ಸುರತ್ಕಲ್‌ನಲ್ಲಿ ಕಾಂಗ್ರೆಸ್ ನಿರ್ನಾಮಕ್ಕೆ ಮೊಯ್ದಿನ್ ಬಾವಾ ನೇರ ಹೊಣೆ: ಹುಸೈನ್ ಕಾಟಿಪಳ್ಳ

Update: 2019-11-21 08:27 GMT

ಮಂಗಳೂರು, ನ.21: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ವ್ಯಾಪ್ತಿಗೆ ಒಳಪಡುವ 23 ಕ್ಷೇತ್ರಗಳಲ್ಲಿ ಕೇವಲ ಒಂದು ಸ್ಥಾನ ಮಾತ್ರ ಗೆದ್ದು ಪಕ್ಷದ ಹೀನಾಯ ಸೋಲಿಗೆ ಮಾಜಿ ಶಾಸಕ ಮೊಯ್ದಿನ್ ಬಾವಾ ಅವರೇ ನೇರ ಹೊಣೆ ಎಂದು ಬ್ಲಾಕ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಹುಸೈನ್ ಕಾಟಿಪಳ್ಳ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮೊಯ್ದಿನ್ ಬಾವಾ ಇನ್ನಾದರೂ ಕಾಂಗ್ರೆಸ್‌ನಿಂದ ದೂರವಾಗಬೇಕು ಮತ್ತು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ಎಲ್ಲರೂ ರಾಜೀನಾಮೆ ನೀಡಬೇಕು ಒಂದು ಒತ್ತಾಯಿಸಿದರು.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಿಂದಲೇ ಪಕ್ಷವನ್ನು ಸಂಘಟಿಸಿದ ನಮ್ಮೆಲ್ಲಾ ಕಾರ್ಯಕರ್ತರನ್ನು ದೂರ ಮಾಡಿದ್ದರಿಂದಲೇ ಪಕ್ಷಕ್ಕೆ ಹಿನ್ನಡೆಯಾಗಿದೆ. ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಅವರನ್ನು ಕಡೆಗಣಿಸಿದ್ದಲ್ಲದೆ, ಪಕ್ಷದಲ್ಲಿ ದುಡಿದ ಕಾರ್ಯಕರ್ತರಿಗೆ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ಅವರು ಕಾರ್ಯಕರ್ತರಾಗಿ ಪಕ್ಷಕ್ಕೆ ಬಂದವರಲ್ಲ. ಬದಲಾಗಿ ಹಣದ ಪ್ರಭಾವದಿಂದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಬಂದವರು ಎಂದು ಮೊಯ್ದಿನ್ ಬಾವಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಮಹಾನಗರ ಪಾಲಿಕೆ ಚುನಾವಣೆಯಲ್ಲೂ ತಾವು ಕಬೀರ್ ಎಂಬವರಿಗೆ ಬಾಕಿ ಬಿಲ್ ಮೊತ್ತವೊಂದನ್ನು ಪಾವತಿಸಲು ಅಸಾಧ್ಯವಾಗದೆ ಅವರನ್ನು ಸಮಾಧಾನ ಪಡಿಸಲು ಅವರ ಪತ್ನಿಯನ್ನು ಕಣಕ್ಕಿಳಿಸಿದ್ದರು. ಈ ಮೂಲಕ ತೀವ್ರ ಮುಖಭಂಗವನ್ನು ಅನುಭವಿಸಿದ್ದಾರೆ. ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿಯಲ್ಲಿ ಚರ್ಚಿಸದೆ ತಾನೇ ಪಟ್ಟಿ ಮಾಡಿ ಟಿಕೆಟ್ ಹಂಚಿರುವುದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಅವರು ದೂರಿದರು.

ದಿನೇಶ್ ಕೋಡಿಕಲ್ ಮಾತನಾಡಿ, ಮೊಯ್ದಿನ್ ಬಾವರಂತಹ ನಾಯಕರಿಂದ ಪಕ್ಷ ಸಂಘಟನೆ ಅಸಾಧ್ಯ. ಕ್ಷೇತ್ರದಲ್ಲಿ ಬೇರೆ ಯಾರನ್ನಾದರೂ ನೇಮಕ ಮಾಡಿ ತಮಗೆ ಪಕ್ಷದ ಸಂಘಟನೆಗೆ ಕಾರ್ಯ ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ನಾವು ಸೋಲಿಸಿದ್ದು ಕಾಂಗ್ರೆಸ್ಸನ್ನಲ್ಲ, ಮೊಯ್ದಿನ್ ಬಾವಾರನ್ನು!

 ಮಾಜಿ ಮೇಯರ್ ಗುಲ್ಝಾರ್ ಬಾನು ಮಾತನಾಡಿ, ಮಾಜಿ ಶಾಸಕ ಮೊಯ್ದಿನ್ ಬಾವಾ ಮೇಲಿನ ಹಲ್ಲೆ ಘಟನೆಯನ್ನು ಪ್ರಸ್ತಾಪಿಸಿದರು.

‘‘ಅಂದು ನನಗೆ ಟಿಕೆಟ್ ಆಗಿದೆ ಎಂದು ಮಾಜಿ ಶಾಸಕರ ಪಿಎ ಕರೆ ಮಾಡಿದ್ದರಿಂದ ಅಲ್ಲಿಗೆ ಹೋಗಿದ್ದೆವು. ಆದರೆ ಕೊನೆ ಘಳಿಗೆಯಲ್ಲಿ ಟಿಕೆಟ್ ಇಲ್ಲವೆಂದು ಹೇಳಿದಾಗ ನನ್ನ ಪುತ್ರ ಅವರಲ್ಲಿ ಈ ಬಗ್ಗೆ ಪ್ರಶ್ನಿಸಲು ಮುಂದಾಗಿದ್ದರು. ಈ ಸಂದರ್ಭ ಅಲ್ಲಿದ್ದ ವ್ಯಕ್ತಿಯೊಬ್ಬರು ಪುತ್ರನ ಮೇಲೆ ಕೈ ಮಾಡಲು ಮುಂದಾದರು. ಆಗ ನನ್ನ ಪುತ್ರ ಕೂಡಾ ಅವರಿಗೆ ಪ್ರತಿಕ್ರಿಯಿಸಲು ಮುಂದಾದಾಗ ಅದು ತಪ್ಪಿ ಮೊಯ್ದಿನ್ ಬಾವಾಗೆ ಹಲ್ಲೆ ನಡೆದಿತ್ತು. ಈ ಕುರಿತು ಪುತ್ರನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಠಾಣೆಗೆ ವಿಚಾರಿಸಲು ಹೋದಾಗ ನನ್ನ ಮೇಲೂ ಪ್ರಕರಣ ದಾಖಲಾಗಿರುವುದು ತಿಳಿಯಿತು. ಅಂದು ನಾನು ಪಕ್ಷೇತರಳಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆಗೆ ಮುಂದಾಗಿದ್ದೆ. ಅದನ್ನು ತಪ್ಪಿಸಲು ಈ ಹುನ್ನಾರ ನಡೆದಿತ್ತು. ಈ ವಿಷಯವನ್ನು ನನ್ನ ಮಕ್ಕಳು ಶಾಸಕ ಡಾ. ಭರತ್ ಶೆಟ್ಟಿ ಗಮನಕ್ಕೆ ತಂದರು. ಅವರ ಮೂಲಕ ನಾನು ಅಂದು ಹೊರಬರುವಂತಾಗಿ ನಾಮಪತ್ರ ಸಲ್ಲಿಸಿದೆ. ನಾವು ಯಾವತ್ತೂ ಕಾಂಗ್ರೆಸನ್ನು ಸೋಲಿಸಿಲ್ಲ. ಸೋಲಿಸುವುದೂ ಇಲ್ಲ. ನಾವು ಸೋಲಿಸಿದ್ದು ಮೊಯ್ದಿನ್ ಬಾವಾರನ್ನು’’ ಎಂದು ಮಾಜಿ ಮೇಯರ್ ಗುಲ್ಝಾರ್ ಬಾನು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ಬಾವಾ, ಸೌಮ್ಯಾ, ಆಸಿಫ್ ಉಪಸ್ಥಿತರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News