ಮಂಗಳೂರು : ನ.23ರಂದು ಸುಸಜ್ಜಿತ ಕ್ರೀಡಾಂಗಣ 'ಬ್ಯಾರೀಸ್ ಅರೆನಾ' ಉದ್ಘಾಟನೆ

Update: 2019-11-20 18:46 GMT

ಮಂಗಳೂರು, ನ. 20 : ಇಲ್ಲಿನ ಇನೋಳಿಯಲ್ಲಿರುವ ಬ್ಯಾರೀಸ್ ನಾಲೆಜ್ ಕ್ಯಾಂಪಸ್ ನಲ್ಲಿ ಬ್ಯಾರೀಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪಕ್ಕದಲ್ಲಿ ಸುಸಜ್ಜಿತ ಕ್ರೀಡಾಂಗಣ 'ಬ್ಯಾರೀಸ್ ಅರೆನಾ' ಸಿದ್ಧವಾಗಿದ್ದು ನವೆಂಬರ್ 23ರಂದು ಬೆಳಗ್ಗೆ 9.30ಕ್ಕೆ ಅದು ಉದ್ಘಾಟನೆಗೊಳ್ಳಲಿದೆ.

ಈ ವಿಶೇಷವಾಗಿ ರೂಪಿಸಲಾದ ಕ್ರೀಡಾಂಗಣದಲ್ಲಿ ಹಲವಾರು ಪರಿಸರ ಸ್ನೇಹಿ ಅಂಶಗಳಿವೆ. ಇಲ್ಲಿ ಅಳವಡಿಸಲಾಗಿರುವ ಅಂಡರ್ ಡೆಕ್ ಡ್ರಿಪ್ ಇರಿಗೇಷನ್ ಸಿಸ್ಟಮ್ ನಿಂದ ಒಟ್ಟಾರೆ ನೀರಿನ ಬಳಕೆ 90% ಕಡಿಮೆಯಾಗಲಿದೆ.

ಮಾಜಿ ಸಚಿವ ಯು ಟಿ ಖಾದರ್, ಮಂಗಳೂರು ಪೊಲೀಸ್ ಆಯುಕ್ತ ಡಾ. ಪಿಎಸ್ ಹರ್ಷ, ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗದ ಅಧ್ಯಕ್ಷ ಹಾಗು ನಿರ್ದೇಶಕ ಡಾ. ಕಿಶೋರ್ ಕುಮಾರ್ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರು ಹಾಗು ಸುತ್ತಮುತ್ತಲ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಫುಟ್ಬಾಲ್ ಟೂರ್ನಮೆಂಟ್ ಒಂದನ್ನು ಹೊಸ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

"ನಿಜವಾದ ಸಂಪತ್ತು ಆರೋಗ್ಯದಲ್ಲಿದೆ, ಚಿನ್ನ, ಬೆಳ್ಳಿಗಳಲ್ಲಿ ಅಲ್ಲ" ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಹಾಗು ಸಂತುಲಿತ ವ್ಯಕ್ತಿತ್ವ ರೂಪಿಸುವಲ್ಲಿ ಅವರ ಅರೋಗ್ಯದ ಪಾತ್ರ ಮಹತ್ವವಾಗಿದೆ. ಇದಕ್ಕಾಗಿ ಈ ವಿಶಾಲ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಶಿಕ್ಷಣ, ಉದ್ಯಮಶೀಲತೆ ಹಾಗು ಪರಿಸರ ಇವುಗಳು ಜೊತೆಜೊತೆಗೆ ಸಮಾಜದಲ್ಲಿ ಬೆಳೆಯಬೇಕು ಎಂಬ ಬ್ಯಾರೀಸ್ ಆಶಯಗಳಿಗೆ ಅನುಗುಣವಾಗಿ ಈ ಹೊಸ ಅತ್ಯಾಧುನಿಕ ಕ್ರೀಡಾಂಗಣ ನಿರ್ಮಾಣವಾಗಿದೆ" ಎಂದು ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News