ಮೂಲರಪಟ್ನ ತೂಗುಸೇತುವೆಗೆ ಬಸ್ ಸಂಚರಿಸುವಂತೆ ಸ್ಥಳೀಯರಿಂದ ಡಿಸಿಗೆ ಒತ್ತಾಯ

Update: 2019-11-20 03:46 GMT

ಬಜಪೆ : ಮಂಗಳೂರು ಮತ್ತು ಬಂಟ್ವಾಳ ತಾಲೂಕುಗಳನ್ನು ಸಂಪರ್ಕಿಸುವ ಪ್ರಮುಖ ಸೇತುವೆಯಾಗಿದ್ದ ಮೂಲರಪಟ್ನ ಸೇತುವೆ ಒಂದು ವರ್ಷದ ಹಿಂದೆ ಕುಸಿದು ಎರಡೂ ಭಾಗದ ಸಂಪರ್ಕ ಕಡಿತ ಗೊಂಡ ನಂತರ ನದಿ ದಾಟಲು ಇಲ್ಲಿನ ತೂಗುಸೇತುವೆಯನ್ನು ಸಾರ್ವಜನಿಕರು ಬಳಸುತ್ತಿದ್ದಾರೆ. 

ಈ ಕುಸಿದ ತೂಗುಸೇತುವೆ ನದಿಯಲ್ಲಿ ಸುಮಾರು ನೂರೈವತ್ತರಿಂದ ಇನ್ನೂರು ಮೀಟರ್ ಕೆಳಭಾಗದಲ್ಲಿದ್ದು, ಮುತ್ತೂರು ಮತ್ತು  ಮೂಲರಪಟ್ನ, ಮುಖ್ಯ ರಸ್ತೆಯಿಂದ ತೂಗುಸೇತುಯವರೆಗೆ ಬಸ್ಸುಗಳು ಸಂಚರಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಈ ಎರಡೂ ಕಡೆಯಿಂದ ತೂಗು ಸೇತುವೆವರೆಗೆ ಬರುವ ರಸ್ತೆಗಳು ಕಚ್ಚಾ ರಸ್ತೆಗಳಾಗಿದ್ದ ಕಾರಣದಿಂದ, ಬಸ್ಸುಗಳು ಸಂಚರಿಸಲು ಅಸಾಧ್ಯವಾಗಿತ್ತು. ಇದೀಗ ಎರಡೂ ಭಾಗ ತೂಗುಸೇತುವೆವರೆಗಿನ ರಸ್ತೆಗಳು ಕಾಂಕ್ರೀಟೀಕರಣಗೊಂಡಿದ್ದರೂ, ಬಂಟ್ವಾಳದಿಂದ ಮೂಲರಪಟ್ನಕ್ಕೆ ಬರುವ ಬಸ್ಸುಗಳು ತೂಗುಸೇತುವೆವರೆಗೆ ಬಾರದೆ ಮಸೀದಿ ಬಳಿ ಪ್ರಯಾಣಿಕರನ್ನು ಇಳಿಸುತ್ತಿದ್ದು, ಇದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದ್ದು, ಈ ಬಸ್ಸುಗಳು ತೂಗುಸೇತುವೆವರೆಗೆ ಸಂಚರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮೂಲರ ಪಟ್ನ ದಿಂದ ಬಸ್ಸುಗಳು ತೂಗುಸೇತುವೆವರೆಗೆ ಸಂಚರಿಸುವವರೆಗೆ ನೀವು ಸಂಚರಿಸಬೇಡಿ ಎಂದು ಮುತ್ತೂರು ಭಾಗದಲ್ಲಿ ತೂಗುಸೇತುವೆವರೆಗೆ ಸಂಚರಿಸತ್ತಿರುವ ಬಸ್ಸುಗಳನ್ನು ಸಾರ್ವಜನಿಕರು ಕೆಲಕಾಲ ಮುತ್ತೂರು ಮುಖ್ಯರಸ್ತೆಯಲ್ಲಿ ತಡೆದ ಪ್ರಸಂಗವೂ  ಸೋಮವಾರ ಬೆಳಗ್ಗೆ ನಡೆದಿದೆ. ಸುಸಜ್ಜಿತವಾದ ಕಾಂಕ್ರೀಟು ರಸ್ತೆ ನಿರ್ಮಿಸಿದ್ದರೂ, ಸಂಚಾರವನ್ನು ಮೊಟಕು ಗೊಳಿಸಿರುವ ಬಸ್ಸುಗಳು ತೂಗುಸೇತುವರೆಗೆ ಸಂಚರಿಸುವಂತೆ ಸೂಚಿಸಬೇಕೆಂದು ಜಿಲ್ಲಾಧಿಕಾರಿಗಳನ್ನು ಸಾರ್ವಜನಿಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News