ಪ್ರತೀ ಶಾಲೆಗಳಿಗೆ ನೋಟ್‍ಪ್ಯಾಡ್, ಡೋಂಗಲ್: ಶಾಸಕ ರಾಜೇಶ್ ನಾಯ್ಕ್

Update: 2019-11-19 18:31 GMT

ಬಂಟ್ವಾಳ, ನ. 19: ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶಾಸಕ ರಾಜೇಶ್ ಯು. ನಾಯ್ಕ್ ನೇತೃತ್ವದಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಹಲವು ವಿಚಾರಗಳು ಚರ್ಚೆಯಾದವು.

ಕಂಪ್ಯೂಟರ್ ಬೇಡಿಕೆ, ಇಂಟರ್‍ನೆಟ್, ಆನ್‍ಲೈನ್ ನೋಂದಣಿ, ಆರ್‍ಟಿಸಿ ಸಮಸ್ಯೆ ಸಹಿತ ವಿವಿಧ ಸಮಸ್ಯೆಗಳ ಶಿಕ್ಷಕರು ಶಾಸಕರಿಗೆ ತಿಳಿಸಿದಾಗ, ತಾಲೂಕಿನ ಪ್ರಾಥಮಿಕ ಶಾಲೆಗಳ ಶಿಕ್ಷಕರು ಆನ್‍ಲೈನ್ ನೋಂದಣಿಗಾಗಿ ಸೈಬರ್‍ಗಳಿಗೆ ಎಡತಾಕುವುದನ್ನು ತಪ್ಪಿಸುವ ಸಲುವಾಗಿ ಪ್ರತಿ ಶಾಲೆಗೆ ನೋಟ್‍ಪ್ಯಾಡ್ ಹಾಗೂ ಡೋಂಗಲ್ ಒದಗಿಸಲಾಗುವುದು ಶಾಸಕ ರಾಜೇಶ್ ನಾಯ್ಕ್ ಭರವಸೆ ನೀಡಿದರು. 

ಈ ಬಗ್ಗೆ ಅಂದಾಜು ವೆಚ್ಚದೊಂದಿಗೆ ಪಟ್ಟಿ ನೀಡುವಂತೆ ಬಿಇಒ ಜ್ಞಾನೇಶ್ ಅವರಲ್ಲಿ ಶಾಸಕರು ಸೂಚಿಸಿದಾಗ, ಒಂದು ಶಾಲೆಗೆ ತಲಾ 10 ಸಾವಿರ ರೂ.ಗಳಂತೆ ಸುಮಾರು 15 ಲಕ್ಷ ರೂ.ಬೇಕಾಗುತ್ತದೆ ಎಂದರು. ಇದರ ಖರೀದಿಗೆ ವೇತನೇತರ ಹಾಗೂ ಶಾಸಕರ ಅನುದಾನ ಒದಗಿಸುವುದಾಗಿ ಶಾಸಕರು ತಿಳಿಸಿದರು.

ಸರಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುವುದು ಹೆಮ್ಮೆ ಎನಿಸುವಂತೆ ಶಿಕ್ಷಕರು ಶಿಕ್ಷಣ ನೀಡಬೇಕು ಗುಣಮಟ್ಟದ ಶಿಕ್ಷಣ ಒದಗಿಸಬೇಕು. ವಿದ್ಯಾರ್ಥಿಗಳು ಪ್ರೌಢಶಾಲೆಗೆ ಬರುವಾಗ ಕಲಿಕೆಯಲ್ಲಿ ಹಿಂದುಳಿಯುವಂತಾಗಿ ಪ್ರೌಢಶಾಲಾ ಶಿಕ್ಷಕರಿಗೆ ಸಮಸ್ಯೆ ಉಂಟಾಗಬಾರದು ಎಂದು ಶಾಸಕರು ತಿಳಿಸಿದರು.

ಬಂಟ್ವಾಳ ತಾಲೂಕಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಉಳಿದ ತಾಲೂಕುಗಳಿಗಿಂತ ಕಡಿಮೆಯಾಗಲು ಪ್ರಾಥಮಿಕ ಶಿಕ್ಷಣದ ಸಲಹೆ ಹಾಗೂ ಉತ್ತಮ ಫಲಿತಾಂಸ ವಿಚಾರದಲ್ಲಿ ಸಲಹೆಗಳನ್ನು ಶಾಸಕರು ಕೇಳಿದಾಗ ಶಿಕ್ಷಕರು ತಮ್ಮ ಸಮಸ್ಯೆಗಳನ್ನು ವಿವರಿಸಿದರು.

ಪುಣಚ ಗ್ರಾಮದಲ್ಲಿರುವ ನಾಲ್ಕು ಶಾಲೆಗಳಲ್ಲಿ 2-3 ಶಿಕ್ಷಕರು ಪಾಠ ಮಾಡುವ ಪರಿಸ್ಥಿತಿ ಎದುರಾಗಿದೆ. ಈಗಿರುವಾಗ ಕಡಿಮೆ ಮಕ್ಕಳ ಸಂಖ್ಯೆಯಿರುವ ಶಾಲೆಗಳನ್ನು ಒಂದುಗೂಡಿಸಿದಾಗ ಉತ್ತಮ ಶಿಕ್ಷಣ ನೀಡಲು ಸಾಧ್ಯ ಎಂದು ಶಿಕ್ಷಕರೊಬ್ಬರು ಸಲಹೆಯಿತ್ತರೆ, ಇನ್ನು ಕೆಲ ಶಿಕ್ಷಕರು 7ನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ನಡೆಸುವಂತೆ ಹಾಗೂ ಎಲ್ಲ ಮಕ್ಕಳನ್ನು ಉತ್ತೀರ್ಣ ವ್ಯವಸ್ಥೆಯ ಬಗ್ಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಶಿಕ್ಷಕರ ಕೊರತೆಗಳನ್ನು ಸರಿದೂಗಿಸಲು ಶಿಕ್ಷಕರಿಗೆ ಮಲ್ಟಿಕ್ಲಾಸ್ ತರಬೇತಿಯನ್ನು ನೀಡಲಾಗಿದೆ. ಅದಲ್ಲದೆ, ವಿಷಯವಾರರು ಹೊಂದಾಣಿಕೆ ಮಾಡುಕೊಂಡು ಹೋಗಬೇಕು. ಅದನ್ನು ಬಿಟ್ಟು ಶಿಕ್ಷಕರು ಕೇವಲ ಆರೋಪಗಳನ್ನು ಮಾಡುತ್ತಾ ಹೋದರೆ ತಮ್ಮ ಜವಾಬ್ದಾರಿಯನ್ನು ನುನುಚಿಕೊಂಡತಾಗುತ್ತದೆ ಎಂದರು.

ಕ್ಷೇತ್ರದ ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ಇರುವುದರ ಕುರಿತು ಬಿಇಒ ಗಮನಕ್ಕೆ ತರಲು ಸೂಚಿಸಿದ ಶಾಸಕ, ಈ ಕುರಿತು 10 ದಿನಗಳಲ್ಲಿ ಅಧಿಕಾರಿಗಳ ಸಭೆ ಕರೆಯುವುದಾಗಿ ಹೇಳಿದರು. 

ಸಜಿಪಮೂಡಾ ಗ್ರಾಮದ ಕೊಳಕೆ ಶಾಲೆಯ ಬದಿಯ ಗುಡ್ಡೆ ಜರಿದು ಶಾಲಾ ಕಟ್ಟಡಕ್ಕೆ ಹಾನಿಯಾಗಿರುವ ಬಗ್ಗೆ ದೂರುಗಳು ಬಂದಿದೆ. ಮಣ್ಣು ತೆರವು ಕಾರ್ಯವನ್ನು ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಶಾಸಕರನ್ನು ಒತ್ತಾಯಿಸಿದಾಗ, ಶೀಘ್ರ ಮಣ್ಣು ತೆರವುಗೊಳಿಸಿ ಶೀಘ್ರ ದುರಸ್ಥಿ ಕಾರ್ಯನಡೆಸುವುದಾಗಿ ತಿಳಿಸಿದರು.

ಮಳೆಹಾನಿಯಿಂದಾಗಿ ತುರ್ತು ವ್ಯವಸ್ಥೆ ಕಲ್ಪಿಸುವ ಶಾಲೆಗಳನ್ನು ಗುರುತಿಸಿ ವರದಿ ನೀಡುವಂತೆ ಶಾಸಕರು ಬಿಇಒ ಸೂಚಿಸಿದರು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಕ್ಷೇತ್ರ ಸಂಪನ್ಮೂಲ ಸಮಯನ್ವಧಿಕಾರಿ ರಾಧಾಕೃಷ್ಣ ಭಟ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News