ನಕಲಿ ಸಹಿ ಮಾಡಿ ದಾಖಲೆ ಸೃಷ್ಟಿ ಆರೋಪ :ಅಮಾನತುಗೊಂಡ ಸಿಬ್ಬಂದಿಯಿಂದ ಗ್ರಾ.ಪಂ. ಅಧ್ಯಕ್ಷ, ಪಿಡಿಒ ವಿರುದ್ಧ ದೂರು

Update: 2019-11-19 17:16 GMT

ಉಪ್ಪಿನಂಗಡಿ: ಕರ್ತವ್ಯ ಲೋಪದ ಆರೋಪದಡಿಯಲ್ಲಿ ಅಮಾನತುಗೊಂಡಿರುವ ಕಾಣಿಯೂರು ಗ್ರಾ.ಪಂ. ಸಿಬ್ಬಂದಿಯೋರ್ವರು ಗ್ರಾ.ಪಂ. ಅಧ್ಯಕ್ಷ ಹಾಗೂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿರುದ್ಧ ನಕಲಿ ಸಹಿ ಮಾಡಿದ ದಾಖಲೆಗಳನ್ನು ಸೃಷ್ಟಿಸಿದ್ದಾರೆಂದು ಆಪಾದಿಸಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ ಘಟನೆ ವರದಿಯಾಗಿದೆ.

ಬೆಳ್ತಂಗಡಿ ತಾಲೂಕು ಕಾಣಿಯೂರು ಗ್ರಾಮದ  ಪದ್ಮುಂಜ ಮನೆ ನಿವಾಸಿ ಕಾಸಿಂ ಎ. ಯಾನೆ ಎ. ಇಬ್ರಾಹೀಂ ಎಂಬವರು ದೂರು ನೀಡಿದವರು.

ಘಟನೆಯ ವಿವರ: ಕಾಣಿಯೂರು ಗ್ರಾ.ಪಂ.ನ ಪಂಪು ನಿರ್ವಾಹಕರಾಗಿ ಕೆಲಸ ಮಾಡಿಕೊಂಡಿದ್ದ ಕಾಸಿಂ ಎ. ಯಾನೆ ಇಬ್ರಾಹೀಂ ಅವರನ್ನು ಕರ್ತವ್ಯ ಲೋಪದ ಆರೋಪದಡಿ ಪಂಚಾಯತ್ ಆಡಳಿತವು ಸೇವೆಯಿಂದ ಅಮಾನತುಗೊಳಿಸಿತ್ತು. ಈ ಅಮಾನತು ಪ್ರಕ್ರಿಯೆ ಕಾನೂನುಬದ್ಧವಲ್ಲವೆಂದು ಉಲ್ಲೇಖೀಸಿ ಕಾಸಿಂ ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯರಿಗೆ ಮೇಲ್ಮನವಿ ಸಲ್ಲಿಸಿದ್ದರು.

ಇದಕ್ಕೆ ಸಂಬಂಧಿಸಿ ಪಂಚಾಯತ್ ಅಧ್ಯಕ್ಷ  ಹಾಗೂ ಪಿಡಿಒ ರವರಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಚೇರಿಂದ ಅಗತ್ಯ ದಾಖಲೆಗಳನ್ನು ಬಯಸಿ ನೊಟೀಸು ಜಾರಿ ಮಾಡಲಾಗಿತ್ತು. ಈ ಸಂದರ್ಭ ತನ್ನನ್ನು  ಕಾನೂನು ಸಮ್ಮತವಾಗಿ ಅಮಾನತುಗೊಳಿಸಲಾಗಿದೆ ಎಂದು ಸಾಬೀತು ಪಡಿಸಲು ಪಂಚಾಯತ್ ಆಡಳಿತವು ಕಾರಣ ಕೇಳಿ ನೋಟೀಸು ಜಾರಿ ಮಾಡಿರುವುದನ್ನು ಹಾಗೂ ಸದ್ರಿ ನೋಟೀಸಿನಲ್ಲಿ  ನನ್ನ  ಸಹಿಯನ್ನು ಬೇರೆ ಯಾರೋ ಹಾಕಿದ್ದು, ನನ್ನ ಸಹಿಯನ್ನು ನಕಲು ಮಾಡಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಆಪಾದಿಸಿರುವ ಕಾಸಿಂ ಎ. ಅವರು,   ಈ ಕೃತ್ಯಕ್ಕೆ ಸಂಬಂಧಿಸಿ ಪಂಚಾಯತ್ ಅಧ್ಯಕ್ಷ ಸುನಿಲ್ ಎ. ಸಾಲಿಯಾನ್, ಹಾಗೂ ಪಿಡಿಒ ಗೌರಿ ಶಂಕರ ಸನಕಲ್ಲ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ಸ್ವೀಕರಿಸಿರುವ ಉಪ್ಪಿನಂಗಡಿ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News