ಕ್ಯಾಂಪ್ಕೋದಿಂದ ಸೃಜನಾತ್ಮಕ ಪ್ರಚಾರ ಅಭಿಯಾನ : ಹೊಸ ಉತ್ಪನ್ನ ಸ್ಪೈಸ್ ಟೋಫಿ ಮಾರುಕಟ್ಟೆಗೆ

Update: 2019-11-20 11:24 GMT

ಮಂಗಳೂರು, ನ. 20: ಸ್ವಾದಿಷ್ಟ ಚಾಕಲೇಟ್‌ಗಳಿಗೆ ಹೆಸರುವಾಸಿಯಾಗಿರುವ ಕ್ಯಾಂಪ್ಕೋ ಸಂಸ್ಥೆಯು ಇದೇ ಪ್ರಥಮ ಬಾರಿಗೆ 60 ಸೆಕೆಂಡ್‌ಗಳ ಸೃಜನಾತ್ಮಕ ಪ್ರಚಾರ ಅಭಿಯಾನವನ್ನು ಆರಂಭಿಸಿದೆ.

ಕ್ಯಾಂಪ್ಕೋ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, 60 ಸೆಕೆಂಡ್‌ಗಳ ಈ ಚಿತ್ರದ ಮೂಲಕ ಮುದ್ರಣ, ರೇಡಿಯೋ, ದೃಶ್ಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಲಾಗುವುದು ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ತಿಳಿಸಿದರು.

ಪ್ರತಿ ಸವಾಲಿನ ಸಂದರ್ಭದಲ್ಲೂ ಆತ್ಮವಿಶ್ವಾಸದೊಂದಿಗೆ ಅದನ್ನು ಎದುರಿಸಲು ಜೊತೆಯಾಗುವ ಕಾಂಪ್ಕೋ ಕುರಿತಾದ ಈ ಪ್ರಚಾರವು ಇಂಗ್ಲಿಷ್ ಹಾಗೂ ಹಿಂದಿಯ ಜತೆಗೆ ಕನ್ನಡ ಸೇರಿದಂತೆ ಐದು ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರವಾಗಲಿದೆ.

ಅಭಿಯಾನದಲ್ಲಿ ಯಾವುದೇ ಸೆಲೆಬ್ರಿಟಿಗಳನ್ನು ಬಳಸದೆ ಸಾಮಾಜಿಕ ಜಾಲತಾಣಗಳಿಂದ ನಿಜ ಜೀವನದ ಆದರ್ಶ ಪಾತ್ರಗಳ ಮೂಲಕ ಈ ಪ್ರಚಾರ ಅಭಿಯಾನವನ್ನು ತಯಾರಿಸಲಾಗಿದೆ. ಚೆನ್ನೈನ ಹೆವಿ ಡಿಜಿಟಲ್ಸ್‌ನ ಕಾರ್ತಿಕ್ ಶೇಖರ್ ಅಭಿಯಾನ ನಿರ್ದೇಶಿಸಿದ್ದಾರೆಂದು ಅಭಿಯಾನದ ಬಗ್ಗೆ ಕ್ಯಾಂಪ್ಕೋ ವ್ಯವಸ್ಥಾಪಕಿ ರೇಷ್ಮಾ ಮಲ್ಯ ಮಾಹಿತಿ ನೀಡಿದರು.

ಇದೇ ವೇಳೆ ಇಂದು ನೈಸರ್ಗಿಕ ಕರಿಮೆಣಸಿನ ಪುಡಿ ಹಾಗೂ ಶುಂಠಿ ಸಾರ ಸಕ್ಕರೆ ಆಧಾರಿತ ಸಿಪರ್‌ನಿಂದ ತಯಾರಿಲ್ಪಟ್ಟ ಕ್ಯಾಂಪ್ಕೋದ ಹೊಸ ಉತ್ಪನ್ನ ಸ್ಪೈಸ್ ಟೋಫಿಯನ್ನು ಎಸ್.ಆರ್. ಸತೀಶ್ಚಂದ್ರರವರು ಬಿಡುಗಡೆಗೊಳಿಸಿದರು. ದೇಹದ ಸಮತೋಲನ ಕಾಪಾಡುವಲ್ಲಿ, ದೇಹವನ್ನು ತಂಪಾಗಿರಿಸುವಲ್ಲಿ ಮತ್ತು ದಣಿವು ನೀಗಿಸುವಲ್ಲಿ ಈ ಟೋಫಿ ಸಹಕಾರಿ ಎಂದು ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶ ಎಂ. ಸುರೇಶ್ ಭಂಡಾರಿ ತಿಳಿಸಿದರು.

ಸದ್ಯ ಇದಕ್ಕೆ ಸಕ್ಕರೆಯನ್ನು ಬಳಸಲಾಗಿದ್ದು, ಮೂರು ತಿಂಗಳೊಳಗೆ ಬೆಲ್ಲದ ಮಿಶ್ರಣದಲ್ಲಿ ಈ ಟೋಫಿ ತಯಾರಿಸಲಾಗುವುದು. ಇಂದು ಬಿಡುಗಡೆಗೊಂಡ ಚಾಕಲೇಟ್‌ನಲ್ಲಿ ಶೇ. 3ರಷ್ಟು ಶುಂಠಿ ಹಾಗೂ ಕರಿಮೆಣಸಿನ ಪುಡಿಯನ್ನು ಬಳಸಲಾಗಿದೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಶಂ.ನಾ.ಖಂಡಿಗೆ, ನಿರ್ದೇಶಕರಾದ ಕಿದೂರು ಶಂರನಾರಾಯಣ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News