ಡಿಸೈರ್ ಡ್ರಗ್ಸ್ ಜಾಲ ಪತ್ತೆ ಪೊಲೀಸರಿಗೆ ದೊಡ್ಡ ಸವಾಲು: ಎಸ್ಪಿ ನಿಶಾ ಜೇಮ್ಸ್

Update: 2019-11-21 14:17 GMT

ಉಡುಪಿ, ನ. 21: ಶೈಕ್ಷಣಿಕ ಕೇಂದ್ರವಾಗಿರುವ ಮಣಿಪಾಲದಲ್ಲಿ ಮಾದಕ ದ್ರವ್ಯ ಸೇವನೆಯ ಚಟ ಬಹಳಷ್ಟು ಹೆಚ್ಚುತ್ತಿದೆ. ಕೇವಲ ಗಾಂಜಾ ಮಾತ್ರವಲ್ಲದೆ ಕೆಲವು ಸಂಕೀರ್ಣವಾದ ಡಿಸೈನರ್ ಮಾದಕ ದ್ರವ್ಯಗಳನ್ನು ಕೂಡ ಇಲ್ಲಿನ ವಿದ್ಯಾರ್ಥಿಗಳು ಬಳಸುತ್ತಿದ್ದಾರೆ. ಇದನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಬಹಳ ದೊಡ್ಡ ಸವಾಲಿನ ಕೆಲಸವಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಮಣಿಪಾಲ ಕೆಎಂಸಿಯ ಫಾರೆನ್ಸಿಕ್ ಮೆಡಿಸಿನ್ ವಿಭಾಗ ಹಾಗೂ ನ್ಯಾರೋಟಿಕ್ ಮತ್ತು ಸೈಕೋಟ್ರೋಪಿಕ್ ಸಬ್ ಸ್ಟೆನ್ಸಸ್ ಕೇಂದ್ರದ ಸಹಯೋಗದೊಂದಿಗೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಗುರುವಾರ ಉಡುಪಿ ಎಸ್ಪಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ಡಿಸೈನರ್ ಡ್ರಗ್ಸ್ ಪತ್ತೆ ಹಚ್ಚುವಿಕೆ ಕುರಿತ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಗಾಂಜಾ ಹೊರತು ಪಡಿಸಿದರೆ ಬೇರೆ ಯಾವುದೇ ರೀತಿಯ ಸಂಕೀರ್ಣವಾದ ಡಿಸೈನರ್ ಮಾದಕ ದ್ರವ್ಯ ಸೇವನೆ ಪ್ರಕರಣವನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಈವರೆಗೆ ಸಾಧ್ಯವಾಗಿಲ್ಲ. ಹೀಗಾಗಿ ಮಾದಕ ದ್ರವ್ಯ ಜಾಲವನ್ನು ಮಟ್ಟ ಹಾಕಲು ನಮಗೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಈ ಮಾದಕ ದ್ರವ್ಯದ ಕುರಿತು ಪೊಲೀಸ್ ಅಧಿಕಾರಿಗಳಲ್ಲಿರುವ ಮಾಹಿತಿ ಕೊರತೆ ಕೂಡ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮಣಿಪಾಲ ಶಿಕ್ಷಣ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಮಾದಕ ದ್ರವ್ಯ ಇಂದು ಬಹಳ ಗಂಭೀರ ಸಮಸ್ಯೆಯಾಗಿ ಬೆಳೆದಿದ್ದು, ಇದಕ್ಕೆ ಕೇವಲ ಶಿಕ್ಷಣ ಸಂಸ್ಥೆಯಿಂದ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆಯ ಸಹಕಾರ ಅವರಿಗೆ ಅಗತ್ಯವಾಗಿ ಬೇಕಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಾಗಾರವನ್ನು ಉದ್ಘಾಟಿಸಿದ ಮಣಿಪಾಲ ನರ್ಕೋಟಿಕ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್ ಕೇಂದ್ರದ ಮುಖ್ಯಸ್ಥ ಡಾ.ಜಿ.ಶ್ರೀಕುಮಾರ್ ಮೆನನ್ ಮಾತನಾಡಿ, ಆರೋಪಿಯ ರಕ್ತದ ಮಾದರಿಯನ್ನು ಪರೀಕ್ಷಿಸಿದಾಗ ಗಾಂಜಾ ಸೇವನೆಯನ್ನು ದೃಢಪಡಿಸಲು ಸಾಧ್ಯವಾಗುತ್ತದೆ. ಆದರೆ ಡಿಸೈನರ್ ಮಾದಕ ದ್ರವ್ಯ ಸೇವನೆಯನ್ನು ಕೇವಲ ಸಾಮಾನ್ಯ ಪರೀಕ್ಷೆಯಿಂದ ಸುಲಭವಾಗಿ ಪತ್ತೆ ಮಾಡಲು ಸಾಧ್ಯವಿಲ್ಲ. ಹಲವು ಔಷಧಗಳನ್ನು ಸೇರಿಸಿ ಡಿಸೈನರ್ ಮಾದಕ ದ್ರವ್ಯವನ್ನು ತಯಾರಿಸುವುದರಿಂದ ಪರೀಕ್ಷೆಯಲ್ಲಿ ಅದನ್ನು ದೃಢಪಡಿಸಲು ಆಗುತ್ತಿಲ್ಲ. ಇದರಿಂದ ಆರೋಪಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯ ವಾಗುತ್ತಿದೆ ಎಂದರು.

ಪ್ರಸಕ್ತ ಸಂದರ್ಭದಲ್ಲಿ ಹೊಸ ಹೊಸ ಡಿಸೈನರ್ ಮಾದಕ ದ್ರವ್ಯಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ. ಯುಎನ್‌ಒಡಿಸಿ ವರದಿ ಪ್ರಕಾರ 2015ರ ಡಿಸೆಂಬರ್ ಅಂತ್ಯಕ್ಕೆ ನೋಂದಣಿ ಮಾಡಿಕೊಂಡಿರುವ ಜಗತ್ತಿನ 643 ಸೈಕೊ ಆಕ್ಟಿವ್ ಸಬ್‌ಸ್ಟಾನ್ಸ್ ಡಿಸೈನರ್ ಮಾದಕ ದ್ರವ್ಯಗಳು ಮಾರುಕಟ್ಟೆಯಲ್ಲಿ ದೊರೆ ಯುತ್ತಿರುವುದು ಆತಂಕಕಾರಿ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಸಂಶೋಧನೆಗೆ ಬಳಸುವ ರಾಸಾಯನಿಕಗಳ ಮಾದರಿಯಲ್ಲಿರುವ ಡಿಸೈನರ್ ಮಾದಕ ದ್ರವ್ಯಗಳು ಇಂದು ಸುಲಭವಾಗಿ ಮಾದಕ ವ್ಯಸನಿಗಳಿಗೆ ಸಿಗುತ್ತಿವೆ. ಇದು ಗಾಂಜಾ ಸೇವನೆಗಿಂತ 10 ಪಟ್ಟು ಹೆಚ್ಚಿನ ಅಮಲನ್ನು ನೀಡುತ್ತವೆ ಎಂದ ಅವರು, ಇಂದು ಕಾಲೇಜು ವಿದ್ಯಾರ್ಥಿಗಳು ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಲಿಯಾಗುತ್ತಿದ್ದಾರೆ. ಆದುದರಿಂದ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ರಕ್ತದ ಮಾದರಿಯನ್ನು ತಪಾಸಣೆ ಮಾಡುವ ಮೂಲಕ ಇದಕ್ಕೆ ಕಡಿವಾಣ ಹಾಕುವ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಕೆಎಂಸಿಯ ಫೊರೆನ್ಸಿಕ್ ಮೆಡಿಸಿನ್ ಮತ್ತು ಟೋಕ್ಸಿಕಾಲಜಿ ವಿಭಾಗದ ಮುಖ್ಯಸ್ಥ ಡಾ.ವಿನೋದ್ ನಾಯಕ್, ಪ್ರೊಫೆಸರ್ ಡಾ.ವಿಕ್ರಮ್ ಪಲಿಮಾರ್, ಅಸೋಸಿಯೇಟ್ ಪ್ರೊಪೆಸರ್‌ಗಳಾದ ಡಾ.ಶಂಕರ್ ಬಕ್ಕಣ್ಣನವರ್, ಡಾ.ಅಶ್ವಿನಿ ಕುಮಾರ್, ಡಾ.ಅನಿತಾ, ಸಹಾಯಕ ಪ್ರೊಫೆಸರ್ ಡಾ.ನಿರ್ಮಲ ಕಿಶೋರ್ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಸ್ವಾಗತಿಸಿ ವಂದಿಸಿದರು. ಉಡುಪಿ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.

ಪೊಲೀಸ್ ಇಲಾಖೆಯ ವೈಫಲ್ಯ !

ಉಡುಪಿ ನಗರಸಭೆ ವ್ಯಾಪ್ತಿಯ ಮಣಿಪಾಲದಂತಹ ಸಣ್ಣ ಪ್ರದೇಶದಲ್ಲಿ ಮಾದಕ ದ್ರವ್ಯ ಸೇವನೆ ಪ್ರಕರಣವನ್ನು ಹತೋಟಿಗೆ ತರಲು ಈವರೆಗೆ ಸಾಧ್ಯ ವಾಗದೆ ಇರುವುದು ಪೊಲೀಸ್ ಇಲಾಖೆಯ ಬಹಳ ದೊಡ್ಡ ವೈಫಲ್ಯತೆ ಆಗಿದೆ. ಈ ವಿಚಾರದಲ್ಲಿ ಎಷ್ಟೆ ಪ್ರಯತ್ನ ಮಾಡಿದರು ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ. ಮಾಹೆಯ ಕ್ಯಾಂಪಸ್ ಹೊರಗಡೆ ಹಲವು ಪ್ರಕರಣಗಳು ಪತ್ತೆ ಹಚ್ಚಿದ್ದರೂ ಕ್ಯಾಂಪಸ್ ಒಳಗೆ ಈವರೆಗೆ ಒಂದೇ ಒಂದು ಪ್ರಕರಣವನ್ನು ಪತ್ತೆ ಹಚ್ಚಲು ನಮಗೆ ಸಾಧ್ಯವಾಗಿಲ್ಲ. ಇದಕ್ಕೆ ಮಾಹೆಯ ಪ್ರೊತ್ಸಾಹ ಹಾಗೂ ಸಹಕಾರ ಅಗತ್ಯವಾಗಿಬೇಕಾಗಿದೆ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News