ರಾಮ್‌ದೇವ್ ಹರಡುತ್ತಿರುವ ಮೌಢ್ಯದ ವೈರಸ್

Update: 2019-11-21 05:40 GMT

ಯೋಗ ಮನುಷ್ಯನ ದೇಹ ಮತ್ತು ಮನಸ್ಸು ಎರಡನ್ನು ಸಮಸ್ಥಿತಿಯಲ್ಲಿಡುತ್ತದೆ ಎಂದು ಹಿರಿಯ ಯೋಗಿಗಳು ಹೇಳಿದ್ದಾರೆ. ಒಬ್ಬ ನಿಜವಾದ ಯೋಗಿ ತನ್ನ ದೇಹದ ಮೇಲೆ ಮಾತ್ರವಲ್ಲ, ಮನಸ್ಸಿನ ಮೇಲೂ ನಿಯಂತ್ರಣ ಹೊಂದಿರುತ್ತಾನೆ. ಆತನು ಆಡುವ ಮಾತುಗಳೇ ಆತನ ಒಳಗಿನ ವ್ಯಕ್ತಿತ್ವವನ್ನು ಯೋಗ ಹೇಗೆ ರೂಪಿಸಿದೆ ಎನ್ನುವುದಕ್ಕೆ ಕನ್ನಡಿ. ಆದರೆ ತನ್ನನ್ನು ತಾನು ‘ಯೋಗ ಪಟು’ ಎಂದು ಸ್ವಯಂ ಘೋಷಿಸಿಕೊಂಡಿರುವ ಬಾಬಾ ರಾಮ್‌ದೇವ್ ಇತ್ತೀಚೆಗೆ ಮಾಧ್ಯಮಗಳಲ್ಲಿ, ಸಾರ್ವಜನಿಕ ವೇದಿಕೆಗಳಲ್ಲಿ ಆಡುತ್ತಿರುವ ಮಾತುಗಳು ಸ್ವತಃ ರಾಮ್‌ದೇವ್‌ರ ಯೋಗವನ್ನೇ ಪ್ರಶ್ನಿಸುವಂತಿವೆ. ಅಪ್ಪಟ ರಾಜಕಾರಣಿಯಂತೆ, ನಕಲಿ ವಿಜ್ಞಾನಿಯಂತೆ ಹೇಳಿಕೆಗಳನ್ನು ನೀಡುತ್ತಾ ಸ್ವಯಂ ಹಾಸ್ಯಾಸ್ಪದರಾಗುತ್ತಿದ್ದಾರೆ ಮಾತ್ರವಲ್ಲ, ಸಮಾಜದ ಶಾಂತಿ ಸೌಹಾರ್ದಗಳಿಗೂ ಭಂಗ ಉಂಟು ಮಾಡುತ್ತಿದ್ದಾರೆ. ಜೊತೆಗೆ ವಿಜ್ಞಾನ, ಆಹಾರದ ವಿಷಯದಲ್ಲಿ ತಪ್ಪು ಮಾಹಿತಿಗಳನ್ನು ನೀಡುತ್ತಾ, ತನ್ನನ್ನು ನಂಬಿ ಬಂದ ಸಹಸ್ರಾರು ಅಮಾಯಕರನ್ನು ದಾರಿ ತಪ್ಪಿಸುತ್ತಿದ್ದಾರೆ. ತನ್ನ ಸ್ವಾರ್ಥಕ್ಕಾಗಿ ಇಡೀ ದೇಶವನ್ನೇ ವೌಢ್ಯ ಮತ್ತು ಅಜ್ಞಾನದ ಕಡೆಗೆ ತಳ್ಳುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ.

ಬಾಬಾ ರಾಮ್‌ದೇವ್ ಸಾರ್ವಜನಿಕ ಹೇಳಿಕೆಗಳನ್ನು ವೈಯಕ್ತಿಕ ಎಂದು ನಿರ್ಲಕ್ಷಿಸುವಂತಿಲ್ಲ. ಯಾಕೆಂದರೆ ಸರಕಾರದ ಜೊತೆಗೆ ಬೇರೆ ಬೇರೆ ರೂಪದಲ್ಲಿ ನಿಕಟ ಸಂಬಂಧವನ್ನು ಅವರು ಹೊಂದಿದ್ದಾರೆ. ಪತಂಜಲಿಯ ಉತ್ಪನ್ನಕ್ಕಾಗಿ ಸರಕಾರದಿಂದ ಹಲವು ರೀತಿಯಲ್ಲಿ ಆರ್ಥಿಕ ಸವಲತ್ತುಗಳನ್ನು ಬಾಚಿಕೊಂಡಿದ್ದಾರೆ. ನಮ್ಮ ರಕ್ಷಣಾ ಇಲಾಖೆಯಲ್ಲೂ ಅವರು ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನುವುದೇ ಸರಕಾರದೊಂದಿಗೆ ಅವರ ಸಂಬಂಧದ ಆಳವನ್ನು ಹೇಳುತ್ತದೆ. ಉತ್ತರ ಪ್ರದೇಶವೂ ಸೇರಿದಂತೆ ದೇಶಾದ್ಯಂತ ಜನಸಾಮಾನ್ಯರ ಆರೋಗ್ಯದ ಹೆಸರಿನಲ್ಲಿ ಅಪಾರ ಸೌಲಭ್ಯಗಳನ್ನು ಬಾಚಿಕೊಂಡಿದ್ದಾರೆ. ಸರಕಾರ ಆರೋಗ್ಯಕ್ಕಾಗಿ ಮೀಸಲಿಟ್ಟ ಹಣವನ್ನು ಆಯುಷ್ ಮೂಲಕವೂ ಜೋಳಿಗೆಗಿಳಿಸುತ್ತಿದ್ದಾರೆ. ಬಾಬಾ ರಾಮ್‌ದೇವ್ ಯಾವುದೇ ಜನೋಪಯೋಗಿ ಉತ್ಪನ್ನಗಳನ್ನು ಉತ್ಪಾದಿಸದೆ, ವೈಜ್ಞಾನಿಕವಾಗಿ ಸಾಬೀತಾಗದ ಬರೀ ಭಾವನಾತ್ಮಕ ತಳಹದಿಯ ಮೇಲೆ ನಿಂತ ಉತ್ಪನ್ನಗಳನ್ನು ಉತ್ಪಾದಿಸಿ ಕೋಟ್ಯಂತರ ರೂಪಾಯಿಗಳನ್ನು ದೋಚುತ್ತಿದ್ದಾರೆ. ಇದರಿಂದ ದೇಶದ ಆರ್ಥಿಕತೆಗೆ ಅಥವಾ ಆರೋಗ್ಯಕ್ಕಾಗಿರುವ ಪ್ರಯೋಜನ ಶೂನ್ಯ. ಉದ್ಯಮಿಯಾಗಿಯೂ ಸನ್ಯಾಸಿ ವೇಷದಲ್ಲಿ ಓಡಾಡುತ್ತಿರುವ ರಾಮ್‌ದೇವ್ ಇದೀಗ ವಿಜ್ಞಾನ ಮತ್ತು ವೈಚಾರಿಕತೆಯ ಮೇಲೆ ನೇರ ದಾಳಿಯನ್ನು ಶುರುಹಚ್ಚಿದ್ದಾರೆ. ಪತಂಜಲಿ ಉತ್ಪನ್ನಗಳು ಇತ್ತೀಚಿನ ದಿನಗಳಲ್ಲಿ ಹಳ್ಳ ಹಿಡಿದಿರುವುದರಿಂದ ಅವರು ಜನರನ್ನು ತಲುಪಲು ವಿವಾದಾತ್ಮಕ ಮಾತುಗಳನ್ನು ಅವಲಂಬಿಸಲು ಹೊರಟಂತಿದೆ.

  ವೈಚಾರಿಕತೆಯ ಮೇಲೆ ರಾಮ್‌ದೇವ್ ಎರಡು ರೀತಿಯಲ್ಲಿ ದಾಳಿ ನಡೆಸಿದ್ದಾರೆ. ಒಂದು ಪೆರಿಯಾರ್ ಅವರನ್ನು ಬಹಿರಂಗವಾಗಿ ನಿಂದಿಸುವ ಮೂಲಕ. ದಕ್ಷಿಣ ಭಾರತದಲ್ಲಿ ದ್ರಾವಿಡ ಚಳವಳಿಯನ್ನು ಹುಟ್ಟು ಹಾಕಿದ, ಪುರೋಹಿತ ಶಾಹಿ ವ್ಯವಸ್ಥೆಯನ್ನು ಕಟುವಾಗಿ ವಿರೋಧಿಸುತ್ತಾ ಶಿಕ್ಷಣ, ಸ್ವಾತಂತ್ರದ ಕುರಿತಂತೆ ಮಾತನಾಡಿದ ಪೆರಿಯಾರ್ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದಾರೆ. ಜನರನ್ನು ಧರ್ಮ, ನಂಬಿಕೆಗಳ ಹೆಸರಿನಲ್ಲಿ ವಂಚಿಸುವ ನಕಲಿ ಬಾಬಾಗಳನ್ನು ಕಟುವಾಗಿ ಟೀಕಿಸುತ್ತಿದ್ದ ಪೆರಿಯಾರ್ ಅವರು ರಾಮ್‌ದೇವ್‌ರಂತಹ ಬಾಬಾಗಳಿಗೆ ಭಯೋತ್ಪಾದಕರಂತೆ ಕಂಡರೆ ಅದರಲ್ಲಿ ಅಚ್ಚರಿಯಿಲ್ಲ. ಆದರೆ ಇಷ್ಟಕ್ಕೇ ರಾಮ್‌ದೇವ್ ಹೇಳಿಕೆ ನಿಲ್ಲುವುದಿಲ್ಲ. ಒಂದು ವೇಳೆ ಈಗ ಪೆರಿಯಾರ್ ಬದುಕಿದ್ದಿದ್ದರೆ ಅವರಿಗೆ ಚಪ್ಪಲಿಯಲ್ಲಿ ಥಳಿಸುತ್ತಿದ್ದರಂತೆ. ಬಹುಶಃ ದಕ್ಷಿಣ ಭಾರತದಲ್ಲಿ ಪೆರಿಯಾರ್ ಬೇರು ಎಷ್ಟು ಆಳವಾಗಿದೆ ಎನ್ನುವ ಪ್ರಜ್ಞೆ ರಾಮ್‌ದೇವ್ ಅವರಿಗೆ ಇದ್ದಂತಿಲ್ಲ. ದಲಿತರು, ಶೂದ್ರರ ಅಸಂಘಟಿತ ಸ್ಥಿತಿಯೇ ಇಂದು ರಾಮ್‌ದೇವ್‌ಗೆ ಪೆರಿಯಾರ್ ಕುರಿತಂತೆ ಇಷ್ಟೊಂದು ಕೀಳು ಭಾಷೆಯಲ್ಲಿ ಮಾತನಾಡಲು ಧೈರ್ಯ ನೀಡಿದೆ. ಪೆರಿಯಾರ್ ಕುರಿತ ರಾಮ್‌ದೇವ್ ಹೇಳಿಕೆಗೆ ದೇಶಾದ್ಯಂತ ಟೀಕೆಗಳು ವ್ಯಕ್ತವಾಗಿವೆ. ಪೆರಿಯಾರ್ ವಿರುದ್ಧ ಆಡಿದ ಮಾತುಗಳು, ತಮಿಳುನಾಡಿನಲ್ಲಂತೂ ದುಷ್ಕರ್ಮಿಗಳಿಗೆ ಕುಮ್ಮಕ್ಕು ಕೊಟ್ಟಂತೆಯೇ ಸರಿ. ಇದೇ ಸಂದರ್ಭದಲ್ಲಿ ತನ್ನ ಕ್ಷೇತ್ರಕ್ಕೆ ಸಂಬಂಧಪಡದ ವಿಷಯಗಳನ್ನು ಸಾರ್ವಜನಿಕ ಸಭೆಗಳಲ್ಲಿ ಆಡಿ ಅಮಾಯಕರನ್ನು ದಾರಿ ತಪ್ಪಿಸುವ ಕೆಲಸವನ್ನು ರಾಮ್‌ದೇವ್ ಮಾಡುತ್ತಿದ್ದಾರೆ.

ತುಳಸಿ ದಳವನ್ನು ಮೊಬೈಲ್‌ನ ಕವರ್‌ನಲ್ಲಿ ಇಟ್ಟರೆ ರೇಡಿಯೇಶನನ್ನು ತಡೆಯಬಹುದು ಎಂದು ರಾಮ್‌ದೇವ್ ಹೇಳಿದ್ದಾರೆ. ರೇಡಿಯೇಶನ್ ಕುರಿತಂತೆ ಇವರು ಯಾವ ಕಾಲೇಜಿನಲ್ಲಿ ಅಧ್ಯಯನಮಾಡಿದ್ದಾರೆ? ಇವರು ಓದಿರುವ ವಿಜ್ಞಾನ ಕಾಲೇಜು ಯಾವುದು? ವಿಜ್ಞಾನದಲ್ಲಿ ಇವರು ಸಾಧಿಸಿದ ಸಾಧನೆಗಳೇನು? ರೇಡಿಯೇಶನ್ ಕುರಿತಂತೆ ಇವರಿಗೆ ಏನೇನು ತಿಳಿದಿದೆ? ಅದನ್ನು ಎಲ್ಲಿ ಕಲಿತು ಬಂದಿದ್ದಾರೆ? ಈ ಪ್ರಾಥಮಿಕ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲದ ರಾಮ್‌ದೇವ್ ರೇಡಿಯೇಶನ್‌ನಂತಹ ವಿಷಯಗಳಿಗೆ ಪರಿಹಾರವನ್ನು ನೀಡಲು ಹೊರಟಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ವೈಜ್ಞಾನಿಕವಾಗಿ ಸಾಬೀತಾಗದ, ವಿಜ್ಞಾನದ ಮುಂದೆ ಅತ್ಯಂತ ಹಾಸ್ಯಾಸ್ಪದವಾಗಿರುವ ಇಂತಹ ಚಿಂತನೆಗಳನ್ನು ಹೊಸ ತಲೆಮಾರಿನ ತರುಣರ ತಲೆಗೆ ಹೇರುವುದು ದೇಶ ವಿರೋಧಿ ಕೃತ್ಯವಲ್ಲವೇ? ಈ ಮೂಲಕ ರಾಮ್‌ದೇವ್ ಏನನ್ನು ಸಾಬೀತು ಮಾಡಲು ಹೊರಟಿದ್ದಾರೆ. ಅವರು ನೀಡಿರುವ ಇನ್ನೊಂದು ಹೇಳಿಕೆ ವಿಜ್ಞಾನ ಮತ್ತು ಆರೋಗ್ಯ ಶಾಸ್ತ್ರದ ತಲೆಯ ಮೇಲೆ ಹೊಡೆದಂತಿದೆ. ‘‘ಮೊಟ್ಟೆ ತಿನ್ನ ಬಾರದು. ಅದರಲ್ಲಿ ಯಾವುದೇ ಪ್ರೊಟೀನ್ ಇಲ್ಲ. ಕೋಳಿಯ ಮಲ ವಿಸರ್ಜನಾ ದ್ವಾರದಿಂದ ಹೊರಬರುವ ಕಲ್ಮಶ ಅದು...’’ ಎಂದು ಸಾರ್ವಜನಿಕ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಕೋಳಿಯ ವಿಸರ್ಜನಾ ಸ್ಥಳದಿಂದ ಬರುವ ಕಾರಣದಿಂದ ಮೊಟ್ಟೆ ಕೋಳಿಯ ಮಲವೇ ಹೊರತು ಆಹಾರವಲ್ಲ, ಅದನ್ನು ತಿನ್ನಬೇಡಿ ಎಂದು ಕರೆ ನೀಡುವ ಇವರು, ಅದೇ ಸಂದರ್ಭದಲ್ಲಿ ಗೋವಿನ ಮಲ ವಿಸರ್ಜನೆ, ಮೂತ್ರವನ್ನು ಕುಡಿಯುವುದಕ್ಕೆ ಸಲಹೆ ನೀಡುತ್ತಾರೆ.

ಈ ಹೇಳಿಕೆಯ ಹಿಂದಿರುವ ದುರುದ್ದೇಶ ಸ್ಪಷ್ಟ. ಆ ಮೂಲಕ, ಮಧ್ಯಾಹ್ನದ ಬಿಸಿಯೂಟಕ್ಕೆ ಮೊಟ್ಟೆ ವಿತರಿಸುವುದನ್ನು ತಡೆಯುವ ಹುನ್ನಾರವನ್ನು ಮಾಡುತ್ತಿದ್ದಾರೆ. ಇಂದು ಯಾವುದೇ ವೈದ್ಯರು, ಆರೋಗ್ಯಪೂರ್ಣವಾಗಿರಲು ಮೊಟ್ಟೆಯನ್ನು ತಿನ್ನಲು ಸಲಹೆ ನೀಡುತ್ತಾರೆ. ದುರಂತವೆಂದರೆ, ಅಪೌಷ್ಟಿಕತೆ ತಾಂಡವವಾಡುತ್ತಿರುವ ಇಂದಿನ ದಿನಗಳಲ್ಲಿ ಮೊಟ್ಟೆಯ ಕುರಿತಂತೆ ರಾಮ್‌ದೇವ್‌ನಂತಹ ಸನ್ಯಾಸಿಗಳು ತಪ್ಪು ಮಾಹಿತಿಗಳನ್ನು ಹರಡುತ್ತಿದ್ದಾರೆ. ದೇಶದಲ್ಲಿ ಇನ್ನಷ್ಟು ಅಪೌಷ್ಟಿಕತೆ, ಅನಾರೋಗ್ಯಗಳನ್ನು ಹರಡಲು ಮುಂದಾಗಿದ್ದಾರೆ. ಇಲ್ಲಿಗೇ ರಾಮ್‌ದೇವ್‌ನ ಸಂಶೋಧನೆ ನಿಲ್ಲುವುದಿಲ್ಲ. ಮಾಂಸದ ಕುರಿತಂತೆಯೂ ಇದೇ ವಿತಂಡವಾದವನ್ನು ಮಾಡುತ್ತಾರೆ. ‘‘ಗೋಮಾಂಸವನ್ನು ತಿನ್ನುವ ಬದಲು ನಾಯಿ, ಕತ್ತೆಯ ಮಾಂಸವನ್ನು ತಿನ್ನಿ’’ ಎಂದು ಕರೆ ನೀಡುವ ಇವರು, ಈ ದೇಶದ ಬಹುಸಂಖ್ಯಾತ ಮಾಂಸಾಹಾರಿಗಳ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ.

ಗೋಮಾಂಸ ಸೇವನೆಯಿಂದ ವಿಶ್ವದ ತಾಪಮಾನ ಏರಿದೆ ಎನ್ನುವುದು ಇವರ ಇನ್ನೊಂದು ಸಂಶೋಧನೆ. ಗೋಮಾಂಸದಿಂದ ತಾಪಮಾನ ಜಾಸ್ತಿಯಾಗಿದೆಯೆಂದಾದರೆ, ಗೋಮಾಂಸ ರಫ್ತು ಮಾಡುವುದನ್ನು ನಿಷೇಧಿಸಲು ಸರಕಾರವನ್ನು ಒತ್ತಾಯಿಸಲಿ. ಅದರ ಬದಲು, ಆಹಾರದ ಕೊರತೆಯನ್ನು ಎದುರಿಸುತ್ತಿರುವ ದೇಶವಾಸಿಗಳಿಗೇಕೆ ಅವರು ಸಲಹೆ ನೀಡುತ್ತಿದ್ದಾರೆ? ಮರಗಿಡಗಳನ್ನು ಕಡಿಯುವುದರಿಂದ ತಾಪಮಾನ ಹೆಚ್ಚಳವಾಗುತ್ತಿದೆ. ಸಸ್ಯಾಹಾರ ಸೇವನೆಯೂ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿರುವುದರಿಂದ ಅದನ್ನು ಬಿಟ್ಟು ಬಿಡಿ ಎಂದು ಕರೆ ನೀಡಿದರೆ ರಾಮ್‌ದೇವ್ ಸಸ್ಯಾಹಾರ ತ್ಯಜಿಸಲು ಸಿದ್ಧರಿದ್ದಾರೆಯೇ? ಯಾರೂ ಮಾಂಸಕ್ಕಾಗಿ ಗೋವುಗಳನ್ನು ಸಾಕುವುದಿಲ್ಲ. ಹೈನೋದ್ಯಮದಲ್ಲಿ ಬಳಕೆಗೆ ಬಾರದ ಗೋವುಗಳನ್ನಷ್ಟೇ ಮಾಂಸಾಹಾರಕ್ಕೆ ಬಳಸುತ್ತಾರೆ. ಇದು ಹೈನೋದ್ಯಮಕ್ಕೆ ಪೂರಕವಾಗಿದೆ.

ಇಂದು ರಾಮ್‌ದೇವ್ ಅವರ ತಪ್ಪು ಮಾಹಿತಿ, ಈ ದೇಶದಲ್ಲಿ ಅಪೌಷ್ಟಿಕತೆಯನ್ನು ಹೆಚ್ಚಿಸುತ್ತಿರುವುದು ಮಾತ್ರವಲ್ಲ, ಹೈನೋದ್ಯಮವನ್ನು ನಷ್ಟಕ್ಕೀಡು ಮಾಡುತ್ತಿದೆ.. ಅತ್ತ ವಿಜ್ಞಾನಿಯೂ ಅಲ್ಲದ, ಇತ್ತ ಸನ್ಯಾಸಿಯೂ ಅಲ್ಲದ, ಪೂರ್ಣ ಪ್ರಮಾಣದ ಉದ್ಯಮಿಯಾಗಿಯೂ ಗುರುತಿಸಿಕೊಳ್ಳದ ರಾಮ್‌ದೇವ್ ಈ ದೇಶದ ಅರ್ಥಶಾಸ್ತ್ರ, ತತ್ವಶಾಸ್ತ್ರ, ವಿಜ್ಞಾನ ಎಲ್ಲವನ್ನು ಕೆಡಿಸುತ್ತಿರುವ ಅಪಾಯಕಾರಿ ವ್ಯಕ್ತಿಯಾಗಿ ರೂಪಾಂತರಗೊಂಡಿದ್ದಾರೆ. ಮೊತ್ತ ಮೊದಲು ಇವರಿಗೆ ನೀಡುತ್ತಿವ ಸವಲತ್ತುಗಳನ್ನು ಸರಕಾರ ಹಿಂಪಡೆಯಬೇಕು. ಜೊತೆಗೆ ಅವೈಜ್ಞಾನಿಕತೆಯನ್ನು ಹರಡುವ ಇವರ ವಿರುದ್ಧ ಮೊಕದ್ದಮೆ ದಾಖಲಿಸಿ, ಅವರ ಬಾಯಿ ಮುಚ್ಚಿಸುವ ಕಾರ್ಯ ತಕ್ಷಣ ನಡೆಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News