ಮುಸ್ಲಿಂ ಸಂಸ್ಕೃತ ಪ್ರೊಫೆಸರ್ ಫಿರೋಝ್ ಖಾನ್‌ಗೆ ಬಿಎಚ್‌ಯು ವಿದ್ಯಾರ್ಥಿಗಳ ಬಹಿರಂಗ ಬೆಂಬಲ

Update: 2019-11-21 15:50 GMT
Photo:Facebook/Firoze Khan

ವಾರಣಾಸಿ, ನ.21: ಸಂಸ್ಕೃತ ಪ್ರೊಫೆಸರ್ ಆಗಿ ಡಾ.ಫಿರೋಝ್ ಖಾನ್ ಅವರ ನೇಮಕಾತಿಯನ್ನು ವಿರೋಧಿಸಿ ಬನಾರಸ್ ಹಿಂದು ವಿವಿ (ಬಿಎಚ್‌ಯು)ಯ ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ ಕಳೆದ 14 ದಿನಗಳಿಂದ ತರಗತಿಗಳು ಅಮಾನತುಗೊಂಡಿರುವ ನಡುವೆಯೇ ವಿವಿಯಲ್ಲಿನ ಹಲವಾರು ವಿದ್ಯಾರ್ಥಿಗಳು ಮತ್ತು ಬೋಧಕರು ಈಗ ಬಹಿರಂಗವಾಗಿಯೇ ಖಾನ್ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಬುಧವಾರ ಸಂಜೆ ಖಾನ್ ಅವರನ್ನು ಬೆಂಬಲಿಸಿ ಜಾಥಾ ನಡೆಸಿದ ಹಲವಾರು ವಿದ್ಯಾರ್ಥಿಗಳು,ಅವರ ವಿರುದ್ಧದ ಪ್ರತಿಭಟನೆ ಅಂತ್ಯಗೊಳ್ಳಬೇಕು ಮತ್ತು ಅವರು ಸಂಸ್ಕೃತವನ್ನು ಬೋಧಿಸಲು ತಕ್ಷಣವೇ ಅವಕಾಶವನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು. ಬಿಎಚ್‌ಯು ಜಂಟಿ ಕ್ರಿಯಾ ಸಮಿತಿಯು ಲಂಕಾ ಗೇಟ್ ಎಂದೇ ಜನಪ್ರಿಯವಾಗಿರುವ ವಿವಿಯ ಮುಖ್ಯ ಪ್ರವೇಶದ್ವಾರದಿಂದ ಆಯೋಜಿಸಿದ್ದ ಜಾಥಾದಲ್ಲಿ ‘ಡಾ.ಫಿರೋಝ್‌ಖಾನ್,ನಾವು ನಿವ್ಮೊಂದಿಗಿದ್ದೇವೆ ’ ಎಂಬ ಬ್ಯಾನರ್ ಹಿಡಿದಿದ್ದ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

 ಡಾ.ಖಾನ್ ಅವರನ್ನು ನ.5ರಂದು ಬಿಎಚ್‌ಯುದ ಸಂಸ್ಕೃತ ವಿದ್ಯಾ ಧರ್ಮ ವಿಜ್ಞಾನ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್ ಆಗಿ ನೇಮಕಗೊಳಿಸಲಾಗಿತ್ತು. ಆದರೆ ಅವರ ನೇಮಕವನ್ನು ರದ್ದುಗೊಳಿಸಬೇಕೆಂಬ ಬೇಡಿಕೆಯೊಂದಿಗೆ ವಿದ್ಯಾರ್ಥಿಗಳು ವಿವಿ ಕುಲಪತಿಗಳ ನಿವಾಸ ಮತ್ತು ಕಚೇರಿಯ ಮುಂದೆ ಧರಣಿ ಪ್ರತಿಭಟನೆ ನಡೆಸುತ್ತಿರುವದರಿಂದ ತರಗತಿಯನ್ನು ತೆಗೆದುಕೊಳ್ಳಲು ಖಾನ್ ಅವರಿಗೆ ಸಾಧ್ಯವಾಗಿಲ್ಲ. ಹಿಂದುಯೇತರ ವ್ಯಕ್ತಿ ಇಂತಹ ವಿಶೇಷ ವಿಭಾಗದಲ್ಲಿ ಬೋಧಿಸುವಂತಿಲ್ಲ ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದ್ದಾರೆ.

ಆದರೆ ಖಾನ್ ಅವರನ್ನು ಆಯ್ಕೆ ಮಾಡಿದವರು,ಅವರು ಅತ್ಯಂತ ಅರ್ಹ ಅಭ್ಯರ್ಥಿಯಾಗಿದ್ದರು ಎಂದು ಸಮರ್ಥಿಸಿದ್ದಾರೆ. ಫಿರೋಝ್ ಖಾನ್ ಅವರನ್ನು ಅವರ ವಿದ್ಯಾರ್ಹತೆಯ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ ಮತ್ತು ಅವರು ಬೋಧಕ ಹುದ್ದೆಗೆ ಅತ್ಯಂತ ಅರ್ಹ ಅಭ್ಯರ್ಥಿಯೂ ಆಗಿದ್ದರು. ಅವರು ಸಂಸ್ಕೃತ ಬೋಧನೆಯ ಸಾಂಪ್ರದಾಯಿಕ ಪಾಠಶಾಲಾ ಪದ್ಧತಿಯಲ್ಲಿ ಅಧ್ಯಯನವನ್ನು ಮಾಡಿದ್ದಾರೆ. ಪಟ್ಟಭದ್ರ ಹಿತಾಸಕ್ತಿಗಳ ಕಾರಣದಿಂದ ಅವರ ನೇಮಕವನ್ನು ವಿರೋಧಿಸಲಾಗುತ್ತಿದೆ ಎಂದು ತಾನು ಭಾವಿಸಿದ್ದೇನೆ ಮತ್ತು ಇಂತಹ ವಿರೋಧಕ್ಕೆ ಮಣೆ ಹಾಕಬಾರದು ಎಂದು ಆಯ್ಕೆ ಸಮಿತಿಯ ಸದಸ್ಯರೂ ಆದ ಭಾರತದ ಅತ್ಯಂತ ಖ್ಯಾತ ಸಂಸ್ಕೃತ ವಿದ್ವಾಂಸರಲ್ಲೋರ್ವ ರಾಗಿರುವ ಪ್ರೊ.ರಾಧಾವಲ್ಲಭ ತ್ರಿಪಾಠಿ ಅವರು ಹೇಳಿದರು.

ತನ್ಮಧ್ಯೆ ವಿವಿ ಆಡಳಿತವು ತಕ್ಷಣ ತರಗತಿಗಳಿಗೆ ಮರಳುವಂತೆ ಸಂಸ್ಕೃತ ವಿಭಾಗದ ವಿದ್ಯಾರ್ಥಿಗಳಿಗೆ ಸೂಚಿಸಿ ಬುಧವಾರ ರಾತ್ರಿ ಪ್ರಕಟಣೆಯೊಂದನ್ನು ಹೊರಡಿಸಿದೆ.

ಪ್ರೊ.ಖಾನ್ ಅವರ ನೇಮಕಕ್ಕೆ ವಿವಿಯು ಬದ್ಧವಾಗಿದೆ. ಈ ಬಗ್ಗೆ ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಹೆಚ್ಚುಕಡಿಮೆ ಮನವರಿಕೆ ಮಾಡಲಾಗಿದೆ. ವಿವಿಯು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ಯುಜಿಸಿಯ ಮಾರ್ಗಸೂಚಿಯಡಿ ಕಾರ್ಯ ನಿರ್ವಹಿಸುತ್ತಿದೆ. ವಿವಿಯು ಯಾವುದೇ ತಪ್ಪು ಮಾಡಿಲ್ಲ ಎಂದು ಬಿಎಚ್‌ಯುದ ಶಿಸ್ತು ಪಾಲನಾಧಿಕಾರಿ ಒ.ಪಿ.ರಾಯ್ ತಿಳಿಸಿದರು.

ಪ್ರೊ.ಖಾನ್ ವಿರುದ್ಧ ಪ್ರತಿಭಟನೆಯನ್ನು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News