ಉಡುಪಿ ಜಿಲ್ಲೆಯನ್ನು ಮಾದರಿಯಾಗಿಸಲು ಪ್ರಯತ್ನ: ಶ್ಯಾಮಲಾ ಕುಂದರ್

Update: 2019-11-19 16:27 GMT

ಉಡುಪಿ, ನ.19: ಕಾನೂನಿನ ಚೌಕಟ್ಟಿನೊಳಗೆ ಸರಕಾರದ ವಿವಿಧ ಕಾರ್ಯಕ್ರಮಗಳನ್ನು ಸಮಾಜದ ಎಲ್ಲಾ ವರ್ಗದ ಜನರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ವಿವಿಧ ಇಲಾಖೆಗಳ ಒಗ್ಗೂಡಿಸುವಿಕೆಯಿಂದ ಒದಗಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ಹೇಳಿದ್ದಾರೆ.

ಮಂಗಳವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಎಲ್ಲಾ ಇಲಾಖೆಗಳೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಶ್ಲಾಘಿಸಿದರು.

ಕೇಂದ್ರ ಸರಕಾರದ ಸಖಿ ಒನ್ ಸ್ಟಾಪ್ ಸೆಂಟರ್ ರಾಜ್ಯದಲ್ಲಿ ಪ್ರಥಮವಾಗಿ ಉಡುಪಿ ಜಿಲ್ಲೆಯಲ್ಲಿ ಪ್ರಾರಂಭಗೊಂಡಿದ್ದು, ಇದರ ಪ್ರಯೋಜನದ ಕುರಿತು ಗ್ರಾಮೀಣ ಮಟ್ಟದಲ್ಲಿ ಪೂರ್ಣ ಪ್ರಮಾಣದ ಮಾಹಿತಿ ಹಾಗೂ ಪ್ರಚಾರ ದೊರೆತು ನೊಂದ ಮಹಿಳೆಯರಿಗೆ ಅಗತ್ಯ ನೆರವು ದೊರಕಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ವಿದ್ಯಾರ್ಥಿಗಳಿಗೆ, ಶಾಲೆಗಳಲ್ಲಿ ಮತ್ತು ವಿವಿಧ ಇಲಾಖೆಗಳ ಹಾಸ್ಟೆಲ್‌ಗಳಲ್ಲಿ ಸಂಪೂರ್ಣ ರಕ್ಷಣೆ, ಜಾಗೃತಿ ಕಾರ್ಯಕ್ರಮ, ಸೈಬರ್ ಕ್ರೈಮ್ ಮತ್ತು ಮೊಬೈಲ್ ಬಳಕೆಯ ಕುರಿತು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಮಾನಸಿಕ ತೊಂದರೆಯುಳ್ಳ ಮಹಿಳೆಯರಿಗೆ ಪ್ರತ್ಯೇಕ ಪುನರ್ವಸತಿ ಕೇಂದ್ರದ ಅವಶ್ಯಕತೆ ಇದ್ದು, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ನಡೆಯಲ್ಪಡುವ ಸವಿರುಚಿ ಕ್ಯಾಂಟೀನ್ ಉದ್ಯೋಗಿನಿ, ಸಮೃದ್ಧಿ, ಧನಶ್ರೀ, ಚೇತನಾ ಯೋಜನೆಗಳ ಪ್ರಗತಿ ಪರಿಶೀಲಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಎಸ್‌ಪಿ ಕುಮಾರ್ ಚಂದ್ರ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಎಲ್. ಗೊನ್ಸಾಲ್ವಿಸ್ ಸ್ವಾಗತಿಸಿದರು. ಪ್ರಭಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವೀಣಾ ವಿವೇಕಾನಂದ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News