ಯೆ ಮಾನವೀಯತೆಗೆ ಎಸಗುವ ದ್ರೋಹವಾಗಿದೆ. ಭಾರತದ ರಾಷ್ಟ್ರೀಯ ಪ್ರಾಣಿ ಹುಲಿಯಲ್ಲ, ಅದರ ಬದಲು ಗೋವು ಆಗಬೇಕು.

ಹುಲಿ ರಾಷ್ಟ್ರ ಪ್ರಾಣಿಯಾಗಿದ್ದಕ್ಕೆ ಭಯೋತ್ಪಾದನೆ ಹೆಚ್ಚಾಗುತ್ತದೆ. ದೇಶದಲ್ಲಿ ಶಾಂತಿ ನೆಲೆಸಬೇಕಾದರೆ ಗೋವನ್ನು ರಾಷ್ಟ್ರ ಪ್ರಾಣಿ ಯನ್ನಾಗಿ ಮಾಡಬೇಕು. ಈ ಮೂಲಕ ಆತಂಕವಾದ ಹೋಗಿ ಅನುಕಂಪವಾದ ಆಗಬೇಕು ಎಂದು ಪೇಜಾವರ ಸ್ವಾಮೀಜಿ ಹೇಳಿದರು.

ಒಂದೆಡೆ ಮಸೀದಿಗೆ ಮಹಿಳೆಯರಿಗೆ ಪ್ರವೇಶವಿಲ್ಲ. ಇನ್ನೊಂದೆಡೆ ಶಬರಿಮಲೆಗೆ ಮಹಿಳೆಯರ ಪ್ರವೇಶಬೇಕೆಂಬ ಒತ್ತಾಯ ಇದೆ. ಈ ಕುರಿತು ಸುಪ್ರೀಂ ಕೋರ್ಟಿನ ಏಳು ಸದಸ್ಯರ ಪೀಠ ಸರಿಯಾಗಿ ತೀರ್ಮಾನ ಮಾಡಲಿದೆ. ಕಾಶ್ಮೀರ, ರಾಮಮಂದಿರ ಸಮಸ್ಯೆ ನಿವಾರಣೆಯಾಗಿದ್ದು, ಶೀಘ್ರವೇ ರಾಮಮಂದಿರ ನಿರ್ಮಾಣವಾಗಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News